ಬೆಂಗಳೂರು: ಕೊರೊನಾ ನಿಯಂತ್ರಣ ಮಾಡಲು ಲಾಕ್ಡೌನ್ ಜಾರಿ ಮಾಡಿದ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ವೃತ್ತಿನಿರತ ವಕೀಲ ಸಮುದಾಯಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಬೆಂಗಳೂರು ವಕೀಲರ ಸಂಘ(ಎಎಬಿ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಅವರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಕೀಲರು ವೃತ್ತಿಯಲ್ಲಿ ನಿರತರಾಗಿದ್ದು, ಅವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದಿಂದ ಬಂದಿರುವ ಯುವ ವಕೀಲರಾಗಿದ್ದಾರೆ. ಈ ವಕೀಲರಲ್ಲಿ ಹೆಚ್ಚಿನವರು ತಮ್ಮ ದೈನಂದಿನ ವೃತ್ತಿಯಲ್ಲಿ ಸಿಗುವ ಆದಾಯವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಇದೀಗ ಕೋರ್ಟ್ಗಳಿಗೆ ರಜೆ ಘೋಷಿಸಿದ್ದು, ದಿನನಿತ್ಯದ ಆದಾಯ ಇಲ್ಲವಾಗಿದೆ. ಬಹುತೇಕ ಯುವ ವಕೀಲರು ಬಾಡಿಗೆ ಮನೆ, ಪಿಜಿಗಳಲ್ಲಿ ವಾಸವಾಗಿದ್ದಾರೆ. ಆದಾಯವಿಲ್ಲದ ವಕೀಲರು ಮನೆ ಬಾಡಿಗೆ, ಕಚೇರಿ ಬಾಡಿಗೆ ಕೊಡಲಾಗದೆ, ಜೀವನ ನಿರ್ವಹಣೆಗೆ ತೊಂದರೆ ಅನುಭವಿಸಿದ್ದಾರೆ. ಈ ಹಿನ್ನೆಲೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲ ಸಮುದಾಯಕ್ಕೆ ನೆರವು ನೀಡುವಂತೆ ಬೆಂಗಳೂರು ವಕೀಲರ ಸಂಘ ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಿದೆ. ಆದರೆ, ಈವರೆಗೂ ಪರಿಹಾರ ಘೋಷಣೆ ಮಾಡಿಲ್ಲ. ಪಕ್ಕದ ತೆಲಂಗಾಣ ಸರ್ಕಾರ ವಕೀಲ ಸಮುದಾಯಕ್ಕೆ ನೆರವು ನೀಡಲು 25 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅದೇ ರೀತಿ ರಾಷ್ಟ್ರದ ಹಲವು ರಾಜ್ಯ ಸರ್ಕಾರಗಳು ವೃತ್ತಿನಿರತ ವಕೀಲರ ನೆರವಿಗೆ ಮುಂದಾಗಿವೆ. ಹೀಗಾಗಿ ಕಷ್ಟದಲ್ಲಿರುವ ರಾಜ್ಯದ ವೃತ್ತಿನಿರತ ವಕೀಲ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ ನೆರವು ನೀಡಬೇಕೆಂದು ಸಂಘ ಮನವಿ ಮಾಡಿದೆ.