ಬೆಂಗಳೂರು:ನನ್ನ ಮನೆ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ, ಯಾವುದೇ ಹಿಂಜರಿಕೆ ಇಲ್ಲದೇ ಸಮಸ್ಯೆ ಹೇಳಿಕೊಳ್ಳಿ ಎನ್ನುವ ಅಭಯ ನೀಡಿ ಅಸಮಧಾನಿತ ಶಾಸಕರ ಮನವೊಲಿಕೆ ಕಸರತ್ತನ್ನು ಸಿಎಂ ಯಡಿಯೂರಪ್ಪ ನಡೆಸಿದ್ದಾರೆ.
ಮಂಗಳವಾರ ಅಧಿಕೃತ ನಿವಾಸ ಕಾವೇರಿಯಲ್ಲಿ ಶಾಸಕರಿಗೆ ಔತನಕೂಟ ಏರ್ಪಡಿಸಿದ್ದ ಸಿಎಂ ಯಡಿಯೂರಪ್ಪ, ಶಾಸಕರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಚಿಂತೆ ಬಿಡಿ, ಕ್ಷೇತ್ರದ ಕೆಲಸಗಳತ್ತ ಗಮನ ಕೊಡಿ, ಏನೇ ಸಮಸ್ಯೆಗಳಿದ್ದರೂ ಭೇಟಿ ಮಾಡಿ ಹೇಳಿಕೊಳ್ಳಿ ಎಂದು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಅನುದಾನ ಕೊಡದಿರಲು ಕಾರಣ ಎಲ್ಲರಿಗೂ ತಿಳಿದೇ ಇದೆ, ಇನ್ಮುಂದೆ ಅಗತ್ಯಕ್ಕೆ ತಕ್ಕಂತೆ ಅನುದಾನ ಕೊಡುತ್ತೇನೆ. ಅನುದಾನ ಸಮಸ್ಯೆಯನ್ನು ದೊಡ್ಡದು ಮಾಡಬೇಡಿ ಕೊರೊನಾದಿಂದ ಆರ್ಥಿಕ ಸಂಕಷ್ಟ ಇದೆ. ಆದರೂ ಹೊಂದಾಣಿಕೆ ಮಾಡಿಕೊಂಡು ಅನುದಾನ ಕೊಡುತ್ತೇನೆ ಎಂದು ಶಾಸಕರಿಗೆ ಸಿಎಂ ಭರವಸೆ ನೀಡಿದ್ದಾರೆ.
ಇಂಥ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಲ್ಲಿ ಸಚಿವರೂ ನಿಮಗೆ ಸಿಗುತ್ತಿದ್ದಾರೆ. ಸಚಿವರೂ ನಿಮ್ಮ ಸಮಸ್ಯೆ, ಕೆಲಸಗಳನ್ನು ಮಾಡಿಕೊಡುತ್ತಾರೆ. ಯಾವುದೇ ಸಮಸ್ಯೆ ಆಗದಂತೆ ಆಡಳಿತ ನಡೆಸೋಣ ನಿಮ್ಮೆಲ್ಲರ ಸಹಕಾರ ಇದ್ದರೆ ಉತ್ತಮ ಆಡಳಿತ ಕೊಡಬಹುದು. ಕೊರೊನಾದಿಂದ ಹಲವು ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿವೆ. ಈಗ ಆರ್ಥಿಕ ಚೇತರಿಕೆ ಕಂಡು ಬರುತ್ತಿದೆ. ಇನ್ನಷ್ಟು ಆರ್ಥಿಕತೆ ಚೇತರಿಕೆಯಾದರೆ ಅಭಿವೃದ್ಧಿ ಕೆಲಸಗಳನ್ನು ವೇಗವಾಗಿ ಮುಂದುವರೆಸುತ್ತೇವೆ. ಬಹಿರಂಗವಾಗಿ ಯಾವುದನ್ನೂ ಮಾತಾಡಲು ಹೋಗಬೇಡಿ ಎಂದು ಸಲಹೆ ನೀಡಿದರು.
ನನ್ನ ಮನೆ ಬಾಗಿಲು ನಿಮಗೆ ಸದಾ ತೆರೆದಿರುತ್ತೆಯಾವುದೇ ಹಿಂಜರಿಕೆ ಇಲ್ಲದೇ ಸಮಸ್ಯೆ ಹೇಳಿಕೊಳ್ಳಿ. ನಿಮ್ಮ ಕ್ಷೇತ್ರಗಳಿಗೆ ಬೇಕಾದ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಚರ್ಚಿಸಿ ಎಂದಿರುವ ಸಿಎಂ, ಅನುದಾನ, ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಶಾಸಕರ ಬೇಡಿಕೆ ಈಡೇರಿಸುವ ಅಭಯ ನೀಡಿ ಅಸಮಧಾನಿತ ಶಾಸಕರ ಮನವೊಲಿಕೆ ಕಸರತ್ತು ನಡೆಸಿದ್ದಾರೆ.
ಇದನ್ನು ಓದಿ:ಯುಗಾದಿ ಒಳಗೆ ಸಿಎಂ ಬದಲಾಗ್ತಾರೆ, ಉತ್ತರ ಕರ್ನಾಟಕದವರಿಗೆ ಪಟ್ಟ : ಶಾಸಕ ಯತ್ನಾಳ