ಬೆಂಗಳೂರು: ಬಿಬಿಎಂಪಿ ಆಯುಕ್ತರಾಗಿದ್ದ ಅನಿಲ್ ಕುಮಾರ್ ಅವರನ್ನು ಏಕಾಏಕಿ ಎತ್ತಂಗಡಿ ಮಾಡಿ, ಆ ಸ್ಥಾನಕ್ಕೆ ಮಂಜುನಾಥ್ ಪ್ರಸಾದ್ರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ವರ್ಗಾವಣೆ ಮಾಡಲು ಕಾರಣ ಏನು ಎಂಬ ಬಗ್ಗೆ ಸಾಕಷ್ಟು ಅನುಮಾನ, ಪ್ರಶ್ನೆಗಳು ಮೂಡಿದೆ.
ಅನಿಲ್ ಕುಮಾರ್ ವರ್ಗಾವಣೆಗೆ ಕಾರಣ ಏನು?
ಬೆಂಗಳೂರಲ್ಲಿ ಗಣನೀಯ ಏರಿಕೆ ಕಂಡಿರುವ ಕೊರೊನಾ ಪ್ರಕರಣವನ್ನು ನಿಭಾಯಿಸುವಲ್ಲಿನ ವೈಫಲ್ಯವೇ ಅನಿಲ್ ಕುಮಾರ್ ಎತ್ತಂಗಡಿಗೆ ಪ್ರಮುಖ ಕಾರಣ. ಹೈಕೋರ್ಟ್ ಇತ್ತೀಚೆಗೆ ಕಂಟೈನ್ಮೆಂಟ್ ವಲಯದಲ್ಲಿನ ನಿರ್ವಹಣೆ ಸಂಬಂಧ ಬಿಬಿಎಂಪಿಗೆ ಚಾಟಿ ಬೀಸಿತ್ತು. ಈ ಕಾರಣಕ್ಕೆ ಸರ್ಕಾರ ಅನಿಲ್ ಕುಮಾರ್ರನ್ನು ಎತ್ತಂಗಡಿ ಮಾಲಾಗಿದೆದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಹಿಂದೆ ರಾಜಕೀಯವೂ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿರುವ ಕೋವಿಡ್ ಕೇರ್ ಕೇಂದ್ರಕ್ಕಾಗಿ ಬಿಬಿಎಂಪಿ ಹಾಸಿಗೆ ಬಾಡಿಗೆ ಪಡೆದಿರುವುದು ಸಾಕಷ್ಟು ವಿವಾದ ಎಬ್ಬಿಸಿತ್ತು. ಇದೇ ಸಂಬಂಧ ವಿರೋಧ ಪಕ್ಷ ಕೋವಿಡ್ ಕೇರ್ ಕೇಂದ್ರದಲ್ಲಿ ಹಗರಣ ನಡೆದಿದೆ ಆರೋಪ ಮಾಡಿತ್ತು. ಇದು ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತು. ಈ ಸಂಬಂಧ ಸಿಎಂ ಖುದ್ದು ಬಿಬಿಎಂಪಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರು ಲಾಕ್‌ಡೌನ್ ವಿಸ್ತರಿಸುವುದು ಒಳಿತು ಎಂಬ ಬಗ್ಗೆನೂ ಅನಿಲ್ ಕುಮಾರ್ ಮೊನ್ನೆ ಬಹಿರಂಗ ಹೇಳಿಕೆ ನೀಡಿದ್ದರು.
ಜೊತೆಗೆ ಅನಿಲ್ ಕುಮಾರ್ ಕಾರ್ಯ ವೈಖರಿ ಬಗ್ಗೆಯೂ ನಗರದ ಶಾಸಕರು ಸಿಎಂಗೆ ದೂರು ನೀಡಿದ್ದರು. ಇತ್ತ ಕೋವಿಡ್-19 ನಿಯಂತ್ರಣಕ್ಕಾಗಿ ವಲಯವಾರು ಉಸ್ತುವಾರಿ ಸಚಿವರುಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರನ್ನು ವರ್ಗಾವಣೆ ಮಾಡುವಂತೆಯೂ ಆಗ್ರಹಿಸಿದ್ದರು ಎನ್ನಲಾಗಿದೆ. ಜನಪ್ರತಿನಿಧಿಗಳ ಜೊತೆ ಅನಿಲ್ ಕುಮಾರ್ ಸಮನ್ವಯತೆ ಸಾಧಿಸುವಲ್ಲಿ ವಿಫಲರಾಗಿದ್ದರು ಎಂಬ ಮಾತುಗಳೂ ಕೇಳಿಬಂದಿವೆ.