ಬೆಂಗಳೂರು :ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ, ಪುತ್ರನಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಸಿಕ್ಕಿದೆ. ನಗರದ 46ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ರೇಖಾ ಜಗದೀಶ್ ಹಾಗೂ ಪುತ್ರ ಸ್ನೇಹಿತ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯವು ಇಬ್ಬರೂ 30 ದಿನಗಳಲ್ಲಿ ಪ್ರಕರಣದ ತನಿಖಾಧಿಕಾರಿ ಎದುರು ಹಾಜರಾಗುವಂತೆ ಷರತ್ತು ವಿಧಿಸಿದೆ. ಅಲ್ಲದೆ, ಹಲ್ಲೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ, ಬಂಧನ ಭೀತಿಯಿಂದ ರೇಖಾ ಹಾಗೂ ಸ್ನೇಹಿತ್ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವೇನು?
ಮನೆ ಕೆಲಸ ಮಾಡುವ ಮಹಿಳೆ ಅನುರಾಧ ನೀಡಿದ ದೂರಿನ ಮೇರೆಗೆ ರೇಖಾ ಜಗದೀಶ್, ಮಗ ಸ್ನೇಹಿತ್, ಮನೆಯ ಬೌನ್ಸರ್ಗಳಾದ ನಿಖಿಲ್, ಕುಮಾರ್, ರೋಹಿತ್ ಹಾಗೂ ಅಶೋಕ್ ಸೇರಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮಿಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಸೌಂದರ್ಯ ಜಗದೀಶ್ ಮನೆಯ ಪಕ್ಕದ ಮನೆಯೊಂದರಲ್ಲಿ ಅನುರಾಧ, ಕಳೆದ ಎರಡು ವರ್ಷಗಳಿಂದ ಮನೆ ಕೆಲಸ ಮಾಡಿ ತಾಯಿಯೊಂದಿಗೆ ವಾಸ ಮಾಡುತ್ತಿದ್ದರು. ಅ. 20ರಂದು ಬೆಳಗ್ಗೆ ಕಸ ಗುಡಿಸುವ ವಿಚಾರಕ್ಕಾಗಿ ಸ್ನೇಹಿತ್ ಹಾಗೂ ಆತನ ಸ್ನೇಹಿತರು ಗಲಾಟೆ ತೆಗೆದಿದ್ದಾರೆ. ಆಗ ಅನುರಾಧ ಮತ್ತು ಸ್ನೇಹಿತ್ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ.