ಬೆಂಗಳೂರು:ನನಗೆ ನೀಡಿರುವ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಮಾಧಾನ ತಂದಿಲ್ಲ. ಈ ಸ್ಥಾನ ಬದಲಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿರುವುದಾಗಿ ಹಾವೇರಿ ಶಾಸಕ ನೆಹರು ಓಲೇಕಾರ್ ತಿಳಿಸಿದ್ದಾರೆ.
ವಿಧಾನಸೌಧ ಮುಂಭಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನನಗೆ ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ. ನನಗೆ ಇದು ಬೇಡ, ಬೇರೆ ನಿಗಮ ನೀಡಿ ಎಂದು ಮುಖ್ಯಮಂತ್ರಿ ಅವರನ್ನು ಕೋರಿದ್ದೇನೆ. ಇದು ಸಾಧ್ಯವಾಗದಿದ್ದರೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿ ಎಂದು ಕೇಳಿದ್ದೇನೆ. ಈ ಕುರಿತು ಮಧ್ಯಾಹ್ನ ಮಾತನಾಡೋಣ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದರು.
ಬಿಡಿಎ ಅಥವಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ನನ್ನದು. ಅದು ಸಾಧ್ಯವಾಗದಿದ್ದರೆ ಶಾಸಕನಾಗಿಯೇ ಮುಂದುವರಿಯುತ್ತೇನೆ. ಈಗಾಗಲೇ ನಮ್ಮ ಜಿಲ್ಲೆಯವರು ಇಬ್ಬರು ಸಚಿವರಿದ್ದಾರೆ. ಇವರ ಜೊತೆ ಇದೀಗ ಶಂಕರ್ ಅವರಿಗೂ ಸಚಿವ ಸ್ಥಾನ ನೀಡುವ ಭರವಸೆ ಕೊಡಲಾಗಿದೆ. ಅವರಿಗೆ ಸಚಿವ ಸ್ಥಾನ ನೀಡಿದರೆ ನಾಲ್ವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಅಲ್ಲದೆ ನಿರೀಕ್ಷೆ ಮಾಡುವುದು ಕೂಡ ಸರಿಯಲ್ಲ. ಒಂದೊಮ್ಮೆ ಶಂಕರ್ ಗೆ ಸಚಿವ ಸ್ಥಾನ ನೀಡದಿದ್ದರೆ ತಮಗೆ ಅವಕಾಶ ನೀಡುವಂತೆ ಕೋರಿಕೊಳ್ಳುತ್ತೇನೆ ಎಂದು ಓಲೆಕಾರ್ ಹೇಳಿದ್ರು.