ಬೆಂಗಳೂರು: ಒಳಚರಂಡಿ, ಕಾವೇರಿ ನೀರು ಪೂರೈಸುವ ಯೋಜನೆಯ ಪೈಪ್ಲೈನ್ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ, ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಹೊರಮಾವು ಅಪಾರ್ಟ್ಮೆಂಟ್ ನಿವಾಸಿಗಳು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿದರು.
ಹೊರಮಾವು ರಸ್ತೆ ದುರಸ್ತಿಗೆ ಆಗ್ರಹಿಸಿ ಬೀದಿಗಿಳಿದ ಅಪಾರ್ಟ್ಮೆಂಟ್ ನಿವಾಸಿಗಳು ರಸ್ತೆ ಬದಿ ನಿಂತು ಬೇಕೇ ಬೇಕು ರಸ್ತೆ ಬೇಕು ಎಂದು ಪುಟ್ಟ ಪುಟ್ಟ ಮಕ್ಕಳಿಂದ ದೊಡ್ಡವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ವಾಹನಗಳು ಕಿಲೋ ಮೀಟರ್ಗಟ್ಟಲೇ ಸಾಲಾಗಿ ನಿಂತಿದ್ದವು. ಕೆ ಆರ್ ಪುರಂನ ಹೊರಮಾವು ಬಿಬಿಎಂಪಿ ಕಚೇರಿ ಮುಂದೆ ರಸ್ತೆ ದುರಸ್ತಿಗೆ ಆಗ್ರಹಿಸಿ ಕಲ್ಕೆರೆ, ಹೊರಮಾವು, ಜಯಂತಿನಗರದ ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು.
ಕಳೆದ ಒಂದೂವರೆ ವರ್ಷದ ಹಿಂದೆ ಕೆ.ಚನ್ನಸಂದ್ರದಿಂದ ಹೊರಮಾವು ವರ್ತೂಲ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಯುಜಿಡಿ ಹಾಗೂ ಕಾವೇರಿ ನೀರು ಪೂರೈಸುವ ಯೋಜನೆಗೆ ಪೈಪ್ಲೈನ್ ಅಳವಡಿಸುವ ಕಾಮಗಾರಿ ಪ್ರಾರಂಭಿಸಲು ರಸ್ತೆ ಅಗೆಯಲಾಗಿತ್ತು. ಆದರೆ ಕಾಮಗಾರಿ ಮುಗಿದರೂ ರಸ್ತೆ ಅಭಿವೃದ್ಧಿ ಮಾಡುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೊರಮಾವು ಸಿಗ್ನಲ್ನಿಂದ ಕಲ್ಕೆರೆಯವರೆಗೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ವಾರದಲ್ಲಿ 8 ರಿಂದ 9 ಜನ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಸಾವಿರಾರು ವಾಹನಗಳು ಸಂಚರಿಸುವ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಮಳೆ ಬಂದಾಗ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಭಯ ಆಗುಗಿತ್ತಿದೆ. ಅದಷ್ಟು ಬೇಗ ರಸ್ತೆಗೆ ಡಾಂಬರಿನ ಭಾಗ್ಯ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.