ಬೆಂಗಳೂರು :ಭಾನುವಾರ ಸಂಜೆ ಸುರಿದ ಜಡಿ ಮಳೆಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳು ನಡೆದಿವೆ. ಆಂಧ್ರ ಪ್ರದೇಶದ ಯುವತಿಯ ಸಾವಿನ ಬೆನ್ನಲ್ಲೇ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ. ಮೃತದೇಹ ಬ್ಯಾಟರಾಯನಪುರದ ಬಳಿ ದೊರೆತಿದೆ. ಮೃತ ಯುವಕನನ್ನು ಕೆ.ಪಿ.ಅಗ್ರಹಾರದ ನಿವಾಸಿ ಲೋಕೇಶ್ (27) ಎಂದು ಗುರುತಿಸಲಾಗಿದೆ.
ರಾಜ ಕಾಲುವೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಜನರ ವಿರೋಧದ ನಡುವೆಯೂ ಲೋಕೇಶ್ ನೀರಿನ ಆಳ ನೋಡುವುದಾಗಿ ಕಾಲುವೆಗೆ ಇಳಿದಿದ್ದ ಎನ್ನಲಾಗಿದೆ. ಇಳಿಯುತ್ತಿದ್ದಂತೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಅವಘಡ ಸಂಭವಿಸಿದೆ. ಇಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸ್ಕೂಟಿ ಮೇಲೆ ಮರ ಬಿದ್ದು ವ್ಯಕ್ತಿ ಸಾವು; ಇಬ್ಬರು ವಿದ್ಯಾರ್ಥಿಗಳು ನದಿ ನೀರುಪಾಲು
ನಗರದ ಕೆ.ಆರ್.ಸರ್ಕಲ್ ಅಂಡರ್ ಪಾಸ್‌ನಲ್ಲಿ ಮಳೆ ನೀರಲ್ಲಿ ಕಾರು ಸಿಲುಕಿ ಭಾನುರೇಖಾ ರೆಡ್ಡಿ (23) ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಸಾವನ್ನಪ್ಪಿದ್ದರು. ಆಂಧ್ರ ಕೃಷ್ಣಾ ಜಿಲ್ಲೆಯ ತೆಲಪ್ರೋಲು ಮೂಲದವರಾದ ಇವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್‌ನಿಂದ ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ಬಂದಿದ್ದರು. ಕೆ.ಆರ್.ಸರ್ಕಲ್ ತಲುಪುವಷ್ಟರಲ್ಲಿ ಮಳೆ ಜೋರಾಗಿತ್ತು. ಮುಂದೆ ಸಾಗುತ್ತಿದ್ದಾಗ ಅಂಡರ್ ಪಾಸ್ಗೆ ನೀರು ತುಂಬಿಕೊಂಡಿತ್ತು. ನೀರು ಹೊರಹೋಗಲು ದಾರಿ ಇಲ್ಲದೇ ಕಾರು ಹೊರಡುವ ವೇಳೆಗೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ಆರು ಮಂದಿ ಸಿಕ್ಕಿಬಿದ್ದಿರುವುದನ್ನು ಕಂಡು ಪೊಲೀಸರು ಮತ್ತು ಬೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅವರನ್ನು ಹೊರಗೆಳೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿ ಭಾನುರೇಖಾ ಮೃತಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಕುಟುಂಬ ಸದಸ್ಯರಿಗೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮಳೆ ತೀವ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಇಂತಹ ತೊಂದರೆಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಚರ್ಚಿಸಿದ್ದಾರೆ.
ಭಾನುರೇಖಾ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಉದ್ಯೋಗಿ. ಕೆಲಸ ಸಿಗುವ ಮುನ್ನ ಹೈದರಾಬಾದ್‌ನಲ್ಲಿಯೇ ಇರುತ್ತಿದ್ದರು. ತಂದೆ ಗನ್ನವರಂ ತಾಲೂಕಿನ ವೀರಪನೇನಿಗುಡೆಂ ನಿವಾಸಿ. ಭಾನುರೇಖಾ ರೆಡ್ಡಿ ತನ್ನ ಅಜ್ಜಿಯ ಮನೆಯಲ್ಲಿ ತಾಯಿಯೊಂದಿಗೆ ಬೆಳೆದಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ.
ಬಿಬಿಎಂಪಿ ವಿರುದ್ಧ ಪ್ರಕರಣ:ಕೆ.ಆರ್.ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿಕೊಂಡು ಟೆಕ್ಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೃತಳ ಸಹೋದರ ಸಂದೀಪ್ ನೀಡಿರುವ ದೂರಿನನ್ವಯ ಹಲಸೂರು ಗೇಟ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304A (ನಿರ್ಲಕ್ಷ್ಯತೆಯಿಂದ ಸಾವು) ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.