ಕರ್ನಾಟಕ

karnataka

ETV Bharat / state

ಯಾರು ಬೇಕಾದರೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಡಬಹುದು, ನಿರ್ಧಾರ ಹೈಕಮಾಂಡ್‌ನದ್ದು: ಸಿ.ಟಿ.ರವಿ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಮಲ ನಾಯಕರ ಪೈಪೋಟಿ ಬಹಿರಂಗವಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

By

Published : Jun 26, 2023, 10:33 PM IST

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಯಾವ ನಾಯಕರು ಬೇಕಾದರೂ ಅಪೇಕ್ಷೆ ಪಡಬಹುದು. ಅದರಲ್ಲಿ ತಪ್ಪೇನು ಇಲ್ಲ. ಆದರೆ ಅಂತಿಮವಾಗಿ ಯಾರಿಗೆ ಜವಾಬ್ದಾರಿ ಕೊಡಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ನಾಯಕರು ನಿರ್ಧರಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ. ಸೋಮಣ್ಣ, ರಮೇಶ್ ಜಿಗಜಿಣಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಡೋದು ತಪ್ಪಲ್ಲ. ಆದರೆ ಯಾರು ಸೂಕ್ತ ಎಂದು ಪಕ್ಷ ತೀರ್ಮಾನ ಮಾಡುತ್ತದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಟ್ಟಿಲ್ಲ. ಸದ್ಯಕ್ಕೆ ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನದನ್ನು ಪಕ್ಷ ತೀರ್ಮಾನಿಸಲಿದೆ ಎಂದರು.

ಜನರಿಗೆ ಆಶ್ವಾಸನೆ ಕೊಟ್ಟಿದ್ದು ಕಾಂಗ್ರೆಸ್ ಪಾರ್ಟಿ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಕೇಂದ್ರ ಸರ್ಕಾರ ಕೊಡುವ 5 ಕೆಜಿ ಅಕ್ಕಿ ಬಿಟ್ಟು, 10 ಕೆಜಿ ಅಕ್ಕಿ ಕೊಡಬೇಕು. ಜುಲೈ 1 ರಿಂದಲೇ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದರು. ಇನ್ನು ಐದು‌ ದಿನಗಳಲ್ಲಿ ಭತ್ತ ಬೆಳೆದಾದರೂ ಕೊಡಲಿ. ಎಲ್ಲಿಂದಲಾದರೂ ತಂದು ಕೊಡಲಿ. ಯಾವ ವಿಶ್ವಾಸದ ಮೇಲೆ ಹೇಳಿದ್ದರೋ ಅದೇ ಮಾತಲ್ಲಿ ಕೊಡಲಿ ಎಂದು ಸಿ.ಟಿ. ರವಿ ಆಗ್ರಹಿಸಿದರು.

ಅಧಿಕಾರಕ್ಕೆ ಬಂದರೆ ನಾನು 15 ಲಕ್ಷ ರೂ ಹಾಕುತ್ತೇನೆ ಅಂತಾ ಮೋದಿ ಎಲ್ಲಿಯೂ ಹೇಳಿಲ್ಲ. ವಿದೇಶದಲ್ಲಿರುವ ಕಪ್ಪು ಹಣದ ಪ್ರಮಾಣ ತಲಾ 15 ಲಕ್ಷ ರೂ.ನಷ್ಟಿದೆ ಎಂದಿದ್ದರು ಅಷ್ಟೇ. ಅದಕ್ಕೂ ನಿಮ್ಮ ಗ್ಯಾರಂಟಿಗೂ ಹೋಲಿಕೆ ಸಲ್ಲದು. ಆಸ್ತಿ ಮಾರಿ ಕೊಡ್ತಾರೋ, ಹೆಂಗೆ ಮಾಡಿ ಕೊಡ್ತಾರೋ ಗೊತ್ತಿಲ್ಲ. ಆದರೆ ಮಾತು ಕೊಟ್ಟಂತೆ ಗ್ಯಾರಂಟಿಗಳನ್ನು ಜನರಿಗೆ ಕೊಡಿ ಎಂದು ಕಾಂಗ್ರೆಸ್​ ವಿರುದ್ದ ಕಿಡಿಕಾರಿದರು.

ವಲಸಿಗರ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ನಾನು ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡೋಕೆ ಹೋಗಲ್ಲ. ಅವತ್ತು ದೆಹಲಿಯಲ್ಲಿ ಕೇವಲ ಅರ್ಕಾವತಿಗೆ ಸಂಬಂಧಿಸಿದಂತೆ ಮಾತ್ರ ಹೇಳಿದ್ದೇನೆ. ಅರ್ಕಾವತಿ ವಿಷಯದಲ್ಲಿ ನಾವು ಬಿಗಿ ನಿಲುವು ತೆಗೆದುಕೊಂಡಿದ್ದರೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದೆ. ಎಲ್ಲವನ್ನೂ ಬಂದವರ ತಲೆ ಮೇಲೆ ಕಟ್ಟೋಕೆ ಇಷ್ಟಪಡಲ್ಲ ಎಂದರು.

ಪಕ್ಷದ ವೇದಿಕೆಯಲ್ಲಿ ಏನೇ ಇದ್ದರೂ ಮಾತನಾಡುತ್ತೇನೆ. ಅಧಿಕಾರಕ್ಕೆ ಬರ್ತೇವೆ ಅಂತಾ ನಿರೀಕ್ಷೆ ಇತ್ತು. ಆದರೆ ನಾವು ಅಧಿಕಾರ ಕಳೆದುಕೊಂಡಿದ್ದೇವೆ. ಮುಂದೆ ಲೋಕಸಭೆ ಚುನಾವಣೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡೋಣ. ನಮ್ಮಿಂದ ಏನೂ ತಪ್ಪು ಆಗಿಲ್ಲ ಅನ್ನೋದು ಬೇಡ, ಕೆಲವು ತಪ್ಪಾಗಿದೆ. ಆ ತಪ್ಪು ಆಗದ ರೀತಿ ಮುಂದೆ ಹೋಗೋಣ ಎಂದು ಹೇಳಿದರು.

ಇದೇ ವೇಳೆ ಡಿ.ಕೆ. ಸುರೇಶ್ ರಾಜಕೀಯ ನಿವೃತ್ತಿ ಮಾತು ವಿಚಾರದ ಕುರಿತು ಪ್ರತಿಕ್ರಿಯಿಸಿ, ಅವರು ನಿವೃತ್ತಿ ತಗೋಬಾರದು, ಇಂಥವನ್ನೆಲ್ಲ ಎದುರಿಸಬೇಕು. ಡಿ.ಕೆ. ಸುರೇಶ್ ಕನಕಪುರದ ಗಂಡು ಯಾವುದಕ್ಕೂ ಹೆದರಿ‌ ಕೂರಬಾರದು. ಅವರು ಯಾಕೆ ನಿವೃತ್ತಿ ತಗೋತಾರೆ? ಅವರು ರಾಜಕೀಯ ಎಲ್ಲವನ್ನೂ ತಿಳಿದವರು. ಕೆಲವರು ಅಲ್ಲಿ 5 ವರ್ಷ ಸಿದ್ದರಾಮಯ್ಯ ಸಿಎಂ ಅಂತಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲೇ ಆಡಳಿತ ಪಕ್ಷದಲ್ಲೇ, ವಿರೋಧ ಪಕ್ಷವಾಗುತ್ತಾ? ಹಿಂದೆ ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿ ರೆಬೆಲ್ ಆಗಿರಲಿಲ್ಲವಾ? ಹಾಗೇ ಕಾಂಗ್ರೆಸ್‌ನಲ್ಲೇ ಕೆಲವರು ರೆಬೆಲ್ ಆಗ್ತಾರೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನ ಸಿಗದೇ ರೆಬೆಲ್ ಆಗಿ ಆಡಳಿತ ಪಕ್ಷದಿಂದ ಹೊರ ಬಂದು ವಿಪಕ್ಷವಾಗುತ್ತಾರೆ ಎಂದರು. ಡಿಕೆಶಿ ಬಂದರೆ ನೀವು ಸಿಎಂ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಲಿ ಅವರು ಕ್ಲಿಯರ್ ಮಾಡಿಕೊಂಡು ಬರಲಿ ಆಮೇಲೆ ನೋಡೋಣ ಎಂದರು‌.

ಇದನ್ನೂ ಓದಿ :ಬಿಜೆಪಿಯಲ್ಲಿ ಅಶಿಸ್ತಿಗೆ ವಲಸಿಗರೇ ಕಾರಣ; ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ : ಕೆ.ಎಸ್​.ಈಶ್ವರಪ್ಪ

ABOUT THE AUTHOR

...view details