ಬೆಂಗಳೂರು:ಕಳೆದ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಕೆ ಮಾಡಿದ್ದ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಶಾಸಕ ಉದಯ್ ಗರುಡಾಚಾರ್ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಕೋರಿ ದೂರುದಾರ ಎಚ್.ಜಿ.ಪ್ರಶಾಂತ್ ಮೇಲ್ಮನವಿ ಸಲ್ಲಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನಗರದ 42ನೇ ಎಸಿಎಂಎಂ ನ್ಯಾಯಾಲಯ(ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ದೂರುದಾರರು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಶಾಸಕ ಉದಯ್ ಗರುಡಾಚಾರ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಜನಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 125(ಎ) ಪ್ರಕಾರ ಆರೋಪ ಸಾಬೀತಾದಾಗ ಗರಿಷ್ಟ 6 ತಿಂಗಳವರೆಗೂ ಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ. ಆದರೆ, ನಾಮಕಾವಸ್ಥೆಗೆ 2 ತಿಂಗಳ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ದಂಡದ ಪ್ರಮಾಣವನ್ನೂ ಹೆಚ್ಚಳ ಮಾಡಬೇಕು ಎಂದು ದೂರುದಾರರು ಮೇಲ್ಮನವಿ ಸಲ್ಲಿಸಿದ್ದಾರೆ.
ಪ್ರಕರಣ ಹಿನ್ನೆಲೆ: 2018ರಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಪ್ರಕರಣಗಳು ಮತ್ತು ಈ ಸಂಬಂಧ ಇತ್ಯರ್ಥವಾಗಿರುವ ಪ್ರಕರಣಗಳನ್ನು ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಬೇಕು ಎಂಬ ನಿಯಮವಿದೆ. ಆದರೆ, ಪ್ರಕಾಶ್ ಶೆಟ್ಟಿ ಎಂಬುವರು ಆರೋಪಿ ಗರುಡಾಚಾರ್ ವಿರುದ್ಧ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ನಗರದ 43ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಅಂಶವನ್ನು ಗರುಡಾಚಾರ್ ಅವರು ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡದೆ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎಂದಿದ್ದರು.
ಜತೆಗೆ, ಪತ್ನಿ ಬ್ಯಾಂಕ್ ಖಾತೆಯ ವಿವರವನ್ನೂ ನೀಡಿದ್ದ ಅರ್ಜಿ ಸಲ್ಲಿಸಿರುವ ದಿನದಂದು ಇದ್ದಂತಹ ಬಾಕಿ ಮೊತ್ತವನ್ನು ಉಲ್ಲೇಖ ಮಾಡಿಲ್ಲ. ಮೇವರಿಕ್ ಹೋಲ್ಡಿಂಗ್ಸ್ ನಲ್ಲಿ ಬಂಡವಾಳ ಹೂಡಿಕೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಸಂಸ್ಥೆಗೆ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಬಂಧ ಪರಿಶೀಲಿಸಿದ್ದ ಚುನಾವಣಾಧಿಕಾರಿಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದರು.
ಈ ಸಂಬಂಧ ಪ್ರಶಾಂತ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉದಯ್ ಗರುಡಾಚಾರ್ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿ, 10 ಸಾವಿರ ರೂ ಗಳ ದಂಡ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ದೂರುದಾರರು ಮೇಲ್ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸಿಎಂಗೆ ಮನವಿ ಸಲ್ಲಿಸಿದ ಪರೇಶ್ ಮೇಸ್ತಾ ತಂದೆ