ಬೆಂಗಳೂರು:ನಗರದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳಾಗಿರುವ ಓಲಾ ಮತ್ತು ಉಬರ್ಗಳಿಂದ ಇರುವ ಸ್ಪರ್ಧೆ ಎದುರಿಸಲು ತಮ್ಮದೇ ಮೊಬೈಲ್ ಆ್ಯಪ್ ಲಾಂಚ್ ಮಾಡಲು ಬೆಂಗಳೂರು ಮಹಾನಗರದ ಆಟೋ ಚಾಲಕರು ನಿರ್ಧರಿಸಿದ್ದಾರೆ.
ನಂದನ್ ನಿಲೇಕಣಿ ಬೆಂಬಲಿತ ಬೆಕ್ನ್ ಪ್ರತಿಷ್ಠಾನದ ನೆರವಿನೊದಿಗೆ ನಗರದ ಆಟೋರಿಕ್ಷಾ ಚಾಲಕರ ಒಕ್ಕೂಟ 'ನಮ್ಮ ಯಾತ್ರಿ ಆ್ಯಪ್' ಅನ್ನ ಲಾಂಚ್ ಮಾಡುವ ಯೋಜನೆ ಹಾಕಿಕೊಂಡಿದೆ. ನವೆಂಬರ್ 1ರಂದು ನೂತನ ಆ್ಯಪ್ ಲಾಂಚ್ ಆಗಲಿದೆ ಎನ್ನಲಾಗಿದೆ.
ಆ್ಯಪ್ ಧಾರಿತ ಕ್ಯಾಬ್ ಸಂಸ್ಥೆಗಳು ಗ್ರಾಹಕರಿಂದ ರೂ. 100 ಕನಿಷ್ಠ ದರವನ್ನು ಪಡೆದು ಅದರಲ್ಲಿ ರೂ. 60 ಅನ್ನು ಆಟೋ ಚಾಲಕರಿಗೆ ನೀಡುತ್ತವೆ. ಉಳಿದ ರೂ. 40 ಅನ್ನು ಕಮೀಷನ್ ರೂಪದಲ್ಲಿ ಪಡೆಯುತ್ತವೆ. ಆಟೋ ಚಾಲಕರು ರೂ. 40 ಗಳಿಗಾಗಿ ಆಟೋ ಓಡಿಸಬೇಕಾಗುತ್ತದೆ. ಅವರು ದರವನ್ನು ಹೆಚ್ಚಿಸಿದ ಬಳಿಕ ಗ್ರಾಹಕರ ಸಂಖ್ಯೆ ಶೇ. 50-60ರಷ್ಟು ಕುಸಿದಿದೆ. ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ ಅನ್ನುವುದು ಆಟೋ ಚಾಲಕರ ವಾದವಾಗಿದೆ.
ಈಗಾಗಲೇ ಆಟೋ ಚಾಲಕರ ಸಂಘ ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದರೂ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಮ್ಮದೇ ಆ್ಯಪ್ಗೆ ಚಾಲನೆ ನೀಡಲು ಆಟೋ ಚಾಲಕರು ನಿರ್ಧರಿಸಿದ್ದಾರೆ. 2017ರಲ್ಲಿ ನಮ್ಮ ಟೈಗರ್ ಹೆಸರಿನಲ್ಲಿ ಲಾಂಚ್ ಆಗಿದ್ದ ಆ್ಯಪ್ ಆಧರಿತ ಟ್ಯಾಕ್ಸಿ ಮತ್ತು ಆಟೋ ಸೇವೆ ವಿಫಲವಾಗಿದ್ದು ಸದ್ಯದ ನಮ್ಮ ಯಾತ್ರಿ ಆ್ಯಪ್ ಬಗ್ಗೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಹೆಚ್ಚಿನ ದರ ವಸೂಲಿ: ಓಲಾ, ಉಬರ್ ಆಟೋರಿಕ್ಷಾ ಸಂಚಾರ ತಕ್ಷಣ ಸ್ಥಗಿತಕ್ಕೆ ಸಾರಿಗೆ ಇಲಾಖೆ ಆದೇಶ