ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿಕೆ ಬೆಂಗಳೂರು :ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಬಿಟ್ ಕಾಯಿನ್ ಪ್ರಕರಣವನ್ನ ಉನ್ನತಮಟ್ಟದ ತನಿಖೆಗೊಳಪಡಿಸುವಂತೆ ರಾಜ್ಯ ಡಿಜಿ & ಐಜಿಪಿ ಅಲೋಕ್ ಮೋಹನ್ರಿಗೆ ಬೆಂಗಳೂರು ಪೊಲೀಸ್ ಇಲಾಖೆ ಪತ್ರ ಬರೆದಿದೆ. ಹಗರಣದ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಂಚನೆ ಜಾಲವಿರುವ ಸಂಶಯ ಹಾಗೂ ಪರಿಣಿತ ವಿಧಿ ವಿಧಾನಗಳಿಂದ ಕೃತ್ಯ ಎಸಗಿರುವುದರಿಂದ ಪ್ರಕರಣದ ತನಿಖೆಯನ್ನ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಪ್ರಕರಣದ ಕುರಿತು ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, 'ಪ್ರಕರಣದಲ್ಲಿ ಈಗಾಗಲೇ ತನಿಖೆಯಾಗಿ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿರುವುದು ಒಂದು ಹಂತ. ಆದರೆ, ಇದರಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ಸ್ ಪಾತ್ರವಿದೆ. ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಸಹ ಹ್ಯಾಕ್ ಮಾಡಲಾಗಿದೆ. ಆದ್ದರಿಂದ ಹೆಚ್ಚಿನ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದೇವೆ. ಯಾರಿಂದ ತನಿಖೆಯಾಗಬೇಕು ಎಂಬುದು ಸರ್ಕಾರ ಮತ್ತು ಡಿಜಿ & ಐಜಿಪಿ ಅವರ ಮಟ್ಟದಲ್ಲಿ ನಿರ್ಧಾರವಾಗಲಿದೆ' ಎಂದರು.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದ ಕುರಿತು ಕಾಟನ್ ಪೇಟೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಮುಖ ಆರೋಪಿಯಾಗಿದ್ದ. ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‍ಫಾರ್ಮ್‍ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್ ಕಾಯಿನ್‍ಗಳನ್ನು ಕದ್ದಿದ್ದ ಎಂದು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದರು.
ಓದಿ:ಬಿಟ್ ಕಾಯಿನ್ ಪ್ರಕರಣದಲ್ಲಿ ಏನನ್ನೂ ಮುಚ್ಚಿಡಲ್ಲ, ಯಾರನ್ನೂ ರಕ್ಷಿಸಲ್ಲ: ಆರಗ ಜ್ಞಾನೇಂದ್ರ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ: ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ನೇಮಕಾತಿ ಅಕ್ರಮಗಳ ತನಿಖೆಗೆ ಎಸ್ಐಟಿ ರಚಿಸಿವ ಬಗ್ಗೆ ಜೂನ್ 16ರಂದು ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಆ ಮೂಲಕ ಬಿಜೆಪಿ ಸರ್ಕಾರದ ಹಗರಣಗಳ ಆರೋಪಗಳನ್ನು ತನಿಖೆಗೆ ಒಳಪಡಿಸಿ ಬಿಜೆಪಿಯನ್ನು ಮತ್ತಷ್ಟು ಕಟ್ಟಿ ಹಾಕಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿತ್ತು.
ಪಿಎಸ್ಐ ನೇಮಕಾತಿ ಅಕ್ರಮ, ವಿವಿಧ ನೇಮಕಾತಿ ಅಕ್ರಮಗಳ ತನಿಖೆಗೆ ಎಸ್ಐಟಿ ರಚನೆ ಮಾಡುವ ಬಗ್ಗೆ ಕೆಲ ಸಚಿವರು ಇಂಗಿತ ವ್ಯಕ್ತಪಡಿಸಿದ್ದಾರೆ. ಹಿಂದೆ ನಾವು ಹಗರಣಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಈಗ ತನಿಖೆ ಸೂಕ್ತವಾಗಿ ಮಾಡದಿದ್ದರೆ ಹೊಂದಾಣಿಕೆ ರಾಜಕಾರಣ ಎನ್ನುತ್ತಾರೆ. ಹೀಗಾಗಿ ತಕ್ಷಣವೇ ವಿಶೇಷ ತನಿಖಾ ತಂಡ ಮಾಡಿ ತನಿಖೆ ನಡೆಸುವಂತೆ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪಿಸಲಾಗಿತ್ತು.
ಸಂಪುಟ ಸಭೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಸಚಿವ ಕೃಷ್ಣ ಭೈರೇಗೌಡ ತನಿಖೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. ಸಚಿವರಿಬ್ಬರ ಮಾತಿಗೆ ದಿನೇಶ್ ಗುಂಡೂರಾವ್ ಕೂಡ ದನಿಗೂಡಿಸಿದ್ದಾರೆ. ಈ ಬಗ್ಗೆ ಮುಂದಿನ ಕ್ಯಾಬಿನೆಟ್ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ಅಕ್ರಮ, ನೇಮಕಾತಿ ಅಕ್ರಮಗಳು ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ಹೋರಾಟ, ಅಭಿಯಾನಗಳನ್ನೂ ನಡೆಸಿತ್ತು. ಪ್ರಮುಖವಾಗಿ ಶೇ 40 ಪರ್ಸೆಂಟ್ ಕಮಿಷನ್ ಅಕ್ರಮ, ಬಿಟ್ ಕಾಯಿನ್ ಅಕ್ರಮ, ಪಿಎಸ್ಐ ನೇಮಕಾತಿ ಅಕ್ರಮ, ಉಪನ್ಯಾಸಕ ನೇಮಕಾತಿ ಅಕ್ರಮ ಸೇರಿದಂತೆ ಹಲವು ನೇಮಕಾತಿಯಲ್ಲಿನ ಅಕ್ರಮದ ಬಗ್ಗೆ ಕಾಂಗ್ರೆಸ್ ದೊಡ್ಡ ಮಟ್ಟಿನ ಆರೋಪ ಮಾಡಿತ್ತು.