ಬೆಂಗಳೂರು:ಆನೇಕಲ್ನ ಪ್ರತಿಷ್ಠಿತ ಕರಗ ಮಹೋತ್ಸವಕ್ಕೆ ಚುನಾವಣಾ ನೀತಿ ಸಂಹಿತೆ ತಡೆ ಒಂದೆಡೆಯಾದರೆ ಮತ್ತೊಂದೆಡೆ ಎರಡು ಬಣಗಳ ಕರಗ ಹೊರುವ ವಿಚಾರಕ್ಕೆ ಹೈಕೋರ್ಟ್ ಮೊರೆ ಹೋಗಿರುವುದು ಸಮಸ್ಯೆಯಾಗಿ ಕರಗ ಅಭಿಮಾನಿಗಳಲ್ಲಿ ನಿರಾಸೆಯುಂಟು ಮಾಡಿದೆ. ಐತಿಹಾಸಿಕ ಆನೇಕಲ್ ಧರ್ಮರಾಯಸ್ವಾಮಿ ದ್ರೌಪತಾಂಭ ಕರಗ ಹೊರುವ ವಿಚಾರಕ್ಕೆ ಕೊಲೆಯೂ ನಡೆದು ದಶಕಗಳ ಕಾಲ ಕರಗ ಮಹೋತ್ಸವ ನಿಂತಿತ್ತು. ಈ ಹಿನ್ನೆಲೆ ರಾಜಕಾರಣಿಗಳ ಪ್ರತಿಷ್ಟೆಯೂ ಸೇರಿ ಕರಗ ಮತ್ತೊಮ್ಮೆ ನಡೆಯುವಂತೆ ಚಾಲನೆ ದೊರೆತಿದ್ದು, ಆನೇಕಲ್ ಸುತ್ತಲ ಜನ ಸಂಭ್ರಮಿಸುವಂತಾಗಿತ್ತು. ಈ ಬೆಳವಣಿಗೆ ಹೆಚ್ಚು ಕಾಲ ಉಳಿಯದೇ ಎರಡು ಬಣಗಳ ವಾದ - ಪ್ರತಿವಾದ ಹೈಕೋರ್ಟ್ ಮೆಟ್ಟಿಲೇರಿ ಪ್ರತಿಷ್ಟೆಯ ಕಣವಾಗಿ ಈಗಲೂ ಮುಂದುವರೆದಿದೆ.
ಧರ್ಮರಾಯಸ್ವಾಮಿ ದ್ರೌಪತಾಂಭ ದೇವಾಲಯ ಪ್ರಧಾನ ಅರ್ಚಕ ಅರ್ಜುನಪ್ಪ ಹಾಗೂ ವಹ್ನಿಕುಲ ಸೇವಾ ಸಂಘದ ಚಂದ್ರಪ್ಪ ಕರಗ ಹೊರುವ ಜವಾಬ್ದಾರಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಹೀಗಿರುವಾಗ ಆನೇಕಲ್ ತಹಶೀಲ್ದಾರ್ ಎರಡು ಬಾರಿ ಕರೆದಿದ್ದ ಉಭಯ ಮುಖಂಡರ ಸಭೆಯಲ್ಲಿ ‘ಚುನಾವಣಾ ನೀತಿ ಸಂಹಿತೆ’ಯ ವಿಚಾರ ಮುಂದಿಟ್ಟು ಪ್ರಧಾನ ಅರ್ಚಕ ಅರ್ಜುನಪ್ಪ ಧರ್ಮರಾಯಸ್ವಾಮಿ ದೇವಾಲಯದ ಆವರಣದೊಳಗೆ ಸಾಂಪ್ರಾದಾಯಿಕ ಪೂಜಾ ವಿಧಾನಗಳನ್ನಷ್ಟೇ ಮಾಡಿಕೊಳ್ಳುವಂತೆ ತೀರ್ಮಾನ ಹೊರಹಾಕಿದ್ದರು. ಅದರಂತೆ ಎರಡು ಕಡೆಯ ಮುಖಂಡರು ಒಪ್ಪಿ ಹೊರ ಬಂದಿದ್ದರೂ ಸಹ ತಮ್ಮ ತಮ್ಮ ಮನವಿಗಳನ್ನು ತಹಶೀಲ್ದಾರರಿಗೆ ನೀಡಿದ್ದರು.
ಹೀಗಿರುವಾಗ ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಕುಲಸ್ಥ ಚಂದ್ರಪ್ಪ ಕರಗ ಹೊರುವ ಜವಾಬ್ದಾರಿಯನ್ನು ತನಗೆ ನೀಡುವಂತೆ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಮುಜರಾಯಿ ಆಯುಕ್ತರಿಗೆ ನಿರ್ದೇಶನದ ಆದೇಶ ಹೊರ ಬಿದ್ದಿದೆ. ಆದರೆ, ಚಂದ್ರಪ್ಪನ ಪರ ವಕೀಲರು ಹಾಗೂ ಕುಲಸ್ಥರು ಮುಜರಾಯಿ ಆಯುಕ್ತರ ಬದಲು ತಹಶೀಲ್ದಾರ್ಗೆ ಆದೇಶ ತಂದು ಕೊಟ್ಟು ನಿರ್ದೇಶನ ನೀಡುವಂತೆ ಒತ್ತಡ ಹೇರಿದ್ದರ ಪರಿಣಾಮ ತಹಶೀಲ್ದಾರ್ ಶಿವಪ್ಪ ಲಮ್ಹಾಣಿ ಮುಜರಾಯಿ ಇಲಾಖೆಯ ಆಯುಕ್ತರಿಗೆ ಈವರೆಗೆ ಸಲ್ಲಿಸಲಾಗಿರುವ ಮನವಿಗಳು ನೀತಿ ಸಂಹಿತೆಯ ಹಿನ್ನೆಲೆ ಹಾಗೂ ಇಡೀ ಸಭೆಯ ನಡಾವಳಿ ಕುರಿತು ಪರಿಶೀಲಿಸಿ ಕರಗೋತ್ಸವ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.