ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಂಡ-ಹೆಂಡತಿ ಒಂದೇ ಠಾಣೆಯಲ್ಲಿ ಕೆಲಸ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದರು.
ಕೋರಮಂಗಲ ಕೆಎಸ್ಆರ್ಪಿ ಮೈದಾನದಲ್ಲಿ ನಡೆದ ಪೊಲೀಸ್ ಕವಾಯತಿನಲ್ಲಿ ಅವರು ಭಾಗವಹಿಸಿದರು. ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನ ಸಲುವಾಗಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಸೂದ್, ಪೊಲೀಸರ ಕಲ್ಯಾಣಕ್ಕಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪತಿ-ಪತ್ನಿ ಪೊಲೀಸರಾಗಿದ್ದರೆ ಒಂದೇ ಕಡೆ ಕಾರ್ಯನಿರ್ವಹಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಹಿಂದೆ ಒಂದೇ ಕಡೆ ಕೆಲಸ ಮಾಡುವ ಅವಕಾಶವಿತ್ತು. ಬಳಿಕ ನಾನಾ ಕಾರಣಗಳಿಂದ ಸ್ಥಗಿತವಾಗಿತ್ತು. ಹೀಗಾಗಿ ಮತ್ತೆ ಅನುಮತಿ ನೀಡಲು ಕೇಳಿದ್ದು, ಸರ್ಕಾರ ಮನವಿ ಪೂರೈಸುವ ಸಾಧ್ಯತೆಯಿದೆ ಎಂದರು.