ಬೆಂಗಳೂರು: ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರಿಗೆ ಸಮನ್ವಯ ಸಾಧಿಸಿ ಕಾರ್ಖಾನೆಗಳು ಜರುಗಿಸುತ್ತಿರುವ ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸಕ್ಕರೆ ಇಲಾಖೆಯಲ್ಲಿ ಮಾಹಿತಿ ಸಂಗ್ರಹಿಸಿ, ಕ್ರೋಢೀಕರಿಸಿ ರೈತರಿಗೆ ಅನುಗುಣವಾಗುವಂತೆ ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಹೊಸ ಆ್ಯಪ್ ಬಿಡುಗಡೆ ಮಾಡಿದರು.
ಸಕ್ಕರೆ ಕಾರ್ಖಾನೆಗಳು ಸತತವಾಗಿ ಪಾವತಿಸುತ್ತಿರುವ ಕಬ್ಬಿನ ಬಿಲ್, ಸಕ್ಕರೆ ಇಳುವರಿ, ಬಾಕಿ ಇರುವ ಕಬ್ಬಿನ ಬಿಲ್ನ ಮೊತ್ತ, ಕಬ್ಬು ಪ್ರದೇಶ, ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಹಾಗೂ ಇತರ ಉಪಉತ್ಪನ್ನಗಳಿಂದ ಬರುವ ಆದಾಯ ಹಾಗೂ ಆದಾಯ ಹಂಚಿಕೆ ವಿವರಗಳನ್ನು, ಸಕ್ಕರೆ ಮತ್ತು ಕಾಕಂಬಿ ದಾಸ್ತಾನು ವಿವರಗಳನ್ನು ನಿಖರವಾಗಿ ಮತ್ತು ತ್ವರಿತವಾಗಿ ಪಡೆಯಲು ಆ್ಯಪ್ ಹಾಗೂ ಸಾಫ್ಟ್ವೇರ್ ಅನ್ನು ವಿಕಾಸಸೌಧದಲ್ಲಿ ಬಿಡುಗಡೆ ಮಾಡಲಾಗಿದೆ.
ಇದೇ ವೇಳೆ, ರೈತರ ಸಮಸ್ಯೆಗೆ ಶೀಘ್ರ ಸ್ಪಂದಿಸಲು ಸಕ್ಕರೆ ಇಲಾಖೆಗೆ ಕಾಲ್ ಸೆಂಟರ್ ಆರಂಭಿಸಲು ತೀರ್ಮಾನಿಸಲಾಯಿತು. ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ಈ ಕಾಲ್ ಸೆಂಟರ್ ಮೂಲಕ ಇಲಾಖೆಗೆ ಹೋಗಿ, 24 ಗಂಟೆಗಳೊಳಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದು.
ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 72 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯವನ್ನು ಕೈಗೊಂಡಿರುತ್ತವೆ. ಸದರಿ ಹಂಗಾಮಿಗೆ 622.26 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿ, 59.78 ಲಕ್ಷ ಮೆ.ಟನ್ ಸಕ್ಕರೆಯನ್ನು ಉತ್ಪಾದಿಸಿ, ಸಕ್ಕರೆ ಕಾರ್ಖಾನೆಗಳು, 19,919.90 ಕೋಟಿ ರೂ. ಪಾವತಿಸಿದೆ. ಬಾಕಿ ಮೊತ್ತ 2.49 ಕೋಟಿ ರೂ.ಗಳಷ್ಟು ಇರುತ್ತದೆ. ಈ ತಿಂಗಳ ಅಂತ್ಯಕ್ಕೆ ಒಂದು ಕಾರ್ಖಾನೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಈ ತಿಂಗಳ ಅಂತ್ಯದಲ್ಲಿ ಹಣ ಪಾವತಿಸುವುದಾಗಿ ಸರ್ಕಾರಕ್ಕೆ ತಿಳಿಸಿದೆ.
ಇದನ್ನೂ ಓದಿ:ದೀಪಾವಳಿಗೆ ಮೈಸೂರು ನಿಶಬ್ದ ವಲಯ: ಪೊಲೀಸ್ ಆಯುಕ್ತರಿಂದ ಘೋಷಣೆ