ಬೆಂಗಳೂರು:ನಗರದನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇಂದು ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಭಾಗಿಯಾಗಿದ್ದಾರೆ. ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಸಮಾವೇಶದಲ್ಲಿ ರಾಜ್ಯದ ವಿವಿಧ ತನಿಖಾ ವಿಶೇಷತೆಗಳ ಕುರಿತು ಪ್ರದರ್ಶಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಗರುಡ ಪಡೆ, ಎಫ್.ಎಸ್.ಎಲ್. ಹಾಗೂ ಮೊಬೈಲ್ ಕಮಾಂಡ್ ಕಂಟ್ರೋಲ್ ಸೆಂಟರ್ಗಳ ವಿಶೇಷತೆಗಳ ಕುರಿತು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಮಾಹಿತಿ ಪಡೆದರು. ಡ್ರಗ್ ಮುಕ್ತ ಕರ್ನಾಟಕ ಜಾಗೃತಿ ಕಾರ್ಯಕ್ರಮದ ಭಾಗವಾಗಿ, ಪೊಲೀಸರು ವಶಕ್ಕೆ ಪಡೆದಿರುವ ಹಲವು ಮಾದರಿಯ ಮಾದಕ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಸಮಾವೇಶದಲ್ಲಿ ರಾಜ್ಯದಲ್ಲಿ ಕಳೆದ ವರ್ಷ ಪೊಲೀಸ್ ಇಲಾಖೆಯಲ್ಲಿ ಸಾಧಿಸಿದ ಕಾರ್ಯಾಚರಣೆಗಳು, ಈ ವರ್ಷ ಹಾಕಿಕೊಂಡಿರುವ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆ, ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ರಾಜ್ಯಾದ್ಯಂತ ಕೈಗೊಳ್ಳಬೇಕಿರುವ ಅಗತ್ಯ ಭದ್ರತಾ ಕ್ರಮಗಳ ಕುರಿತು ಚರ್ಚಿಸಲಾಯಿತು.
ಸಂಕ್ಷಿಪ್ತ ಸೈಬರ್ ಕ್ರೈಂ ತನಿಖಾ ಕೈಪಿಡಿ ಬಿಡುಗಡೆ:ಇದೇ ವೇಳೆ 'ಸಂಕ್ಷಿಪ್ತ ಸೈಬರ್ ಕ್ರೈಂ ತನಿಖಾ ಕೈಪಿಡಿ' ಬಿಡುಗಡೆಗೊಳಿಸಲಾಯಿತು. ತಂತ್ರಜ್ಞಾನ ವೇಗವಾಗಿರುವ ಈ ವಿದ್ಯುನ್ಮಾನ ಯುಗದಲ್ಲಿ ಅದರಿಂದ ಆಗುತ್ತಿರುವ ಸಮಸ್ಯೆಗಳು ಕೂಡ ಜಟಿಲವಾಗಿದ್ದು, ಪೊಲೀಸ್ ಅಧಿಕಾರಿಗಳು ಇಂತಹ ಸನ್ನಿವೇಶಗಳನ್ನು ಎದುರಿಸಲು ತಾಂತ್ರಿಕವಾಗಿ ಒಂದು ಹೆಜ್ಜೆ ಮುಂದೆ ಇರಬೇಕಾಗಿರುತ್ತದೆ. ಸಂಕ್ಷಿಪ್ತ ಸೈಬರ್ ಕ್ರೈಂ ತನಿಖಾ ಕೈಪಿಡಿಯು ಅಂಥ ಸೈಬರ್ ತನಿಖಾ ಪ್ರಕ್ರಿಯೆ, ಡಿಜಿಟಲ್ ಫಾರೆನ್ಸಿಕ್‌ನಲ್ಲಿ ಪ್ರಮಾಣಿತ ಅಭ್ಯಾಸಗಳು, ಇತ್ತೀಚೆಗೆ ಸೈಬರ್ ಅಪರಾಧಗಳಲ್ಲಿ ಬದಲಾದ ಸನ್ನಿವೇಶಗಳ ಒಳನೋಟವನ್ನು ಒಳಗೊಂಡಿದೆ. ಈ ಕೈಪಿಡಿಯನ್ನು ಸಿ.ಐ.ಡಿ., ಕರ್ನಾಟಕದವರು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿ.ಎಸ್.ಸಿ.ಐ), ಇನ್ಫೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಸ್ಥಾಪಿಸಲಾದ ಸೆಂಟರ್ ಫಾರ್ ಸೈಬರ್ ಕ್ರೈಂ ಟ್ರೈನಿಂಗ್ & ರಿಸರ್ಚ್ (ಸಿ.ಸಿ.ಐ.ಟಿ.ಆರ್) ಮೂಲಕ ಅಭಿವೃದ್ಧಿಪಡಿಸಲಾಗಿದೆ.