ಕರ್ನಾಟಕ

karnataka

ETV Bharat / state

ಕಿದ್ವಾಯಿ ಸಂಸ್ಥೆಯಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ: ಎಎಪಿ ಮುಖಂಡ ನಾಗಣ್ಣ ಆರೋಪ - ಬಿಜೆಪಿ ವಿರುದ್ಧ ಆಪ್​ ಮುಖಂಡನ ಆರೋಪ

ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಕಿದ್ವಾಯಿ ಆಸ್ಪತ್ರೆ ಹೆಸರಿನಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ ಎಂದು ಆಪ್​ ಪಕ್ಷದ ಮುಖಂಡ ಗಂಭೀರ ಆರೋಪ ಮಾಡಿದ್ದಾರೆ.

ಕಿದ್ವಾಯಿ ಸಂಸ್ಥೆಯಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ಆರೋಪ
ಕಿದ್ವಾಯಿ ಸಂಸ್ಥೆಯಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ಆರೋಪ

By ETV Bharat Karnataka Team

Published : Nov 3, 2023, 8:36 PM IST

Updated : Nov 3, 2023, 9:27 PM IST

ಬೆಂಗಳೂರು:ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹತ್ತಿರದ ಸಂಬಂಧಿಯಿಂದ ಕಿದ್ವಾಯಿ ಆಸ್ಪತ್ರೆ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಎಎಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ನಾಗಣ್ಣ ಗಂಭೀರ ಆರೋಪ ಮಾಡಿದರು. ಶೇಷಾದ್ರಿಪುರದ ಆಪ್ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಯಾವಾಗಲೂ ನೀತಿ ಬಗ್ಗೆ ಮಾತನಾಡುತ್ತಾರೆ. ಆದರೆ, ಭ್ರಷ್ಟಾಚಾರದಲ್ಲಿ ಮುಳುಗಿರುತ್ತಾರೆ. ಕಿದ್ವಾಯಿ ಆಸ್ಪತ್ರೆ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಟೆಂಡರ್ ಕರೆಯದೆಯೇ ಹಲವು ಬಾರಿ ಆಸ್ಪತ್ರೆಗೆ ನೂರಾರು ಕೋಟಿ ರೂಪಾಯಿ ಮೌಲ್ಯದ ಉಪಕರಣಗಳನ್ನು ಖರೀದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಲಭ್ಯವಾಗಿವೆ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಸಾಕಷ್ಟು ಉಪಕರಣಗಳಿದ್ದರೂ ಪಿಪಿಪಿ ಮಾದರಿಯಲ್ಲಿ ಲ್ಯಾಬ್ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಟೆಂಡರ್​ನಲ್ಲಿ ಭಾಗವಹಿಸುವ ಕಂಪನಿ ಕೇಂದ್ರ ಸರ್ಕಾರದಿಂದ ಮಾನ್ಯತೆ ಸೇರಿ ಐಎಸ್ಒ ಸರ್ಟಿಫಿಕೇಟ್ ಮತ್ತು ಐಸಿಎಂಆರ್ ನಿಂದಲೂ ಪ್ರಮಾಣಪತ್ರ ಪಡೆಯಬೇಕು. ಅಲ್ಲದೇ, ಎನ್ಎಪಿಯಿಂದಲೂ ಪ್ರಮಾಣಪತ್ರ ಪಡೆದಿರಬೇಕು. ಆದರೆ, ಇದ್ಯಾವುದೂ ಇಲ್ಲದೆ ಬಿಎಂಎಸ್ (ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್) ಎಂಬ ಕಂಪನಿ ಹೋಲ್ ಸೇಲ್ ಡಿಸ್ಟ್ರಿಬ್ಯೂಟರ್ ಆಗಿ ನೋಂದಾಯಿಸಿಕೊಂಡು ಟೆಂಡರ್ ಪಡೆದಿದೆ ಈ ಸಂಬಂಧ ದೊಡ್ಡ ಮಟ್ಟದ ತನಿಖೆ ಅಗತ್ಯವಿದೆ ಎಂದು ಒತ್ತಾಯಿಸಿದರು.

ಕೋವಿಡ್ ಪರೀಕ್ಷೆಗಾಗಿ ಬಿಬಿಎಂಪಿಯವರು ಕಿದ್ವಾಯಿಗೆ ಹಂತ ಹಂತವಾಗಿ 124 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ಕಿದ್ವಾಯಿ ಆಸ್ಪತ್ರೆ ಯಾವುದೇ ಅಧಿಕೃತ ಒಪ್ಪಂದವಿಲ್ಲದೇ ಬಿಎಂಎಸ್ ಗೆ ಸಂಪೂರ್ಣ 119 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ. ಈ ಪೈಕಿ 59 ಕೋಟಿ ಹಣ ಕಿದ್ವಾಯಿ ಆಸ್ಪತ್ರೆಗೆ ಬರಬೇಕಿತ್ತು. ಆದರೆ,ಕಿದ್ವಾಯಿಗೆ ಬರಬೇಕಿದ್ದ ಹಣ ಯಾರ ಜೇಬಿಗೆ ಸೇರಿದೆ ಎಂದು ಪ್ರಶ್ನಿಸಿದರು. ಕಿದ್ವಾಯಿಗೆ ಬರಬೇಕಿದ್ದ ಹಣ ಬಿಎಂಎಸ್​ಗೆ ವರ್ಗಾವಣೆಯಾಗಿರುವುದರ ಹಿಂದೆ ಯಾವ ಮುಖ್ಯಮಂತ್ರಿ ಮತ್ತು ಸಚಿವರ ಒತ್ತಡವಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ನಾಗಣ್ಣ ಇದೇ ವೇಳೆ ಒತ್ತಾಯಿಸಿದರು.

ತನಿಖೆಗೆ ಒತ್ತಾಯ: ಇನ್ನು ಭ್ರಷ್ಟಾಚಾರದ ಕುರಿತು ಮಾತನಾಡಲು ಕಾಂಗ್ರೆಸ್​​​ಗೆ ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದರು. ಕಿದ್ವಾಯಿ ಆಸ್ಪತ್ರೆಯೊಂದರಲ್ಲೇ ಇಷ್ಟು ಕೋಟಿ ಅವ್ಯವಹಾರ ನಡೆದಿದ್ದರೆ, ಮಾಜಿ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅಧಿಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಇನ್ನೆಷ್ಟು ಅವ್ಯವಹಾರ ನಡೆದಿರಬೇಕು, ಈ ಬಗ್ಗೆ ತನಿಖೆಗೆ ಆದೇಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಈ ಹಗರಣವನ್ನು ಸುಮ್ಮನೆ ಬಿಡುವುದಿಲ್ಲ, ಇದನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇವೆ, ಎಲ್ಲ ಅವ್ಯವಹಾರಗಳ ಬಗ್ಗೆ ದಾಖಲೆ ಇದೆ, ಆಮ್ ಅದ್ಮಿ ಪಕ್ಷ ಈ ಭ್ರಷ್ಟಾಚಾರ ಹಗರಣದ ವಿರುದ್ಧ ಕಾನೂನು ಹೋರಾಟ ಮಾಡಲಿದೆ ಎಂದು ಆಪ್​ ಪಕ್ಷದ ಉಪಾಧ್ಯಕ್ಷ ಹಾಗೂ ವಕೀಲ ನಂಜಪ್ಪ ಕಾಳೇಗೌಡ ತಿಳಿಸಿದರು.

ಇನ್ನು ಬಿಜೆಪಿ ಹಗರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆಯಾ? ಎಂದು ರಾಜ್ಯ ಸರ್ಕಾರವನ್ನು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ:ಬಿಎಸ್​ವೈ ಹೇಳಿಕೆ ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ: ಸಿಎಂ ಸಿದ್ದರಾಮಯ್ಯ

Last Updated : Nov 3, 2023, 9:27 PM IST

ABOUT THE AUTHOR

...view details