ಬೆಂಗಳೂರು: ವಾರದಿಂದ ಸಾಕಷ್ಟು ಆತಂಕದಲ್ಲಿಯೇ ಇರುವ ಉತ್ತರ ವಿಧಾನಸೌಧ ಸಿಬ್ಬಂದಿ ಇಂದು ಇನ್ನಷ್ಟು ಆತಂಕಕ್ಕೆ ಒಳಗಾಗುವ ಸುದ್ದಿ ಕೇಳಿ ಬಂದಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ದೃಢವಾಗಿದೆ. ವಿಧಾನಸೌಧ ಡಿಸಿಪಿ ಆಪ್ತ ಸಹಾಯಕನಿಗೆ ಇಂದು ಕೊರೊನಾ ಪಾಸಿಟಿವ್ ಬಂದಿದ್ದು, ಮತ್ತೊಮ್ಮೆ ವಿಧಾನಸೌಧ ಸಿಬ್ಬಂದಿಯನ್ನು ಆತಂಕಕ್ಕೆ ಈಡುಮಾಡಿದೆ.
ಕಳೆದ ವಾರವಷ್ಟೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾರ್ತಾ ಇಲಾಖೆ ಅಧಿಕಾರಿ ಒಬ್ಬರಿಗೆ ಕೊರೊನಾ ಮಹಾಮಾರಿ ವಕ್ಕರಿಸಿತ್ತು. ಇದೀಗ ಮತ್ತೊಬ್ಬರಿಗೆ ಮಹಾಮಾರಿ ವಕ್ಕರಿಸಿರುವುದು ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವವರನ್ನು ತೀವ್ರ ಆತಂಕಕ್ಕೆ ದೂಡಿದೆ.
ವಿಧಾನಸೌಧದ ಕೆಂಗಲ್ ಪ್ರತಿಮೆ ಪ್ರವೇಶ ದ್ವಾರದ ಎಡ ಭಾಗದಲ್ಲಿರುವ ಡಿಸಿಪಿ ಕಚೇರಿಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಕೊರೊನಾಗೆ ತುತ್ತಾಗಿದ್ದು, ಡಿಸಿಪಿ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಿ ನಂತರ ಸೀಲ್ ಮಾಡಲಾಗಿದೆ.
ವಿಧಾನಸೌಧದ ಡಿಪಿಎಆರ್ ವಿಭಾಗದ ಸಿಬ್ಬಂದಿ ಕೊಠಡಿ ಸ್ವಚ್ಛಗೊಳಿಸಿ ಸೀಲ್ ಮಾಡಿದ್ದಾರೆ. ಇವರು ಕಳೆದ ಮೂರು ನಾಲ್ಕು ದಿನದಿಂದ ಓಡಾಡಿರುವ ಎಲ್ಲಾ ಕೊಠಡಿಗಳನ್ನು ವಿಶೇಷ ದ್ರಾವಣ ಸಿಂಪಡಣೆ ಮಾಡಿ ಸ್ವಚ್ಛಗೊಳಿಸಲಾಗಿದೆ.
ವಿಧಾನಸೌಧದಲ್ಲಿ ಆರ್ಥಿಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿಗೆ ಕೂಡ ಕೊರೊನಾ ಇದೆ ಎಂಬ ಮಾತು ಕೇಳಿ ಬಂದಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ. ಆದರೆ ಎರಡನೇ ಮಹಡಿಯಲ್ಲಿರುವ ಆರ್ಥಿಕ ಇಲಾಖೆ ಕೊಠಡಿಯನ್ನು ಕೂಡ ಸ್ಯಾನಿಟೈಸ್ ಮಾಡಲಾಗಿದೆ ಎಂಬ ಮಾಹಿತಿ ಇದೆ.