ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ತಪ್ಪಿದ ಮಹಾದುರಂತ.. ಸ್ಥಳೀಯರ ಸಮಯ ಪ್ರಜ್ಞೆಯಿಂದ ಬದುಕಿದ ಜೀವಗಳು! -VIDEO

ಬೆಂಗಳೂರು ಮಿಲ್ಕ್​​​ ಫೆಡರೇಷನ್​​ ಆವರಣದಲ್ಲಿರುವ ಕ್ವಾಟರ್ಸ್​ನಲ್ಲಿ ಮೂರಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರೆಲ್ಲೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಲ್ಲಿ  ಕಟ್ಟಡ ಕುಸಿತ
ಬೆಂಗಳೂರಿನಲ್ಲಿ ಕಟ್ಟಡ ಕುಸಿತ

By

Published : Sep 28, 2021, 1:32 PM IST

Updated : Sep 28, 2021, 2:59 PM IST

ಬೆಂಗಳೂರು: ಲಕ್ಕಸಂದ್ರದ ಕಟ್ಟಡ ಕುಸಿತ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಕಟ್ಟಡ ಕುಸಿದಿದೆ‌‌. ಮನೆಯಲ್ಲಿ ವಾಸ್ತವ್ಯ ಹೂಡಿದ್ದವರ ಸಮಯಪ್ರಜ್ಞೆಯಿಂದ ಮತ್ತೊಂದು ಮಹಾ ದುರಂತ ತಪ್ಪಿದೆ.

ಬಮೂಲ್​​​(ಬೆಂಗಳೂರು ಮಿಲ್ಕ್​ ಫೆಡರೇಷನ್​) ಆವರಣದಲ್ಲಿರುವ ಕ್ವಾಟರ್ಸ್​ನಲ್ಲಿ ಈ ದುರಂತ ಸಂಭವಿಸಿದೆ. ಕಟ್ಟಡ ಕುಸಿತದ ಕೆಲವೇ ನಿಮಿಷಗಳ ಹಿಂದೆ ಮನೆಯಲ್ಲಿದ್ದ ಎಲ್ಲರೂ ಆತಂಕದಿಂದ ಹೊರ ಬರುತ್ತಿದ್ದಂತೆ ಮೂರು ಅಂತಸ್ತಿನ ಕಟ್ಟಡದ ಒಂದು ಭಾಗ ಬಿದ್ದಿದೆ. ಕೂಡಲೇ ಮ‌ನೆಯವರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗೊತ್ತಾಗಿದ್ದು ಹೇಗೆ ?

ಸುಮಾರು 50 ವರ್ಷಗಳ ಹಿಂದೆ ಕ್ವಾರ್ಟರ್ಸ್​ನಲ್ಲಿ 18 ಮನೆಗಳನ್ನು ನಿರ್ಮಿಸಲಾಗಿತ್ತು. ಈ ಮನೆಗಳಲ್ಲಿ ಸುಮಾರು 40 ಜನರು ವಾಸಿಸುತ್ತಿದ್ದರು. ಹಳೆ ಕಟ್ಟಡವಾಗಿದ್ದರಿಂದ ಮಳೆ ಬಂದಾಗ ಸೋರಿಕೆಯಾಗುತ್ತಿತ್ತು. ಈ ಬಗ್ಗೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ​ ಆಡಳಿತ ಮಂಡಳಿ ಗಮನಕ್ಕೆ ತಂದರೂ, ಯಾರೂ ಎಚ್ಚೆತ್ತುಕೊಂಡಿರಲಿಲ್ಲ ಎನ್ನಲಾಗಿದೆ.

ಕಟ್ಟಡ ಕುಸಿತ ಸಂಬಂಧ ಸ್ಥಳೀಯರ ಪ್ರತಿಕ್ರಿಯೆ

ಈ ಬಗ್ಗೆ ಸ್ಥಳೀಯರಾದ ಬಾಲಕೃಷ್ಣ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಮನೆಯ ಗೋಡೆ ಮೇಲೆ ಬಿರುಕು ಮೂಡಿ ಇಟ್ಟಿಗೆ ಬಿದ್ದಿತು. ಎರಡನೇ ಮಹಡಿಯಲ್ಲಿರುವ ಮನೆಯ ಗೋಡೆ ಬಿರುಕು ಮೂಡುತ್ತಿರುವ ಬಗ್ಗೆ ಕೂಡಲೇ ಇಂಜಿನಿಯರ್ ಮೋಹಿತ್ ಎಂಬುವರಿಗೆ ಕರೆ ಮಾಡಿ ಮಾಹಿತಿ ನೀಡಿದೆವು. ಆಗ ಅವರು ಎಲ್ಲರೂ ಮನೆಯಿಂದ ಹೊರಬನ್ನಿ ಎಂದು ಸೂಚಿಸಿದ್ದರಿಂದ, ನಾವೆಲ್ಲರೂ ಹೊರಗೆ ಓಡಿ ಬಂದೆವು. ಮನೆಯಿಂದ ಹೊರಬರುವಾಗ ಗಾಯವಾಗಿದೆ ಎಂದು ಹೇಳಿದ್ರು.

ಸಾಕು ನಾಯಿ ರಕ್ಷಣೆ

ಸಂಪೂರ್ಣ ಕಟ್ಟಡ ಕುಸಿಯುವ ಮುನ್ನವೇ ಆತಂಕದಿಂದ ಎಲ್ಲರೂ ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ ಸಾಕು ನಾಯಿಯೊಂದು ಮನೆಯಲ್ಲಿರುವುದನ್ನು ಗಮನಿಸಿದ ಅಗ್ನಿಶಾಮಕ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ.

ಎಲ್ಲರೂ ನಮ್ಮವರೇ.. ಇಂದೇ ಬೇರೆ ವ್ಯವಸ್ಥೆ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರು ಮಿಲ್ಕ್ ಫೆಡರೇಷನ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು. ನಮ್ಮ ಕಣ್ಣ ಮುಂದೆಯೇ ಕಟ್ಟಡ ಕುಸಿದು ಬಿತ್ತು. ಬಿಲ್ಡಿಂಗ್​ ಸುಮಾರು 50-60 ವರ್ಷಗಳ ಹಳೆಯದ್ದಾಗಿದೆ. ಇನ್ನೆರಡು ತಿಂಗಳಲ್ಲಿ ನಾವೇ ದುರಸ್ತಿ ಮಾಡಬೇಕೆಂದುಕೊಂಡಿದ್ದೆವು. ಈ ಹಿಂದೆಯೂ ನಾವು ಸಣ್ಣಪುಟ್ಟ ರಿಪೇರಿ ಮಾಡಿದ್ದೆವು ಎಂದರು. ಅಲ್ಲದೇ, ಇಲ್ಲಿ ವಾಸವಿದ್ದ ಜನರನ್ನು ಇಂದೇ ಬೇರೆ ಕಡೆ ಸ್ಥಳಾಂತರ ಮಾಡಿಸುತ್ತೇವೆ. ಎಲ್ಲರೂ ನಮ್ಮ ಉದ್ಯೋಗಿಗಳೇ, ನಮ್ಮ ಸಂಸ್ಥೆಗಾಗಿ ದುಡಿದವರೇ. ಇನ್ನೆರಡು ಮೂರು ವರ್ಷಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತೇವೆ ಎಂದರು.

ಇದನ್ನೂ ಓದಿ:Watch video: ಬೆಂಗಳೂರಲ್ಲಿ 3 ಅಂತಸ್ತಿನ ಮತ್ತೊಂದು ಕಟ್ಟಡ ಕುಸಿತ... ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಘಟನಾ ಸ್ಥಳಕ್ಕೆ ಕೆಎಂಎಫ್ ಎಂಡಿ ಬಿ.ಸಿ.ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡದಲ್ಲಿದ್ದ ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ. 2016 ರಲ್ಲಿ ಕೆಎಂಎಫ್ ಇಂಜಿನಿಯರ್ ತಂಡ ಪರಿಶೀಲನೆ ಮಾಡಿತ್ತು. 10 ವರ್ಷಗಳ ವಾಸ ಮಾಡಲು ಯೋಗ್ಯ ಎಂದು ಪ್ರಮಾಣಪತ್ರ ನೀಡಿತ್ತು. ಆದರೆ‌ ದುರದೃಷ್ಟವಶಾತ್ ಕಟ್ಟಡ ಕುಸಿದಿದೆ. ನಿವಾಸಿಗಳಿಗೆ ಎಲ್ಲಾ ರೀತಿಯಿಂದಲೂ ಬೆಂಬಲ ನೀಡುತ್ತೇವೆ. ಅನಾಹುತದಲ್ಲಿ ಆಗಿರುವ ನಷ್ಟದ ಬಗ್ಗೆ ಪರಿಶೀಲನೆ ವರದಿ ಬಂದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾವುದು. ಕೆಎಂಎಫ್ ನಿಂದ ಬೇಕಾದ ಎಲ್ಲಾ ರೀತಿಯಿಂದಲೂ ಬೆಂಬಲ ನೀಡುತ್ತೇವೆ. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ ಎಂದು ಸತೀಶ್ ಭರವಸೆ ನೀಡಿದರು.

ಸದ್ಯಕ್ಕೆ ಕಟ್ಟಡವನ್ನ ನೆಲಸಮ ಮಾಡಲ್ಲ:

ಸ್ಥಳಕ್ಕೆ ಅಡುಗೋಡಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಟ್ಟಡದಲ್ಲಿದ್ದ ನಿವಾಸಿಗಳನ್ನ ಬೇರೆ ಕ್ವಾಟ್ರಸ್​ಗೆ ಸ್ಥಳಾಂತರ ಮಾಡಲಾಗಿದೆ. ಅವರಿಗೆ ಬೇಕಾದ ಸೌಕರ್ಯಗಳನ್ನ ಒದಗಿಸಲಾಗಿದೆ. ಕುಸಿದಿರೋ ಕಟ್ಟಡ ನೆಲಸಮ ಮಾಡೋದು ಲೇಟ್. ಎಂಜಿನಿಯರ್ ಗಳು ಮತ್ತು ತಜ್ಞರ ಜೊತೆ ಚರ್ಚೆಯ ನಂತರ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದಿದ್ದಾರೆ.

ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಪಡೆದಿರೋ ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಈ ಸಂಬಂಧ ಮಾತನಾಡಿ, ಕುಸಿದಿರೋ ಕಟ್ಟಡದ ಜೊತೆಗೆ ಬಮೂಲ್ ಕ್ವಾಟ್ರಸ್ ಅಕ್ಕಪಕ್ಕದ ಕಟ್ಟಡಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲಾ ಕಟ್ಟಡಗಳ ನೆಲಸಮ​ ಬಗ್ಗೆ ಚರ್ಚೆ ನಡೆಸುತ್ತೇವೆ. 6 ಬ್ಲಾಕ್ ಗಳ 186 ಮನೆಗಳ ಪರಿಶೀಲನೆ ನಡೆಸಲಾಗುತ್ತೆ. ಆ ಬ್ಲಾಕ್ ಗಳಲ್ಲಿರೋ ಸಿಬ್ಬಂದಿಗೂ ಕಾಲಿ ಮಾಡಲು ಸೂಚನೆ ನೀಡಲಾಗುತ್ತದೆ. ಹಾಗೆ ಬೇರೆ ಕ್ವಾಟ್ರಸ್, ಅಪಾರ್ಟ್ಮೆಂಟ್ ಗಳು ಸೇರಿದಂತೆ ಹಲವೆಡೆ ಸಿಬ್ಬಂದಿ ವಸತಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

Last Updated : Sep 28, 2021, 2:59 PM IST

ABOUT THE AUTHOR

...view details