ಆನೇಕಲ್:ಅಂದಾಜು₹2.40 ಲಕ್ಷ ಬೆಲೆ ಬಾಳುವ 6 ಡಿಯೋ ಬೈಕ್ಗಳನ್ನು ಕದ್ದ ಆರೋಪಿಯನ್ನು ಆನೇಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ತಮಿಳುನಾಡು ಮೂಲದ ಶೇಕ್ ಆಸಿಫ್ (23) ಸದ್ಯಕ್ಕೆ ಆನೇಕಲ್ ಗೌರೇನಹಳ್ಳಿಯಲ್ಲಿ ವಾಸವಿದ್ದ. ಸಹಚರರೊಡನೆ ಕಳ್ಳತನಕ್ಕೆ ಇಳಿಯುತ್ತಿದ್ದ ಈತ ಈ ಹಿಂದೆ ತಮಿಳುನಾಡಿನ ಹೊಸೂರಿನಲ್ಲಿ ದರೋಡೆಗೆ ಯತ್ನಿಸಿದ್ದು, ಪ್ರತಿರೋಧಿಸಿದವರನ್ನು ಹತ್ಯೆಗೈದ ಆರೋಪ ಎದುರಿಸುತ್ತಿದ್ದಾನೆ.
ಸಾಮಾನ್ಯವಾಗಿ ಡಿಯೋ ಬೈಕ್ಗಳನ್ನೇ ಎಲ್ಲೆಂದರಲ್ಲಿ ನುಗ್ಗಿಸಬಹುದೆಂದು ಅವುಗಳನ್ನೇ ಕದಿಯುತ್ತಿದ್ದೆ. ಬಣ್ಣ, ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದೆ ಎಂದು ಆತ ಹೇಳಿದ್ದಾನೆ. ಆರು ಬೈಕ್ಗಳಲ್ಲಿ ಜಿಗಣಿಯಲ್ಲಿ ಎರೆಡು, ಸೂರ್ಯನಗರ 2, ಅತ್ತಿಬೆಲೆ 1 ಮತ್ತು ಆನೇಕಲ್ ಭಾಗದಲ್ಲಿ 1 ಬೈಕ್ ಕದ್ದಿದ್ದು, ಇನ್ನೂ ಕೆಲ ಬೈಕ್‌ಗಳು ಮತ್ತು ಕೆಲ ಆರೋಪಿಗಳು ಪತ್ತೆಯಾಗಬೇಕಿವೆ ಎಂದು ಪೊಲೀಸರು ಹೇಳಿದ್ದಾರೆ.
ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್‌ನೊಂದಿಗೆ ಪರಾರಿಯಾಗುತ್ತಿದ್ದ ಇಬ್ಬರ ಬಂಧನ:ಒಎಲ್ಎಕ್ಸ್ನಲ್ಲಿ ಜಾಹೀರಾತು ಕೊಡುವ ಬೈಕ್ ಮಾಲೀಕರನ್ನು ಫೋನ್ ಮಾಡಿ ಭೇಟಿಯಾಗಿ, ಬಳಿಕ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಬೈಕ್‌ಸಮೇತ ಪರಾರಿಯಾಗುತ್ತಿದ್ದ ಇಬ್ಬರನ್ನು ಯಲಹಂಕ ಪೊಲೀಸರು (ನವೆಂಬರ್ 25-2022) ಬಂಧಿಸಿದ್ದರು. ಮಹಮ್ಮದ್ ನಸೀಫ್ ಎಂಬುವರು ಯಲಹಂಕದ ರೇವಾ ಸರ್ಕಲ್ ಬಳಿ ಬೈಕ್ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದರು. ಇವರಿಗೆ ಫೋನ್ಗೆ ಕರೆ ಮಾಡಿದ ಬೈಕ್ ಕಳ್ಳರು, ನವೆಂಬರ್ 13 ರ ರಾತ್ರಿ 9 ಗಂಟೆಗೆ ಬೈಕ್ ನೋಡಲು ಸ್ಥಳಕ್ಕೆ ಬಂದಿದ್ದರು. ಅನಂತರ ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ, ಬೈಕ್‌ನೊಂದಿಗೆ ಪರಾರಿಯಾಗಿದ್ದರು. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಬೆಂಗಳೂರಿನ ದೇವರಜೀವನಹಳ್ಳಿ ನಿವಾಸಿ ಯಾಸೀನ್ ಬೇಗ್ (22), ಬೆಂಗಳೂರಿನ ಗೋವಿಂದಪುರದ ನಿವಾಸಿ ಇಮ್ರಾನ್ ಖಾನ್ (24) ಎಂಬಿಬ್ಬರನ್ನು ಬಂಧಿಸಿದ್ದರು. 15 ಲಕ್ಷ ರೂ. ಮೌಲ್ಯದ 19 ಸ್ಕೂಟರ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆರೋಪಿಗಳು 19 ಸ್ಕೂಟರ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್‌ನೊಂದಿಗೆ ಪರಾರಿಯಾಗುತ್ತಿದ್ದ ಇಬ್ಬರ ಬಂಧನ