ಬೆಂಗಳೂರು: ಆನೇಕಲ್ ವಿಧಾನಸಭಾ ಕ್ಷೇತ್ರ ಬೆಂಗಳೂರು ನಗರದ ಹೊರವಲಯದಲ್ಲಿರುವ ಪ್ರಮುಖ ರಣಕಣವಾಗಿದೆ. ಪ್ರತಿಷ್ಠಿತ ಐಟಿ ಕಂಪನಿಗಳಿಗೆ ಆಶ್ರಯ ತಾಣವಾಗಿರುವ ಆನೇಕಲ್ ಕ್ಷೇತ್ರ ಸದ್ಯ ಕೈ ವಶದಲ್ಲಿದೆ. ಕಾಂಗ್ರೆಸ್ ಬಿಗಿ ಹಿಡಿತದಲ್ಲಿರುವ ಆನೇಕಲ್ ರಣಕಣದ ಚಿತ್ರಣ ಏನಿದೆ ಎಂಬ ವರದಿ ಇಲ್ಲಿದೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ ಆನೇಕಲ್ ಕ್ಷೇತ್ರ ಹಲವು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಿಗೆ ತಾಣವಾಗಿದೆ. ಕ್ಷೇತ್ರ ತಮಿಳುನಾಡಿನ ಹೊಸೂರಿಗೆ ಹೊಂದಿಕೊಂಡಿರುವ ಕ್ಷೇತ್ರವಾಗಿದ್ದು, ಗ್ರಾಮೀಣ ಮತ್ತು ನಗರೀಕರಣದ ಸಮೀಕರಣದೊಂದಿಗೆ ಅತಿ ವೇಗದಲ್ಲಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಆನೇಕಲ್ ವಿಧಾನಸಭೆ ಕ್ಷೇತ್ರ ಸದ್ಯಕ್ಕೆ ಕಾಂಗ್ರೆಸ್ ಕೋಟೆಯಾಗಿದೆ. ಕಾಂಗ್ರೆಸ್ ಹಾಲಿ ಶಾಸಕ ಬಿ. ಶಿವಣ್ಣ ಕ್ಷೇತ್ರವನ್ನು ಕೈ ವಶ ಮಾಡಿಕೊಂಡಿದ್ದಾರೆ. ಇನ್ಫೋಸಿಸ್, ವಿಪ್ರೊ, ಬೈಯಾಕಾನ್, ಟಿಸಿಎಸ್, ಅಸೆಂಚರ್ ಸೇರಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಆನೇಕಲ್ ಕ್ಷೇತ್ರದಲ್ಲಿದೆ. ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಈ ಭಾಗದಲ್ಲಿ ವಲಸಿಗರೇ ಹೆಚ್ಚು. ಸತತ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿರುವ ಶಿವಣ್ಣ ಕ್ಷೇತ್ರವನ್ನು ಸದ್ಯ ತಮ್ಮ ಬಿಗಿ ಹಿಡಿತದಲ್ಲಿ ಇಟ್ಟಿದ್ದಾರೆ. ಈ ಮುಂಚೆ ಆನೇಕಲ್ ವಿಧಾನಸಭೆ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿತ್ತು. ಬಳಿಕ ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಆನೇಕಲ್ ಕಾಂಗ್ರೆಸ್ ಪಾಲಾಗಿದೆ.
ಕಾಂಗ್ರೆಸ್-ಬಿಜೆಪಿ ಮಧ್ಯೆಯೇ ತೀವ್ರ ಪೈಪೋಟಿ: ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ತೀವ್ರ ಪೈಪೋಟಿ ಇರುವುದು. ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆನೇ ನೇರ ಪೈಪೋಟಿ ಏರ್ಪಟ್ಟಿತ್ತು. ಈ ಮುಂಚೆ ಬಿಜೆಪಿಯ ಭದ್ರಕೋಟೆಯಾಗಿದ್ದ ಆನೇಕಲ್ ಕ್ಷೇತ್ರ 2013 ಬಳಿಕ ಕಾಂಗ್ರೆಸ್ ಪಾಲಾಗಿದ್ದು ಇತಿಹಾಸ. ಸತತ ಎರಡೂ ಬಾರಿ ಕಾಂಗ್ರೆಸ್ನ ಬಿ.ಶಿವಣ್ಣ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಬಾರಿ ಹ್ಯಾಟ್ರಿಕ್ ನಗು ಬೀರಲು ಓಡಾಟ ನಡೆಸುತ್ತಿದ್ದಾರೆ. ಆನೆಕಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ತಿಬೆಲೆ, ಸರ್ಜಾಪುರ ಮತ್ತು ಜಿಗಣಿ ಕೈಗಾರಿಕಾ ಪ್ರದೇಶಗಳಿವೆ. ಕ್ಷೇತ್ರದ ಹಲವು ಭಾಗ ಗ್ರಾಮೀಣ ಪ್ರದೇಶವಾಗಿದ್ದು, ಕೃಷಿ ಮೂಲ ಕಸುಬಾಗಿದೆ. ಈಗಿನ ಕಾಂಗ್ರೆಸ್ ಶಾಸಕ ಶಿವಣ್ಣ ಬಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿದ್ದು, ರೆಡ್ಡಿ ಸಮುದಾಯದ ಮೇಲೆ ಪ್ರಭಾವ ಬೀರಿದ್ದಾರೆ. ಕಾಂಗ್ರೆಸ್ ಈ ಬಾರಿಯೂ ಬಿ.ಶಿವಣ್ಣಗೆ ಟಿಕೆಟ್ ಘೋಷಣೆ ಮಾಡಿದೆ.
ಬಿಜೆಪಿಯ ಜನಪ್ರಿಯ ಶಾಸಕರಲ್ಲಿ ಒಬ್ಬರಾಗಿದ್ದ ಎ. ನಾರಾಯಣಸ್ವಾಮಿ ಹಿಂದೆ ಇದೇ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರೂ ಆಗಿದ್ದರು. ಆದರೆ, ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದರು. ಕೇಂದ್ರ ಸಚಿವ ಆನೇಕಲ್‌ನ ಎ.ನಾರಾಯಣಸ್ವಾಮಿ ಅವರು ನಾಲ್ಕು ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದರು. ಬಳಿಕ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಎಂಪಿಯಾಗಿ ಚುನಾಯಿತರಾದರು. ಎ.ನಾರಾಯಣಸ್ವಾಮಿ ಪ್ರಭಾವ ಈ ಕ್ಷೇತ್ರದಲ್ಲಿ ಬಹಳಷ್ಟಿದೆ. ಈ ಬಾರಿಯೂ ಎ.ನಾರಾಯಣ ಸ್ವಾಮಿಯವರನ್ನು ಕಣಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿವೆ. ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ.
ಉಳಿದಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹುಲ್ಲಹಳ್ಳಿ ಶ್ರೀನಿವಾಸ್, ಬಂಡಾಪುರ ರಾಮಚಂದ್ರ ಸೇರಿ ಅನೇಕರು ಬಿಜೆಪಿ ಆಕಾಂಕ್ಷಿಗಳಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೇ ತನ್ನದೇ ಆದ ಮತಬ್ಯಾಂಕ್ ಇದ್ದು, ಈ ಬಾರಿ ಕೈ ವಶದಿಂದ ಆನೇಕಲ್ ಕ್ಷೇತ್ರವನ್ನು ಮರುವಶ ಮಾಡಲು ತಂತ್ರ ರೂಪಿಸುತ್ತಿದ್ದಾರೆ. ಇತ್ತ ಜೆಡಿಎಸ್ ಈ ಬಾರಿ ಕೆ.ಪಿ. ರಾಜು ಅವರನ್ನು ಕಣಕ್ಕಿಳಿಸುತ್ತಿದೆ. ಕ್ಷೇತ್ರದೆಲ್ಲೆಡೆ ಪ್ರಚಾರದಲ್ಲಿ ನಡೆಸುತ್ತಿದ್ದಾರೆ. ಇನ್ನು ಎಎಪಿ ಹಾಗೂ ಬಿಸ್ಪಿ ಕೂಡ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದು, ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.