ಸಂಪುಟ ಸಭೆ ಬಳಿಕ ಸಚಿವರ ಮಾಧ್ಯಮಗೋಷ್ಟಿ ಬೆಂಗಳೂರು: ಅನ್ನಭಾಗ್ಯದಡಿ ಅಕ್ಕಿ ಸಿಗದ ಕಾರಣ ಅಕ್ಕಿ ಬದಲಿಗೆ ಬಿಪಿಎಲ್ ಕಾರ್ಡುದಾರಿಗೆ ಹಣ ನೀಡಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಎಫ್ಸಿಐ ದರ ಪ್ರತಿ ಕೆಜಿಗೆ 34 ರೂಪಾಯಿಯಂತೆ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ ಹಣ ಪಾವತಿ ಮಾಡಲು ತೀರ್ಮಾನಿಸಲಾಗಿದೆ. ಮನೆಯ ಯಜಮಾನನ ಖಾತೆಗೆ ಕುಟುಂಬ ಸದಸ್ಯರ ಹಣವನ್ನೂ ಪಾವತಿ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ಸಚಿವರು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ಅಕ್ಕಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ್ದೆ. ಎಫ್ಸಿಐನಲ್ಲಿ ಅಕ್ಕಿ ಸಂಗ್ರಹ ಹೆಚ್ಚಿದ್ದು, ಅಕ್ಕಿ ಕೊಡುವಂತೆ ಮನವಿ ಮಾಡಿದ್ದೆವು. ಆದರೆ ಅವರು ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿದ್ದಾರೆ. ಇದರಲ್ಲಿ ರಾಜಕೀಯ ಮಾಡಲಾಗಿದೆ. ಅಕ್ಕಿ ಕೊಡುವುದಾಗಿ ನಾವು ರಾಜ್ಯದ ಜನರಿಗೆ ಮಾತು ಕೊಟ್ಟಿದ್ದೇವೆ. 1 ಕೆ.ಜಿಗೆ 34 ರೂ.ನಂತೆ ಬಿಪಿಎಲ್ ಕಾರ್ಡುದಾರರಿಗೆ ಹಣ ಪಾವತಿ ಮಾಡಲಾಗುವುದು ಎಂದು ಹೇಳಿದರು.
ಅಕ್ಕಿ ಬದಲು ಹಣ ಪಾವತಿಸಲು ಸರ್ಕಾರ ನಿರ್ಧಾರ ಕೇಂದ್ರ ಸರ್ಕಾರ ನಮಗೆ ಸಹಕರಿಸದ ಕಾರಣ ನಾವು ಮಾತುಕೊಟ್ಟಂತೆ ಅಕ್ಕಿಯ ಬದಲು ಹಣ ಕೊಡುತ್ತೇವೆ. ಜುಲೈಯಿಂದ ಕೆ.ಜಿಗೆ 34 ರೂ.ನಂತೆ ಕುಟುಂಬದ ಸದಸ್ಯರಿಗೆ ಅಕ್ಕಿಯ ಹಣ ನೀಡಲಾಗುತ್ತದೆ. ಒಂದು ತಿಂಗಳಿಗೆ 750ರಿಂದ 800 ಕೋಟಿ ರೂ. ಹಣ ಬೇಕಾಗುತ್ತದೆ. ಅಕ್ಕಿ ವಿಚಾರವಾಗಿ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ಅಂತಿಮವಾದ ಬಳಿಕ ಅಕ್ಕಿ ಕೊಡುತ್ತೇವೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ರೇಷನ್ ಕಾರ್ಡ್ನಲ್ಲಿರುವಂತೆ ಮನೆಯ ಯಜಮಾನನಿಗೆ ಹೆಸರಿನ ಖಾತೆಗೆ ಹಣ ನೀಡಲಾಗುತ್ತದೆ. ಶೇಕಡಾ 95ರಷ್ಟು ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದೆ. ಖಾತೆ ಇಲ್ಲದವರಿಗೆ ಪರಿಶೀಲಿಸಿ ಹಣ ನೀಡಲಾಗುವುದು. ಐದು ಕೆಜಿಯಂತೆ ಒಬ್ಬ ವ್ಯಕ್ತಿಗೆ 170 ರೂ. ಹಣ ಪಾವತಿ ಮಾಡಲಾಗುತ್ತದೆ. ಒಟ್ಟು 85 ಲಕ್ಷ ಬಿಪಿಎಲ್ ಕಾರ್ಡುಗಳಿವೆ. ಟೆಂಡರ್ ಮೂಲಕ ಬೇಕಾದಷ್ಟು ಅಕ್ಕಿ ಸಂಗ್ರಹವಾದರೆ ಆದಷ್ಟು ಬೇಗ ಅಕ್ಕಿ ಪೂರೈಕೆ ಮಾಡುತ್ತೇವೆ ಎಂದು ಸಚಿವರು ವಿವರಿಸಿದರು.
ಜುಲೈ 14ಕ್ಕೆ ಗೃಹ ಲಕ್ಷ್ಮಿ ಯೋಜನೆ ಆರಂಭ ಸಾಧ್ಯತೆ:ಗೃಹ ಲಕ್ಷ್ಮಿ ಯೋಜನೆ ಸಂಬಂಧ ಬಹಳಷ್ಟು ಚರ್ಚೆ ಆಗಿದೆ. ಜುಲೈ 14ಕ್ಕೆ ಯೋಜನೆ ಆರಂಭ ಕುರಿತಂತೆ ಚರ್ಚೆ ಆಗಿದೆ. ಇಂದು ಮತ್ತು ನಾಳೆ ಈ ಬಗ್ಗೆ ಅಂತಿಮ ದಿನಾಂಕವನ್ನು ಸಂಬಂಧಿತ ಸಚಿವರು ಘೋಷಣೆ ಮಾಡಲಿದ್ದಾರೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಸಂಪುಟದ ಇತರ ತೀರ್ಮಾನಗಳು:
- ಬೆಂಗಳೂರು ನಗರದ ಚಂದಾಪುರದಲ್ಲಿ 106 ಕೋಟಿ ರೂ. ಒಳಚರಂಡಿ ಕಾಮಗಾರಿಗೆ ಅನುಮೋದನೆ
- ಎಸ್ಸಿ ಎಸ್ಟಿ ಸಮುದಾಯದವರಿಗೆ ಸರ್ಕಾರಿ ಕಾಮಗಾರಿ ಟೆಂಡರ್ ಮೊತ್ತವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಏರಿಕೆ ಸಂಬಂಧ ತಿದ್ದುಪಡಿಗೆ ಅಸ್ತು
- ಜಿಎಸ್ಟಿ ವಿಧೇಯಕ ತಿದ್ದುಪಡಿ ಕಾಯ್ದೆ ಅನುಮೋದನೆ
- ನ್ಯಾಯಾಲಯದಲ್ಲಿನ ವಿವಿಧ ಅಪರಾಧ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಪುಟದ ಉಪಸಮಿತಿ ರಚನೆಗೆ ಅನುಮೋದನೆ.
- ಕೃಷ್ಣ, ಕಾವೇರಿ, ಮಹದಾಯಿ ಇತರ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನದ ಪರಿಶೀಲನೆ, ನ್ಯಾಯಾಧೀಕರಣದ ತೀರ್ಪುಗಳ ಅನುಷ್ಠಾನಕ್ಕೆ ಸಚಿವ ಸಂಪುಟ ಉಪಸಮಿತಿ ರಚನೆಗೆ ಅನುಮೋದನೆ.
- ಬೃಹತ್ ಹೂಡಿಕೆಗಳ ಪ್ರಸ್ತಾವನೆಗಳು, ರಿಯಾಯಿತಿ ನೀಡುವ ಸಂಬಂಧ ಸಚಿವ ಸಂಪುಟ ಉಪಸಮಿತಿ ರಚನೆ