ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಜನರಿಗೆ ಸುಲಭವಾಗಿ ಸಿಗುವ ಉಪಾಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಳ್ಳುವುದು. ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆ, ಜಿಗುಪ್ಸೆ ಇತ್ಯಾದಿ ಕಾರಣಗಳಿಂದ ನೊಂದು ಜನರು ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಮನೆಯಲ್ಲಿಯೇ ಸುಲಭವಾಗಿ ಫ್ಯಾನ್ಗೆ ನೇಣು ಬಿಗಿದುಕೊಳ್ಳುತ್ತಾರೆ. ಆದರೆ, ಫ್ಯಾನ್ಗೆ ನೇಣು ಬಿಗಿದರೂ ಪ್ರಾಣಹಾನಿ ಆಗದಂತೆ ತಡೆಯುವ ತಂತ್ರಜ್ಞಾನವನ್ನು ಸೇಫ್ ಹ್ಯಾಲೋ ಎನ್ನುವ ಕಂಪನಿ ಆವಿಷ್ಕಾರ ಮಾಡಿ ಪೇಟೆಂಟ್ ಕೂಡ ಪಡೆದುಕೊಂಡಿದ್ದು, ಈ ಉಪಕರಣವನ್ನು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿನ ವಸ್ತು ಪ್ರದರ್ಶನ ಮಳಿಗೆಯ ವಿಶೇಷ ಆಕರ್ಷಣೆ ಸೂಸೈಡ್ ತಡೆಗಟ್ಟುವ ಫ್ಯಾನ್ ಡಿವೈಸ್. ಸೇಫ್ ಹ್ಯಾಲೋ ಕಂಪನಿ ಆವಿಷ್ಕಾರ ಮಾಡಿರುವ ಹೊಸ ಉಪಕರಣವನ್ನು ಸೇಫ್ ಫ್ಯಾನ್ ಹೆಸರಿನಲ್ಲಿ ಪ್ರದರ್ಶನಕ್ಕಿಟ್ಟಿದೆ. ಈ ಉಪಕರಣ ಫ್ಯಾನ್ಗೆ ಅಳವಡಿಸಿದಲ್ಲಿ ಆ ಫ್ಯಾನ್ನಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗದಂತೆ ಉಪಕರಣವನ್ನು ವಿನ್ಯಾಸ ಮಾಡಲಾಗಿದೆ.
ಮನೆ, ಕಚೇರಿ, ಶಾಲಾ ಕಾಲೇಜು, ವಸತಿ ನಿಲಯ, ಹೋಟೆಲ್ ಸೇರಿದಂತೆ ಎಲ್ಲ ಕಡೆ ಸೀಲಿಂಗ್ ಫ್ಯಾನ್ಗಳನ್ನು ಅಳವಡಿಸಲಾಗಿರುತ್ತದೆ. ಈ ಸೀಲಿಂಗ್ ಫ್ಯಾನ್ ಮೂಲಕವೇ ಸಾಕಷ್ಟು ಆತ್ಮಹತ್ಯೆ ಘಟನೆ ನಡೆದಿವೆ. ಹತ್ತು ಹಲವು ಕಾರಣಗಳಿಂದ ಮನನೊಂದು ಫ್ಯಾನ್ಗೆ ಸೀರೆ, ಬೆಡ್ ಶೀಟ್, ಶಾಲು, ಹಗ್ಗವನ್ನು ಸುತ್ತಿ ಸುಲಭವಾಗಿ ನೇಣು ಹಾಕಿಕೊಳ್ಳುತ್ತಾರೆ. ದುಡುಕಿನ ಈ ನಿರ್ಧಾರದಿಂದಾಗಿ ಸಾಕಷ್ಟು ಜೀವಗಳು ಬಲಿಯಾಗುತ್ತಿವೆ.
ಕೆಲವರು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಲು ನೇಣುಬಿಗಿದುಕೊಂಡರೆ, ಮತ್ತೆ ಕೆಲವರು ಹೆದರಿಸಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು, ಹೋಟೆಲ್ಗಳಲ್ಲಿ ಗ್ರಾಹಕರು, ಕ್ವಾಟ್ರಸ್ಗಳಲ್ಲಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ನಿದರ್ಶನಗಳಿವೆ. ಮರ್ಯಾದೆಗೆ ಅಂಜಿ ಕೆಲವರು ಮನೆಯಲ್ಲಿಯೂ ಫ್ಯಾನ್ ಬಳಸಿ ನೇಣಿಗೆ ಕೊರಳೊಡ್ಡಿರುವ ಉದಾಹರಣೆ ಕಡಿಮೆಯೇನಿಲ್ಲ. ಕಂಪನಿ ಮೂಲಗಳ ಪ್ರಕಾರ ಆತ್ಮಹತ್ಯೆ ಕೇಸ್ ಗಳಲ್ಲಿ ಶೇ.30 ರಷ್ಟು ಫ್ಯಾನ್ಗೆ ನೇಣು ಬಿಗಿದುಕೊಂಡೇ ಆಗಿವೆ.
ಡಿವೈಸ್ನಿಂದ ಕನೆಕ್ಟೆಡ್ ನಂಬರ್ಗೆ ಮೆಸೇಜ್: ಈ ರೀತಿ ದುಡುಕಿನ ನಿರ್ಧಾರಕ್ಕೆ ಫ್ಯಾನ್ ಮೂಲಕ ನೇಣಿಗೆ ಕೊರಳೊಡ್ಡಲು ಮುಂದಾಗುವವರ ಪ್ರಾಣ ರಕ್ಷಣೆಗೆ ಇದೀಗ ಈ ಫ್ಯಾನ್ ಡಿವೈಸ್ ಬಂದಿದೆ. ನೇರವಾಗಿ ಸೀಲಿಂಗ್ ಫ್ಯಾನ್ ಅನ್ನು ರೂಫ್ಗಳಿಗೆ ಫಿಟ್ ಮಾಡುವ ಬದಲು ಸೇಫ್ ಹ್ಯಾಲೋ ಕಂಪನಿ ಒದಗಿಸುವ ಸೇಫ್ ಕ್ಲಾಂಪ್ ಅಳವಡಿಸಿ ಅದರ ಮೂಲಕ ಸೀಲಿಂಗ್ ಫ್ಯಾನ್ ಫಿಟ್ ಮಾಡಬೇಕು. ಈ ರೀತಿ ಡಿವೈಸ್ ಕನೆಕ್ಟ್ ಆದ ಫ್ಯಾನ್ ಮೂಲಕ ಯಾರಾದರೂ ಆತ್ಮಹತ್ಯೆಗೆ ಯತ್ನಿಸಿದರೆ ಅದು ಸಫಲವಾಗಲ್ಲ.