ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020ನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನಗರದ ಸಾಮಾಜಿಕ ಕಾರ್ಯಕರ್ತರಾದ ಸಿ.ಎನ್. ದೀಪಕ್ ಹಾಗೂ ವಿಜಯರಾಘವ ಮರಾಠೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಆರೋಪ: ಬಿಬಿಎಂಪಿ ಕಾಯ್ದೆ-2020 ಸೆಕ್ಷನ್ 8 (ಬಿ) (2) ಅಡಿ ಸಾಮಾಜಿಕ ಕಾರ್ಯಕರ್ತರನ್ನು ಬಿಬಿಎಂಪಿ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲು ಅವಕಾಶ ನೀಡಿರುವುದು ಸಂಪೂರ್ಣ ಅಸಂವಿಧಾನಿಕ. ಅಲ್ಲದೇ, ವಾರ್ಡ್ ಸಮಿತಿಗಳಿಗೆ ಪೂರಕವಾಗಿ ಹೆಚ್ಚುವರಿ ಸಮಿತಿಗಳನ್ನು ರಚಿಸಲು ಅವಕಾಶ ನೀಡಲಾಗಿದೆ. ಇದು, ಸಂವಿಧಾನದ ವಿಧಿ 243 ಎಸ್ ಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಬಿಬಿಎಂಪಿ ಕಾಯ್ದೆ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ವಿಧಿ 243 ವಾರ್ಡ್ ಸಮಿತಿಗಳಿಗೆ ಸ್ವತಂತ್ರ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರ ನೀಡುತ್ತದೆ. ಇಂತಹ ಸಮಿತಿಗಳ ಜತೆಗೆ ಹೆಚ್ಚುವರಿ ಸಮಿತಿಗಳನ್ನು ರಚಿಸಲು ಅವಕಾಶ ನೀಡಿರುವುದು ವಿಧಿ 243ರ ಸ್ಪಷ್ಟ ಉಲ್ಲಂಘನೆ. ಇನ್ನು ಕಾಯ್ದೆಯ ಸೆಕ್ಷನ್ 86 (4) ವಾರ್ಡ್ ಸಮಿತಿಗಳಿಗೆ ಕೇವಲ ಸಲಹಾ ಅಧಿಕಾರವನ್ನು ಮಾತ್ರ ನೀಡುತ್ತದೆ. ಈ ಮೂಲಕ ಕೌನ್ಸಿಲರ್ ನೇತೃತ್ವದ ವಾರ್ಡ್ ಸಮಿತಿಗಳ ಅಧಿಕಾರವನ್ನು ಕಡಿತ ಮಾಡಿ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.