ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಬಿಜೆಪಿ ನಡುವೆ ಅಕ್ಕಿ ಜಟಾಪಟಿ- ರಾಜ್ಯದ ಅಕ್ಕಿ ಕೊರತೆ ನೀಗಿಸಲು ಸಿದ್ಧವೆಂದ ಆಪ್ ಪಕ್ಷ - ಐದು ಕೆಜಿ ಅಕ್ಕಿ ಖರೀದಿ

ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್​ ನಡುವಿನ ತಿಕ್ಕಾಟಕ್ಕೆ ಪಂಜಾಬ್​ನ ಆಪ್​ ಸರ್ಕಾರ ಪರಿಹಾರೋಪಾಯದೊಂದಿಗೆ ಮುಂದೆ ಬಂದಿದೆ.

AAP State President Prithvi Reddy
ಆಪ್​ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ

By

Published : Jun 20, 2023, 9:27 AM IST

ಬೆಂಗಳೂರು: ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ತಲಾ 10 ಕೆಜಿ ಅಕ್ಕಿ ವಿತರಣೆಗೆ ಬೇಕಾದ ಹೆಚ್ಚುವರಿ ಐದು ಕೆಜಿ ಅಕ್ಕಿ ಖರೀದಿ ವಿಚಾರದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ನಡುವೆ ಜಟಾಪಟಿ ನಡೆದಿರುವ ಬೆನ್ನಲ್ಲೇ ಅಕ್ಕಿ ಕೊರತೆಯ ಸಮಸ್ಯೆಯನ್ನು ನಿವಾರಿಸಲು ಆಮ್ ಆದ್ಮಿ ಪಕ್ಷದ ಅಧಿಕಾರವಿರುವ ಪಂಜಾಬ್ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ, ಆಮ್ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನು ಸಂಪೂರ್ಣ ನಕಲು ಮಾಡಿ ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಲವು ತರಾತುರಿ ಗ್ಯಾರಂಟಿಗಳನ್ನು ಘೋಷಿಸಿ ಇಂದು ಅಧಿಕಾರಕ್ಕೆ ಬಂದಿದ್ದಾರೆ. ಈ ಅರೆ ಬೆಂದ ಗ್ಯಾರಂಟಿಗಳಿಂದಾಗಿ ರಾಜ್ಯದ ಬಡ ಜನತೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಈ ಸಂದರ್ಭದಲ್ಲಿ ನಾವುಗಳು ಯಾವುದೇ ರಾಜಕೀಯ ಕುಹಕಕ್ಕೆ ಕೈ ಹಾಕುವುದಿಲ್ಲ. ಈಗ ತಲೆದೋರಿರುವ ರಾಜ್ಯದ ಬಡ ಜನತೆಯ ಸಂಕಷ್ಟವನ್ನು ನಿವಾರಿಸುವುದು ನಮ್ಮ ಪಕ್ಷದ ಗುರಿ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರೊಂದಿಗೆ ನಾನು ನಿನ್ನೆ ನಡೆಸಿದ ಸಂಭಾಷಣೆಯಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ಸಂಪೂರ್ಣ ಸಹಾಯ ಹಸ್ತವನ್ನು ನೀಡಲು ತಾತ್ವಿಕವಾಗಿ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಪಂಜಾಬ್ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಯನ್ನು ನಡೆಸಲು ಬೇಕಾಗಿರುವ ಸಂಪೂರ್ಣ ತಾಂತ್ರಿಕ ಬೆಂಬಲವನ್ನು ನಾವು ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಕೇಂದ್ರದ ಬಿಜೆಪಿ ಸರ್ಕಾರದ ಧೋರಣೆ ಬಡವರ ವಿರೋಧಿ ಹಾಗೂ ದುಃಖದ ಸಂಗತಿ ಎಂದು ಖಂಡಿಸಿದ ಪೃಥ್ವಿ ರೆಡ್ಡಿ, ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆಯಲಾಗಿದೆ. ಕೊರತೆಯಾಗಿರುವ ಹೆಚ್ಚುವರಿ ಅಕ್ಕಿಯನ್ನು ಪಂಜಾಬ್ ಸರಕಾರದಿಂದ ಪಡೆದುಕೊಂಡು ಸಂಕಷ್ಟವನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್​ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಒಂದೊಂದೆ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಈಗಾಗಲೇ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ 10 ಕೆಜಿ ಅಕ್ಕಿ ಉಚಿತ ಯೋಜನೆ ಜಾರಿಗೊಳಿಸಲು ರಾಜ್ಯದಲ್ಲಿ ಅಕ್ಕಿ ಕೊರತೆ ಕಂಡು ಬಂದಿದೆ. ಇದನ್ನು ನೀಗಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಕೇಂದ್ರ ನಕಾರವೆಂದಿದೆ. ಈ ಹಿನ್ನೆಲೆ ರಾಜ್ಯದಲ್ಲಿರುವ ಕಾಂಗ್ರೆಸ್​ ಸರ್ಕಾರ ಒಂದರ ಮೇಲೊಂದರಂತೆ ಹೇಳಿಕೆಗಳನ್ನು ನೀಡುತ್ತಾ ಕೇಂದ್ರವನ್ನು ಟೀಕಿಸುತ್ತಿದೆ. ಇದೀಗ ಕೇಂದ್ರ ಹಾಗೂ ರಾಜ್ಯದ ನಡುವಿನ ಜಟಾಪಟಿಗೆ ಆಪ್​ ಸರ್ಕಾರ ಪರಿಹಾರೋಪಾಯವನ್ನು ಮುಂದಿಟ್ಟಿದೆ.

ಇದನ್ನೂ ಓದಿ:ಕಾಂಗ್ರೆಸ್ ನೀಡಿರುವ ಭರವಸೆ ಈಡೇರಿಸುವುದಕ್ಕಲ್ಲ ಮೋದಿ ಸರ್ಕಾರ ಇರುವುದು: ಬಿ.ವೈ. ವಿಜಯೇಂದ್ರ

ABOUT THE AUTHOR

...view details