ಬೆಂಗಳೂರು:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಲವು ಸಾಧನೆಗಳಿಗೆ ಹೆಸರಾಗಿದೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣ ಇದಾಗಿದ್ದು, ಕಳೆದ ವರ್ಷ ಹೊಸ ಪ್ರಯಾಣಿಕರನ್ನು ಹೊಂದುವುದರಲ್ಲೂ ದಾಖಲೆ ನಿರ್ಮಿಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ, ದೇವನಹಳ್ಳಿ, ಬೆಂಗಳೂರು 2018 ರಲ್ಲಿ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ ಪಾತ್ರವಾಗಿತ್ತು. ಏರೋಡ್ರೋಮ್‌ಗಳಲ್ಲಿ 15 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಒಂದೇ ವರ್ಷದಲ್ಲಿ ಇದು ಹೊಂದಿದೆ. ಈ ವಿಚಾರವನ್ನು ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ತನ್ನ ಇತ್ತೀಚಿನ ವಿಶ್ವ ವಿಮಾನ ನಿಲ್ದಾಣಗಳ ವರದಿಯಲ್ಲಿ ಬಹಿರಂಗಪಡಿಸಿದೆ.
ಕೆಐಎಎಲ್ ಕಳೆದ ವರ್ಷ 32.33 ಮಿಲಿಯನ್ ಪ್ರಯಾಣಿಕರಿಗೆ ಸೇವೆ ನೀಡಿದ್ದು, ವರ್ಷದಿಂದ ವರ್ಷಕ್ಕೆ ಶೇ. 29.1 ರಷ್ಟು ಬೆಳವಣಿಗೆ ಹೊಂದುತ್ತಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಮೊದಲ ಸ್ಥಾನದಲ್ಲಿದ್ದ ಟರ್ಕಿಯ ಅಂಟಲ್ಯ ವಿಮಾನ ನಿಲ್ದಾಣವನ್ನು ಹಿಂದಿಕ್ಕಿ ಅತೀ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಮೊದಲ ಸ್ಥಾನಕ್ಕೇರಿದೆ. ಅಂಟಲ್ಯ ವಿಮಾನ ನಿಲ್ದಾಣ ವರ್ಷದಲ್ಲಿ ತನ್ನ ಪ್ರಯಾಣಿಕರನ್ನು ಶೇ. 22.1 ರಷ್ಟು ಹೆಚ್ಚಿಸಿಕೊಂಡರೆ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಶೇ. 21.9 ಪ್ರಯಾಣಿಕರನ್ನು ಪೂರೈಸುವ ಮೂಲಕ ಮೂರನೇ ಸ್ಥಾನ ಹೊಂದಿದೆ.
ವಿಶ್ವದ ವಿಮಾನ ನಿಲ್ದಾಣಗಳು ಒಟ್ಟಾರೆ 8.8 ಬಿಲಿಯನ್ ಪ್ರಯಾಣಿಕರನ್ನು ಹೊಂದಿದ್ದು, 122.7 ಮಿಲಿಯನ್ ಮೆಟ್ರಿಕ್ ಟನ್ ಸರಕು ಮತ್ತು 99.9 ಮಿಲಿಯನ್ ವಿಮಾನಗಳ ಹಾರಾಟ ನಡೆಸುತ್ತಿವೆ ಎಂದು ಎಸಿಐ ವರದಿ ಮಾಡಿದೆ. ಅದರಲ್ಲಿ ಪ್ರಯಾಣಿಕ ದಟ್ಟಣೆಯ ಮೇಲೆ ವಿಶ್ವದ 3 ಅಗ್ರ ವಿಮಾನ ನಿಲ್ದಾಣಗಳನ್ನು ಪಟ್ಟಿ ಮಾಡಿವೆ. ಹಾರ್ಟ್ಸ್‌ಫೀಲ್ಡ್-ಜಾಕ್ಸನ್ ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೀಜಿಂಗ್ ಕ್ಯಾಪಿಟಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕ್ರಮವಾಗಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದೆ. ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಾಲ್ಕನೇ ಮತ್ತು ಟೋಕಿಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಐದನೇ ಸ್ಥಾನದಲ್ಲಿವೆ.
ಸಣ್ಣ ಹಾಗೂ ದೊಡ್ಡ ವಿಮಾನ ನಿಲ್ದಾಣಗಳು ವೇಗವಾಗಿ ಬೆಳೆಯುತ್ತಿವೆ. ಇದರಿಂದ ಅತಿದೊಡ್ಡದಾದ ಹಬ್ ವಿಮಾನ ನಿಲ್ದಾಣಗಳೂ ಕೂಡ ವೇಗವಾಗಿ ಬೆಳೆಯುತ್ತಲೇ ಇವೆ ಎಂದು ಎಸಿಐ ವಿಶ್ವ ಮಹಾನಿರ್ದೇಶಕ ಏಂಜೆಲಾ ಗಿಟೆನ್ಸ್ ತಿಳಿಸಿದ್ದಾರೆ. ಅಲ್ಲದೇ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ 2018 ರಲ್ಲಿ ವೇಗವಾಗಿ ಬೆಳೆದ ಟಾಪ್ 30 ವಿಮಾನ ನಿಲ್ದಾಣಗಳಲ್ಲಿ 12 ವಿಮಾನಗಳು ಚೀನಾ ಮತ್ತು ಭಾರತದಲ್ಲಿವೆ ಎಂದು ವರದಿಯಲ್ಲಿ ತಿಳಿಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎರಡನೇ ರನ್ ವೇ ಕೂಡ ಮುಕ್ತಾಯದ ಹಂತಕ್ಕೆ ಬಂದಿದ್ದು, ಅದರಲ್ಲಿ ವಿಮಾನ ಹಾರಾಟ ಆರಂಭವಾದಲ್ಲಿ ಮತ್ತಷ್ಟು ಪ್ರಯಾಣಿಕರನ್ನು ಸೆಳೆದು ವಿಶ್ವದ ಟಾಪ್ ಏರ್ಪೋರ್ಟ್ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.