ಬೆಂಗಳೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 2 ಸಾವಿರ ಅಂಗನವಾಡಿ ಕಾರ್ಯಕರ್ತರು ನಡೆಸುತ್ತಿದ್ದ ಹೋರಾಟ ಅಂತ್ಯಗೊಂಡಿದೆ. ಅಂಗನವಾಡಿ ನೌಕರರ ಹೋರಾಟವನ್ನು ಸದ್ಯಕ್ಕೆ ವಾಪಸ್ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಎಸ್. ವರಲಕ್ಷ್ಮಿ ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಯಕರ್ತರು ಅಂಗನವಾಡಿ ಕೇಂದ್ರಗಳನ್ನು ಅನಿರ್ದಿಷ್ಟ ಕಾಲ ಬಂದ್ ಮಾಡಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಬಜೆಟ್ನಲ್ಲಿ ಸಿಎಂ ಬೊಮ್ಮಾಯಿ 1000 ರೂ. ಹೆಚ್ಚಿಸಿದರೂ ನೌಕರರು ವಿರೋಧ ವ್ಯಕ್ತಪಡಿಸುತ್ತಿದ್ದರು.
ಈ ಬಗ್ಗೆ ಸಂಬಂಧಪಟ್ಟ ಸಚಿವರು ಮಧ್ಯ ಪ್ರವೇಶಿಸಿ ಅನುಕಂಪದ ಆಧಾರದ ಮೇಲೆ ಮಗಳು ಮತ್ತು ಸೊಸೆಗೆ ಕೆಲಸ ಕೊಡಲು ಆದೇಶಿಸಿದ್ದಾರೆ. ಅಲ್ಲದೆ, ಕೋಳಿ ಮೊಟ್ಟೆ ಹಣವನ್ನು ಮುಂಗಡವಾಗಿ ಕೊಡಲು ಸರ್ಕಾರ ಒಪ್ಪಿದೆ ಎಂದು ವರಲಕ್ಷ್ಮಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಇಬ್ಬರು ಯುವತಿಯರ ರಕ್ಷಣೆ, ಓರ್ವ ಅರೆಸ್ಟ್
ಅಂಗನವಾಡಿ ಸಹಾಯಕಿಯರಿಗೆ ಮತ್ತು ಮಿನಿ ಕಾರ್ಯಕರ್ತೆಯರಿಗೆ ಈಗ ಬಜೆಟ್ನಲ್ಲಿ ಹೆಚ್ಚಳವಾಗಿರುವ ಸೇವಾ ಜೇಷ್ಠತೆಯನ್ನು ಸಮಪ್ರಮಾಣದಲ್ಲಿ ಕೊಡಲು ಶಿಫಾರಸು ಮಾಡುವುದಾಗಿ ಸಚಿವರು ಒಪ್ಪಿದ್ದಾರೆ. ಹಾಗೆಯೇ ಸೋಮವಾರ ಉಳಿದ ಬೇಡಿಕೆಗಳಿಗೆ ಸಂಬಂಧಿಸಿ ಜಂಟಿ ಸಭೆ ನಡೆಯುತ್ತಿದೆ. ಹೀಗಾಗಿ ಸದ್ಯ ಅಂಗನವಾಡಿ ನೌಕರರ ಅನಿರ್ದಿಷ್ಟ ಹೋರಾಟವನ್ನು ಹಿಂಪಡೆಯಲಾಗಿದೆ ವರಲಕ್ಷ್ಮಿ ಹೇಳಿದ್ದಾರೆ.