ಬೆಂಗಳೂರು : ನಿನ್ನೆ ಬುಧವಾರ ಸಂಜೆ ಕೆ.ಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದ ಮೊದಲ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ನಿರಂತರ ಮಳೆಯಿಂದ ತಡವಾಗಿ ಆರಂಭವಾದ ಪ್ರಾಯೋಗಿಕ ಸಂಚಾರ ಕೆ.ಆರ್ ಪುರ ಮೆಟ್ರೋ ನಿಲ್ದಾಣದಿಂದ ಸಂಜೆ 6.04 ಕ್ಕೆ ರೈಲು ಹೊರಟಿತು. ಬಳಿಕ ಬೈಯಪ್ಪನಹಳ್ಳಿ ಕಡೆಗೆ ನಿಧಾನವಾಗಿ ಮುಂದಕ್ಕೆ ಸಾಗಿ ತಪಾಸಣೆಗಾಗಿ ಕೆಲವು ಸ್ಥಳಗಳಲ್ಲಿ ನಿಲ್ಲಿಸಲಾಗಿತ್ತು. 2.5 ಕಿಲೋ ಮೀಟರ್ ದೂರವನ್ನು 47 ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು ಎಂದು ನಮ್ಮ ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾರ್ಗದ ಮೆಟ್ರೊ ವಾಣಿಜ್ಯ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ತಿಂಗಳಲ್ಲೇ ಚಾಲನೆ ನೀಡಿದ್ದರು. ಬೈಯಪ್ಪನಹಳ್ಳಿ- ಕೆ.ಆರ್ ಪುರದ ನಡುವೆ ಮೆಟ್ರೊ ಸಂಚರಿಸದ ಕಾರಣದಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಬೈಯಪ್ಪನಹಳ್ಳಿಗೆ ಬಂದವರು ವೈಟ್ ಫೀಲ್ಡ್‌ನತ್ತ ತೆರಳಲು ಆಟೋ, ಕ್ಯಾಬ್, ಬಿಎಂಟಿಸಿ ಬಸ್ ಅನ್ನು ಅವಲಂಬಿಸಬೇಕಿತ್ತು. ಇದೀಗ ವಾಣಿಜ್ಯ ಸಂಚಾರ ಆರಂಭಗೊಂಡರೆ ಈ ಸಮಸ್ಯೆ ಕೊನೆಗೊಳ್ಳಲಿದ್ದು, ವೈಟ್ ಫೀಲ್ಡ್ ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ರೋಲಿಂಗ್ ಸ್ಟಾಕ್, ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಷನ್ಸ್ ಹಾಗು ಟ್ರ್ಯಾಕ್ ತಂಡದಿಂದ ಮೆಟ್ರೋ ಸಿಬ್ಬಂದಿಯನ್ನು ಒಳಗೊಂಡಿರುವ 12 ಅಧಿಕಾರಿಗಳೊಂದಿಗೆ ಲೊಕೊ ಪೈಲಟ್ ಪಿ ಜಗದೀಶನ್ ರೈಲಿನ ಪ್ರಾಯೋಗಿಕ ಸಂಚಾರ ಕೈಗೊಂಡು ಪರಿಶೀಲಿಸಿದ್ದಾರೆ. ಜ್ಯೋತಿಪುರ ಮೆಟ್ರೋ ನಿಲ್ದಾಣದಲ್ಲಿ ಸಂಜೆ 4 ಗಂಟೆಗೆ ಮೊದಲ ಪ್ರಾಯೋಗಿಕ ಸಂಚಾರ ಪ್ರಾರಂಭಿಸಬೇಕಿತ್ತು. ಆದರೆ ಮಳೆಯಿಂದಾಗಿ ತಡವಾಗಿದೆ.