ಬೆಂಗಳೂರು: ಅಂಗನವಾಡಿ ನೌಕರರ ಅನಿರ್ಧಿಷ್ಟಾವಧಿ ಪ್ರತಿಭಟನೆ ಪ್ರಾರಂಭವಾಗಿ 5 ದಿನಗಳು ಕೆಳೆದಿವೆ. ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ಕೆಲಸವನ್ನು ಸ್ಥಗಿತಗೊಳಿಸಿ ದಿನನಿತ್ಯ 10 ರಿಂದ 15 ಸಾವಿರ ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ಶಿಕ್ಷಕಿಯರೆಂದು ಪರಿಗಣಿಸಬೇಕು. ಗ್ರ್ಯಾಚ್ಯುಟಿ ಪಾವತಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
"ರಾಜ್ಯದ ಪ್ರತಿಯೊಂದು ಮಗುವಿಗೆ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಖಾತ್ರಿಪಡಿಸಲು ಅಂಗನವಾಡಿ ಕೇಂದ್ರದ ಕೆಲಸಗಳ ಸ್ವರೂಪವನ್ನು ಬದಲಾಯಿಸಿ ಮೇಲ್ದರ್ಜೆಗೆ ಏರಿಸಬೇಕು ಮತ್ತು ಅಂಗನವಾಡಿ ನೌಕರರ 48 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಚ್ಯುಟಿ ಕೊಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿ ಮಾಡಬೇಕೆಂಬುದು ಹೋರಾಟದ ಪ್ರಮುಖ ಬೇಡಿಕೆಗಳಾಗಿವೆ. 5 ದಿನಗಳಾದರೂ, ಕೆಲಸ ಸ್ಥಗಿತವಾಗಿರುವ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಳ್ಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರ ನಿರ್ಲಕ್ಷ್ಯತನ ಖಂಡನೀಯ" ಎಂದು ಸಿ.ಐ.ಟಿ.ಯು ಸಂಘಟನೆಯ ವರಲಕ್ಷ್ಮಿ ಹೇಳಿದ್ದಾರೆ.
"ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ವೃತ್ತಿ ಸಂಘಗಳ ಕಾಯ್ದೆ 1926ರ ಪ್ರಕಾರ ನೊಂದಾವಣೆಗೊಂಡು ಇಲಾಖೆಯಿಂದ ಸದಸ್ಯತ್ವ ಪಡೆದಿದ್ದು, ಯಾವ ಸಂಘವನ್ನು ಪರಿಗಣಿಸಬೇಕು ಎಂದು ತೀರ್ಮಾನಿಸುವ ಅಗತ್ಯವಿದೆ. ಇದರಲ್ಲೂ ಇಲಾಖೆ ತಪ್ಪು ಎಸಗುತ್ತಿದ್ದು, ಈಗಲಾದರೂ ಈ ದಿಕ್ಕಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಕೇಳಿಕೊಂಡಿದ್ದಾರೆ.
ಸೂಕ್ತ ಆದೇಶದ ತನಕ ಹೋರಾಟ: "ಸಮಯ ವ್ಯರ್ಥ ಮಾಡುವ ಬದಲಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡಬೇಕು. ಸೂಕ್ತ ಆದೇಶ ನೀಡದೇ ಹೋದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ಜನರು ಹಾಗೂ ಮಾಧ್ಯಮಗಳು ನಮ್ಮ ಹೋರಾಟಕ್ಕೆ ಬೆಂಬಲಿಸಬೇಕು. ಪ್ರತಿ ದಿನ ಒಂದೊಂದು ಸಂಘ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಲಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ವಿಚ್ಛೇದಿತ ಪತ್ನಿಯ ಸುಪರ್ದಿಯಲ್ಲಿರುವ ಎರಡನೇ ಮಗ: ವಿದ್ಯಾಭ್ಯಾಸಕ್ಕಾಗಿ 40 ಲಕ್ಷ ಜೀವನಾಂಶ ನೀಡುವಂತೆ ಹೈಕೋರ್ಟ್ ಸೂಚನೆ
ಇಲಾಖೆ ಅಧಿಕಾರಿಗಳ ಅಸಡ್ಡೆ: "ಜನವರಿ 3 ರಂದು ಮುಷ್ಕರದ ನೊಟೀಸ್ ಅನ್ನು ಸ್ವತಃ ಸಚಿವರ ಬಳಿ ನೀಡಿ ಚರ್ಚಿಸಲಾಗಿದೆ. 2 ಬಾರಿ ನಿರ್ದೇಶಕರ ಹಂತದ ಸಭೆಗಳಾಗಿವೆ. ಮಾತ್ರವಲ್ಲದೇ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಇದೇ ಫ್ರೀಡಂ ಪಾರ್ಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೆ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಚರ್ಚೆಗೆ ಬರುತ್ತಿಲ್ಲ" ಎಂದು ವರಲಕ್ಷ್ಮಿ ದೂರಿದ್ದಾರೆ.
ಅಂಗನವಾಡಿ ಕಾರ್ಯಕರ್ತರನ್ನು ನಿರ್ಲಕ್ಷಿಸಿರುವುದು ಖಂಡನೀಯ:ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತರನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು "ತಕ್ಷಣ ಅಂಗನವಾಡಿ ಕಾರ್ಯಕರ್ತರನ್ನು ಕರೆದು ಅವರ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಬೇಕು. ಅಂಗನವಾಡಿ ಕಾರ್ಯಕರ್ತರು ಮಳೆ- ಚಳಿ-ಗಾಳಿ ಎನ್ನದೆ ಬೀದಿಯಲ್ಲಿ ಠಿಕಾಣಿ ಹೂಡಿ ಮುಷ್ಕರದಲ್ಲಿ ತೊಡಗಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ನಂತರವೂ ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟ ನಡೆಸುತ್ತಿರುವುದು ವಿಷಾದನೀಯ" ಎಂದು ಕಿಡಿಕಾರಿದ್ದಾರೆ.
"ಸೇವೆ ಕಾಯಂ, ವೇತನ ಹೆಚ್ಚಳ ಮತ್ತು ನಿವೃತ್ತಿ ಸೌಲಭ್ಯವೂ ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಮುಂದಿಟ್ಟಿದ್ದಾರೆ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಮಾತುಕತೆಯ ಮೂಲಕ ಮುಷ್ಕರ ನಿರತರ ಬೇಡಿಕೆ ಈಡೇರಿಸಲು ಸಾಧ್ಯವಿತ್ತು. ಸರ್ಕಾರ ಉದ್ಧಟತನದಿಂದ ಸಂಘರ್ಷದ ಹಾದಿ ಆಯ್ದುಕೊಂಡಿದೆ" ಎಂದಿದ್ದಾರೆ.
"ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು ರೂ.5,000ದಿಂದ ರೂ.8000ಕ್ಕೆ ಮತ್ತು ಸಹಾಯಕಿಯರ ವೇತನವನ್ನು ರೂ.2500ದಿಂದ ರೂ.4000ಕ್ಕೆ ಹೆಚ್ಚಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಅಂಗನವಾಡಿ ಕಾರ್ಯಕರ್ತರ ಮುಷ್ಕರವನ್ನು ತಡೆಯುವ ಹತಾಶ ಪ್ರಯತ್ನ ಮಾಡುತ್ತಿದ್ದು ಇದು ಪ್ರಜಾತಂತ್ರ ವಿರೋಧಿ ಪ್ರಯತ್ನ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, "ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತರನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ. ತಕ್ಷಣ ಅಂಗನವಾಡಿ ಕಾರ್ಯಕರ್ತರನ್ನು ಕರೆದು ಅವರ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ : ಪರಿಹಾರಕ್ಕೆ ಸಿದ್ದರಾಮಯ್ಯ ಆಗ್ರಹ