ಬೆಂಗಳೂರು:ಇಂದು ಕಾಂಗ್ರೆಸ್ ನಾಚಿಕೆಗೇಡಿನ ಮಾಧ್ಯಮಗೋಷ್ಟಿ ಮಾಡಿದೆ, ಚಿಕ್ಕಮಕ್ಕಳು ಮಾತಾಡುವ ರೀತಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಾತನಾಡಿದ್ದಾರೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಠೋಡ್ ಖರ್ಗೆಯನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಕಟ್ ಕಾಪಿ ಪೇಸ್ಟ್ನ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಗೆಪಾಟಿಲಿಗೆ ಈಡಾಗಿದೆ. ಬಹುಶಃ ಸುರ್ಜೆವಾಲಾರಿಗೆ ಕರ್ನಾಟಕ ರಾಜಕೀಯದ ಹೀಟ್ ತಾಲೋಕೆ ಆಗ್ತಾ ಇಲ್ಲ. ದೇಹ ತಂಪಾಗಲು ನಮ್ಮ ಕಡೆ ಮಜ್ಜಿಗೆ ಕುಡಿಯುತ್ತಾರೆ. ಸುರ್ಜೇವಾಲ ಕೂಡ ಮಜ್ಜಿಗೆ ಕುಡಿಯುವುದು ಒಳ್ಳೆಯದು ನಂದಿನಿ ಮಜ್ಜಿಗೆ ಉತ್ತಮವಾಗಿರುತ್ತೆ. ಅದನ್ನೇ ಕುಡಿಯಲಿ ಎಂದು ಸಲಹೆ ನೀಡುತ್ತೇನೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಟಾಂಗ್ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದ ನಂತರ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿ 130 ಸ್ಥಾನದತ್ತ ಸಾಗುತ್ತಿದೆ, ಇದರಿಂದ ವಿಚಲಿತರಾಗಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಸುಳ್ಳು ಹೇಳಲು ಶುರು ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನಸ್ಸಿನಲ್ಲಿ ಇದ್ದ ಭ್ರಷ್ಟಾಚಾರದ ರೇಟಿಂಗ್ ಅನ್ನು ಪತ್ರಿಕಾ ಜಾಹೀತಾತು ಕೊಟ್ಟಿದ್ದಾರೆ ಎಂದು ಹರಿಹಾಯ್ದರು.
ಈಗ ನೋಡಿದರೆ ನಮ್ಮ ಚಿತ್ತಾಪುರ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಕೊಲೆ ಸಂಚಿನ ಆರೋಪ ಮಾಡಿದ್ದಾರೆ. ಖರ್ಗೆ ಅವರನ್ನು ಕೊಲ್ಲಲು ಷಡ್ಯಂತ್ರ ರೂಪಿಸಿದ್ದಾರೆ ಎನ್ನುವ ಆರೋಪ ಮಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಎಲ್ಕೆಜಿ ಮಗು ಕೂಡ ನಗುವಂತಿದೆ. ಇದು ಜಗತ್ತಿನ ಅತಿ ಕೆಟ್ಟ ಅಸಾಸಿನೇಷನ್ ಪ್ಲಾಂಟ್, ಕಟ್ ಕಾಪಿ ಪೇಸ್ಟ್ ಆಡಿಯೋ ಬಿಡುಗಡೆ ಮಾಡಿದ್ದಾರೆ. ಸುರ್ಜೆವಾಲಾಗೆ ಒಂದು ಮಾತು ಹೇಳುತ್ತೇನೆ, ದಕ್ಷಿಣ ಭಾರತದಲ್ಲಿ ಬಿಸಿಗೆ ಮಜ್ಜಿಗೆ ಕುಡಿಬೇಕು ಎನ್ನುವ ಮಾತಿದೆ, ಅದಕ್ಕೆ ನಂದಿನಿ ಮಜ್ಜಿಗೆ ಕುಡಿಯಿರಿ ಎನ್ನುವ ಸಲಹೆ ನೀಡುತ್ತೇನೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಲ್ಲಿ ಒಬ್ಬರಿಗೆ ಸೀಟ್ ಕೊಟ್ಡಿದ್ದಾರೆ ಸ್ಪೆಸಿಫಿಕ್ ಆಗಿ ವಿನಯ್ ಕುಲಕರ್ಣಿ ವಿಚಾರದಲ್ಲಿ ಹೇಳುವುದಾದರೆ ಅವರು ಬೇಲ್ ಮೇಲೆ ಇರುವ ಅಭ್ಯರ್ಥಿ, ಅವರಿಗೆ ಧಾರವಾಡ ಜಿಲ್ಲೆ ಪ್ರವೇಶ ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅವರು ನೇರವಾಗಿ ಪ್ರಚಾರ ಮಾಡುವಂತಿಲ್ಲ, ಅಂತವರಿಗೆ ಟಿಕೆಟ್ ಕೊಟ್ಟಿರುವ ನೀವು ನಮ್ಮ ಅಭ್ಯರ್ಥಿ ವಿರುದ್ಧ ಇರುವ ಕೇಸ್ ಗಳನ್ನು ಪ್ರಸ್ತಾಪಿಸುತ್ತಿದ್ದು, ನಿಮಗೆ ಯಾವ ನೈತಿಕತೆ ಇದೆ. 26 ವರ್ಷದ ಮಣಿಕಂಠ ವಿರುದ್ಧ ಯಾಕಿಷ್ಟು ಸಿಟ್ಟು ಎಂದು ಗೊತ್ತಿಲ್ಲ. ಕಳೆದ ಎರಡು ವರ್ಷದಲ್ಲಿ ಮಣಿಕಂಠ ವಿರುದ್ಧ ಎಷ್ಟು ಕೇಸು ಹಾಕಿದ್ದಾರೆ ಎಂದು ಅವರೇ ಹೇಳಲಿ ಎಂದು ಅಣ್ಣಾಮಲೈ ಪ್ರಶ್ನಿಸಿದರು.
ಅಷ್ಟು ಚಿಕ್ಕ ಹುಡುಗನ ಮೇಲೆ ಒಂದು ಕೋಟಿ ಮಾನನಷ್ಟ ಮೊಕದ್ದಮೆ ಸೇರಿ ಹತ್ತು ಹಲವು ಕೇಸ್ ಹಾಕಿಸಿದ್ದಾರೆ. ಯಾಕೆ ಇಷ್ಟು ಭಯ ನಮ್ಮ ಅಭ್ಯರ್ಥಿ ಮೇಲೆ ಎಂದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ನ 35 ಜನರ ವಿರುದ್ಧ ಗಂಭೀರ ಅಪರಾಧ ಆರೋಪಗಳಿವೆ. ನಿಷೇಧಿತ ಸಂಘಟನೆಗೆ ಹಣಕಾಸು ಪೂರೈಕೆ ಆರೋಪ ಒಬ್ಬರ ಮೇಲಿದೆ. ಕೊತ್ವಾಲ್ ರಾಮಚಂದ್ರ ಶಿಷ್ಯ ಡಿ ಕೆ ಶಿವಕುಮಾರ್ ಮೇಲೆ ಎಷ್ಟು ಕೇಸಿತ್ತು, ಏನೇನು ಕೇಸಿತ್ತು ಗೊತ್ತಾ? ಎಂದು ಅಣ್ಣಾಮಲೈ ಹರಿಹಾಯ್ದರು.