ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ತಂದು ರಾಜಕಾರಣ ಮಾಡುವ ಅಗತ್ಯ ನಮಗಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಬಿಲ್ ತಂದಿದ್ದು, ವಿಧಾನಸಭೆಯಲ್ಲಿ ಅಂಗೀಕಾರವಾದಂತೆ ವಿಧಾನಪರಿಷತ್ತಿನಲ್ಲೂ ಅಂಗೀಕಾರ ಸಿಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಗೋ ಪೂಜೆ ನೆರವೇರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತರಲು ಬಿಜೆಪಿ ಅನೇಕ ಹೋರಾಟಗಳನ್ನು ಮಾಡಿತ್ತು. ಇದೀಗ ಹೋರಾಟಕ್ಕೆ ಫಲ ಸಿಕ್ಕ ಸಂತೋಷವಿದೆ, ಹೆಮ್ಮೆಯೂ ಆಗುತ್ತಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿತು. ಮಾತೆ ಸ್ವರೂಪದ ಗೋವನ್ನು ರಕ್ಷಿಸಲು ಗೋಹತ್ಯೆ ನಿಷೇಧ ಕಾಯ್ದೆ ಬೇಕು ಎನ್ನುವುದು ಲಕ್ಷಾಂತರ ಜನರ ಆಶಯ ಕೂಡ ಆಗಿತ್ತು. ನಮ್ಮ ಸರ್ಕಾರದಲ್ಲಿ ಇದು ನೆರವೇರಿದ್ದಕ್ಕೆ ಸಂತೋಷವಾಗುತ್ತಿದೆ. ವಿಧಾನಪರಿಷತ್ನಲ್ಲಿ ಕೂಡ ಈ ಬಿಲ್ ಪಾಸ್ ಆಗಲಿದೆ ಎನ್ನುವ ವಿಶ್ವಾಸ ಇದೆ ಎಂದರು.
ಗೋ ಹತ್ಯೆ ನಿಷೇಧ ವಿಧೇಯಕ ವಿಚಾರ: ಮಂಗಳವಾರ ಒಂದು ದಿನದ ಅಧಿವೇಶನ ಕರೆಯಲು ಸಿಎಂ ನಿರ್ಧಾರ
ಚುನಾವಣೆಗೋಸ್ಕರ ಈ ರೀತಿಯ ವಿಷಯಗಳನ್ನು ಮುಂದಿಟ್ಟುಕೊಂಡು ಹೋಗುವುದು ಬಿಜೆಪಿಯ ತಂತ್ರವಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು ಮಾಡುತ್ತಿದ್ದೇವೆ. ಕೇಂದ್ರದಲ್ಲಿ ಆರ್ಟಿಕಲ್ 370, ತ್ರಿವಳಿ ತಲಾಕ್ ರೀತಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿರ್ಧಾರವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ, ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದು ಚುನಾವಣೆ ಗಿಮಿಕ್ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆ ಪಕ್ಷಕ್ಕೆ ನಮ್ಮ ವಿರುದ್ಧ ಆರೋಪ ಮಾಡಲು ಬೇರೆ ಯಾವ ವಿಷಯವೂ ಉಳಿದುಕೊಂಡಿಲ್ಲ, ಹಾಗಾಗಿ ಇದನ್ನು ಹೇಳುತ್ತಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ನಾವು ಈಡೇರಿಸಿದ್ದೇವೆ ಅಷ್ಟೇ. ಇದು ನಿನ್ನೆ ಮೊನ್ನೆಯ ವಿಷಯವಲ್ಲ, ಹಲವಾರು ದಶಕಗಳ ಕೂಗಿತ್ತು. ಅದಕ್ಕೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸ್ಪಂದಿಸಿದೆ ಎಂದು ಕಾಂಗ್ರೆಸ್ ಆರೋಪಕ್ಕೆ ವಿಜಯೇಂದ್ರ ತಿರುಗೇಟು ನೀಡಿದರು.