ನವದೆಹಲಿ/ಬೆಂಗಳೂರು :ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರನ್ನು ನವದೆಹಲಿಯ ಕಚೇರಿಯಲ್ಲಿ ಪಂಜಾಬ್‌ನ ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಭೇಟಿಯಾಗಿ, ಉದ್ದೇಶಿತ ಔಷಧ ಪಾರ್ಕ್‌ನ ಪಂಜಾಬ್ ರಾಜ್ಯದ ಭಟಿಂಡಾನಲ್ಲಿ ಸ್ಥಾಪಿಸಲು ಪ್ರಸ್ತಾಪ ಪರಿಗಣಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ಭಟಿಂಡಾದಲ್ಲಿ ಸ್ಥಳ, ಉತ್ತಮ ಸಂಪರ್ಕ, ನೀರು ಮತ್ತು ಜಮೀನಿನ ಲಭ್ಯತೆಯನ್ನು ಹೊಂದಿದ್ದು, ರಾಜ್ಯದಲ್ಲಿ ಈಗಾಗಲೇ ಕೆಲವು ದೊಡ್ಡ ಯುಎಸ್‌ಎಫ್‌ಡಿಎ ಅನುಮೋದಿತ ಔಷಧೀಯ ಕಂಪನಿಗಳು ಮತ್ತು ಔಷಧ ಸಂಸ್ಥೆಗಳಾದ ಎನ್‌ಐಪಿಇಆರ್, ಐಐಎಸ್‌ಆರ್, ಏಮ್ಸ್ ಮೊದಲಾದ ಸಂಸ್ಥೆಗಳು ಅಸ್ತಿತ್ವ ಹೊಂದಿವೆ. ಹಾಗಾಗಿ ಅಲ್ಲಿಯೇ ಔಷಧ ಪಾರ್ಕ್ ಸ್ಥಾಪಿಸಿ ಎಂದು ಮನವಿ ಮಾಡಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಸದಾನಂದಗೌಡ, ಮೂರು ಸಗಟು ಔಷಧ ಪಾರ್ಕ್ ಮತ್ತು ನಾಲ್ಕು ವೈದ್ಯಕೀಯ ಉಪಕರಣಗಳ ಪಾರ್ಕ್ ಸ್ಥಾಪನೆಗೆ ವಸ್ತುನಿಷ್ಠವಾಗಿ ಸ್ಥಳ ಆಯ್ಕೆ ಮಾಡಲು ಮಾರ್ಗಸೂಚಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಔಷಧಿ ಇಲಾಖೆ ತೊಡಗಿದೆ ಎನ್ನುತ್ತಾ ಮನವಿ ಪರಿಶೀಲಿಸುವ ಭರವಸೆ ನೀಡಿ ಪಾರ್ಕ್ ಅಭಿವೃದ್ಧಿಗೆ ಬೆಂಬಲ ಸೂಚಿಸಿ ಆಸಕ್ತಿ ತೋರಿಸಿದ್ದಕ್ಕಾಗಿ ಬಾದಲ್ ಅವರಿಗೆ ಧನ್ಯವಾದ ಅರ್ಪಿಸಿದರು.