ಬೆಂಗಳೂರು: ಲಾಕ್ಡೌನ್ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ವಕೀಲ ಸಮುದಾಯಕ್ಕೆ ತುರ್ತು ಹಣಕಾಸು ನೆರವು ನೀಡಬೇಕೆಂದು ಕೋರಿ ರಾಜ್ಯ ವಕೀಲರ ಪರಿಷತ್ತಿನ ನಿಯೋಗ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಲಿಖಿತ ಮನವಿ ಸಲ್ಲಿಸಿದೆ.
ವಕೀಲರಿಗೆ ಆರ್ಥಿಕ ನೆರವು ಕೋರಿ ಪರಿಷತ್ತಿನಿಂದ ಸಿಎಂ ಬಿಎಸ್ವೈಗೆ ಮನವಿ - ಕರ್ನಾಟಕ ಹೈಕೋರ್ಟ್
ಲಾಕ್ಡೌನ್ ಆದೇಶದ ಬಳಿಕ ವಕೀಲರು ಸಹ ಮನೆಯಲ್ಲಿಯೇ ಕಾಲ ಕಳೆಯುವಂತಾಗಿತ್ತು. ಕೋರ್ಟ್ಗಳು ಬಂದ್ ಆಗಿದ್ದರಿಂದಾಗಿ ರಾಜ್ಯದ ವಕೀಲರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ರಾಜ್ಯ ವಕೀಲರ ಪರಿಷತ್ತಿನ ನಿಯೋಗ ಇಂದು ಸಿಎಂ ಬಿಎಸ್ವೈ ಅವರನ್ನು ಭೇಟಿ ಮಾಡಿದ್ದು, ಆರ್ಥಿಕ ನೆರವು ನೀಡುವಂತೆ ಲಿಖಿತ ಮನವಿ ಮಾಡಿಕೊಂಡಿದ್ದಾರೆ.
![ವಕೀಲರಿಗೆ ಆರ್ಥಿಕ ನೆರವು ಕೋರಿ ಪರಿಷತ್ತಿನಿಂದ ಸಿಎಂ ಬಿಎಸ್ವೈಗೆ ಮನವಿ Appeal to CM BSY from the council of lawyers for financial assistance](https://etvbharatimages.akamaized.net/etvbharat/prod-images/768-512-7262891-767-7262891-1589888351907.jpg)
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಜೆ.ಎಂ.ಅನಿಲ್ ಕುಮಾರ್, ಉಪಾಧ್ಯಕ್ಷರಾದ ಎನ್.ಶಿವಕುಮಾರ್ ಹಾಗೂ ಪರಿಷತ್ ಹಿರಿಯ ಸದಸ್ಯರಾದ ಆರ್.ರಾಜಣ್ಣ ಮತ್ತಿತರರನ್ನು ಒಳಗೊಂಡ ನಿಯೋಗ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಅರ್ಜಿಯಲ್ಲಿ, ಲಾಕ್ಡೌನ್ ಬಳಿಕ ರಾಜ್ಯದ ಎಲ್ಲ ಕೋರ್ಟ್ಗಳಿಗೆ ರಜೆ ಘೋಷಿಸಲಾಗಿದ್ದು, ವಕೀಲರಿಗೆ ಕೆಲಸ ಮತ್ತು ಸಂಪಾದನೆ ಇಲ್ಲವಾಗಿದೆ. ವಕೀಲರಲ್ಲಿ ಅತಿ ಹೆಚ್ಚು ಮಂದಿ ಗ್ರಾಮೀಣ ಪ್ರದೇಶಗಳಿಂದ ಬಂದಿರುವವರಾಗಿದ್ದು ಇದೀಗ ಮನೆ, ಕಚೇರಿ ಬಾಡಿಗೆ, ಮಕ್ಕಳ ಶೈಕ್ಷಣಿಕ ವೆಚ್ಚಗಳನ್ನು ಭರಿಸಲಾಗದೇ ತೀವ್ರ ಆರ್ಥಿಕ ಸಮಸ್ಯೆಗಳಿಗೆ ಸಿಲುಕಿದ್ದಾರೆ ಎಂದು ತಿಳಿಸಲಾಗಿದೆ.
ಅಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ವಕೀಲರಿಗೆ ತುರ್ತಾಗಿ ಹಣಕಾಸು ನೆರವಿನ ಅಗತ್ಯವಿದೆ. ಹೀಗಾಗಿ ಸರ್ಕಾರ ಕೂಡಲೇ ವಕೀಲರಿಗೆ ನೆರವು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ. ಪರಿಷತ್ತಿನ ಮನವಿ ಪರಿಗಣಿಸಿರುವುದಾಗಿ ತಿಳಿಸಿರುವ ಸಿಎಂ ಯಡಿಯೂರಪ್ಪ ನೆರವು ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.