ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಪಡಿತರದಾರರ ಖಾತೆಗೆ ಡಿಬಿಟಿ ಮೂಲಕ ನೇರ ಹಣ ವರ್ಗಾವಣೆಯನ್ನು ಕೋಲಾರ ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಿಗೆ ಪಾವತಿ ಮಾಡಲಾಗಿದೆ.
ರಾಜ್ಯದಲ್ಲಿ 10,368,897 ಅರ್ಹ ಪಡಿತರ ಕಾರ್ಡ್ಗಳಿದ್ದು, ಇದರಲ್ಲಿ 36,936,906 ಅರ್ಹ ಫಲಾನುಭವಿಗಗಳು ಇದ್ದಾರೆ. ಒಟ್ಟಾರೆ, 605 ಕೋಟಿ ರೂಪಾಯಿಗಳಷ್ಟು ವೆಚ್ಚ ಆಗಲಿದೆ. ಕೋಲಾರ ಜಿಲ್ಲೆಯನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಿಗೆ ಆಗಸ್ಟ್ ತಿಂಗಳ ಹಣ ತಲುಪಿದೆ. ಕೋಲಾರ ಜಿಲ್ಲೆಯ ಪಡಿತರದಾರರಿಗೂ ಕೂಡ ಮುಂದಿನ ನಾಲ್ಕು ದಿನಗಳಲ್ಲಿ ನಿಗದಿತ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರವು ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ ತಿಂಗಳಿಗೆ 10 ಕೆ.ಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯೂ ಒಂದಾಗಿದೆ. ಜುಲೈ ತಿಂಗಳಿನಿಂದ ರಾಜ್ಯದಲ್ಲಿ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಹೆಚ್ಹೆಚ್) ಹೊಂದಿರುವ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.
ಈ ಯೋಜನೆಗೆ ಅಗತ್ಯ ಅಕ್ಕಿಯನ್ನು ಎಫ್ಸಿಐ (FCI) ನಿಂದ OMSS (D) ಅಕ್ಕಿಯನ್ನು ಖರೀದಿಸುವ ಮೂಲಕ ಪೂರೈಕೆ ಮಾಡಲು ಯೋಚಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಜುಲೈ 2023ರಿಂದ OMSS (D) ಅಕ್ಕಿ ಮಾರಾಟವನ್ನು ಸ್ಥಗಿತಗೊಳಿಸಿದೆ. ಹೀಗಾಗಿ, ರಾಜ್ಯವು ಜುಲೈನಿಂದ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಫಲಾನುಭವಿಗಳಿಗೆ ನೇರ ನಗದು ಹಣ ವರ್ಗಾವಣೆಯನ್ನು ಪ್ರಾರಂಭಿಸಿದ್ದು, ಅದು ಈಗಲೂ ಕೂಡ ಮುಂದುವರೆಯುತ್ತಿದೆ.
ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ವಿತರಿಸಲಾಗಿದೆ. ಹೆಚ್ಚುವರಿ 5 ಕೆಜಿ ಬದಲಿಗೆ ಪಡಿತರ ಚೀಟಿಯಲ್ಲಿ ಇರುವಂತೆ ಕುಟುಂಬದ ಪ್ರತಿ ಫಲಾನುಭವಿಗೆ (ಪ್ರತಿ ಕೆ.ಜಿ.ಗೆ 34 ರೂ. ನಂತೆ ) ಪ್ರತಿ ತಿಂಗಳು 170 ರೂ.ಗಳನ್ನು ಪಡಿತರ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಪಾವತಿ ಮಾಡಲಾಗುತ್ತಿದೆ. ಇದೀಗ ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ತಿಂಗಳ 5 ಕೆಜಿ ಅಕ್ಕಿಯ ಹೆಚ್ಚುವರಿ ಪಡಿತರದ ಬದಲಿಗೆ ಹಣವನ್ನು ಡಿಬಿಟಿ ಮೂಲಕ ಪಡಿತರದಾರರ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಸರ್ಕಾರದ 'ಶತಕ'ದಾಟ: ಗ್ಯಾರಂಟಿಗಳ ಜಾರಿಗೆ ಪಂಚ ಸವಾಲು