ಕರ್ನಾಟಕ

karnataka

ETV Bharat / state

ಅನಂತ್ ನಾಗ್ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಭಿನಯದ ಹೊಸ ಮಾದರಿ: ಪ್ರಕಾಶ ಬೆಳವಾಡಿ

ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಸಿನಿ ಅಕಾಡೆಮಿ ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ‘ಅನಂತ್ ನಾಗ್ ಉತ್ಸವ'ದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ananthnag-is-global-level-actor-says-prakash-belavadi
ಅನಂತ್ ನಾಗ್ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಭಿನಯದ ಹೊಸ ಮಾದರಿ: ಪ್ರಕಾಶ ಬೆಳವಾಡಿ

By ETV Bharat Karnataka Team

Published : Sep 13, 2023, 9:02 PM IST

ಬೆಂಗಳೂರು: ಅನಂತನಾಗ್ ಜಾಗತಿಕ ಮಟ್ಟದ ಕಲಾವಿದರಾಗಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇ ನಮ್ಮೆಲ್ಲರ ಪುಣ್ಯ ಎಂದು ಸುಚಿತ್ರ ಸಿನಿ ಅಕಾಡೆಮಿ ಅಧ್ಯಕ್ಷ, ನಿರ್ದೇಶಕ, ಕಲಾವಿದ ಪ್ರಕಾಶ ಬೆಳವಾಡಿ ಹೇಳಿದರು. ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಸಿನಿ ಅಕಾಡೆಮಿ ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ‘ಅನಂತ್ ನಾಗ್ ಉತ್ಸವ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾತ್ರದ ಸ್ವರೂಪವನ್ನು ಅರಿತು ಅದನ್ನು ಸೂಕ್ತವಾಗಿ ವಿಸ್ತರಿಸಬಲ್ಲ ಅಸಾಮಾನ್ಯ ಕಲಾವಿದರಾಗಿರುವ ಅನಂತ್ ನಾಗ್ ಎಂದಿಗೂ ಸ್ಟಾರ್ ಗಿರಿಯ ಹಿಂದೆ ಬಿದ್ದವರಲ್ಲ. ಅಭಿಮಾನಿ ಸಂಘಗಳನ್ನು ಕಟ್ಟಲು ಅವಕಾಶ ಕೊಟ್ಟವರಲ್ಲ. ಪ್ರಚಾರಕ್ಕೆ ಅಪೇಕ್ಷಿಸಿದವರಲ್ಲ ಎಂದು ಹೇಳಿದರು.

ಹೀಗಿದ್ದರೂ ಇಂದಿಗೂ ಬಹು ಬೇಡಿಕೆಯ ನಟರಾಗಿರುವುದು, ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿರುವುದು ಅಚ್ಚರಿ. ಅನಂತ್ ನಾಗ್ ಸಿನಿಮಾದಂತೆ ರಂಗಭೂಮಿಯಲ್ಲಿಯೂ ಅದ್ಭುತವಾದ ಕಲಾವಿದ. ಅವರ ಕುರಿತ ಉತ್ಸವ ನಡೆಯುತ್ತಿರುವುದು, ಇದರಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಸಂತೋಷದ ಸಂಗತಿ ಎಂದರು.

ಸ್ವಾಗತ ಭಾಷಣ ಮಾಡಿದ ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್.ಸುರೇಶ್, ಭಾರತೀಯ ವಿದ್ಯಾ ಭವನದ ಹಳೆಯ ವಿದ್ಯಾರ್ಥಿಯಾಗಿರುವ ಅನಂತ್ ನಾಗ್ ಭವನದ ಮೇಲಿನ ಪ್ರೀತಿಯಿಂದ ಈ ಉತ್ಸವ ನಡೆಸುವ ಅವಕಾಶವನ್ನು ನಮಗೆ ನೀಡಿದ್ದಾರೆ. ಕನ್ನಡ ಚಿತ್ರರಂಗದ ವಿಸ್ಮಯ ಎಂದೇ ಕರೆಸಿಕೊಂಡಿರುವ ಅವರ ಕುರಿತು ಕಾರ್ಯಕ್ರಮವನ್ನು ರೂಪಿಸುವ ಅವಕಾಶ ನಮಗೆ ಸಿಕ್ಕಿದ್ದು ಸಂತೋಷದ ಸಂಗತಿ. 75 ವರ್ಷ ತುಂಬಿರುವ ಅನಂತ್ ನಾಗ್ ಅವರ ನೂರನೇ ವರ್ಷದ ಕಾರ್ಯಕ್ರಮವನ್ನು ಆಚರಿಸುವ ಅವಕಾಶ ನಮಗೆ ಸಿಗಲಿ ಎಂದು ಹೇಳಿದರು.

ಮಾಧ್ಯಮ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಲಂಕೇಶ್ ಪತ್ರಿಕೆಯಲ್ಲಿ ತಾವು ಕೆಲಸ ಮಾಡುತ್ತಿದ್ದಾಗ ಲಂಕೇಶ್ ಅವರ ಒತ್ತಾಯದಿಂದ ‘ನನ್ನ ತಮ್ಮ ಶಂಕರ’ ಅಂಕಣವನ್ನು ಅನಂತ್ ನಾಗ್ ಬರೆದರು. ಪತ್ರಕರ್ತನಿಗಿರುವ ನಿಷ್ಠೆಯಿಂದಲೇ ಬರೆದ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಕೂಡ ಅದನ್ನು ತಪ್ಪಿಸಿದವರಲ್ಲ. ಯಾವುದೇ ವಿಷಯದಲ್ಲಿ ಪೂರ್ಣತೆಗೆ ತುಡಿವ ಅವರು ಅಸಾಮಾನ್ಯ ಓದಿನ ಹಸಿವಿರುವ ವ್ಯಕ್ತಿ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ ರಾಜ್ ಮಾತನಾಡಿ, ಅನಂತ್ ನಾಗ್ ನನ್ನ ಪಾಲಿಗೆ ಹಿರಿಯಣ್ಣನಂತೆ ಇರುವವರು. ಸದಾ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ನಿರ್ದೇಶಕರ ಪಾಲಿಗೆ ಅವರು ಟೆರರ್ ಎಂಬ ಮಾತಿದೆ. ಆದರೆ ಹೀಗೆ ಮಾಡುವ ಮೂಲಕವೇ ಅನಂತ್ ಅನೇಕ ನಿರ್ದೇಶಕರನ್ನು ಬೆಳೆಸಿದರು. ಕನ್ನಡದಲ್ಲಿ ಕಲಾತ್ಮಕ ಚಳವಳಿ ರೂಪುಗೊಳ್ಳುವಲ್ಲಿ ಅವರ ಕೊಡುಗೆ ಬಹಳಷ್ಟಿದೆ. ಅವರ ಮೂಲಕವೇ ಉತ್ತಮ ನಿರ್ದೇಶಕರು ಎನ್ನಿಸಿಕೊಂಡ ಪ್ರಶಸ್ತಿಗಳನ್ನು ಪಡೆದವರ ಸಂಖ್ಯೆ ಕೂಡ ದೊಡ್ಡದಾಗಿದೆ. ಆದರೆ, ಅನಂತ್ ಎಲ್ಲಕ್ಕೂ ನಿರ್ಲಿಪ್ತರು. ಅವರಿಗೆ ಪದ್ಮ ಪ್ರಶಸ್ತಿ ಮಾತ್ರವಲ್ಲ, ದಾದ ಸಾಹೇಬ್​​ ಫಾಲ್ಕೆ ಪ್ರಶಸ್ತಿ ಕೂಡ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಅನಂತ್ ನಾಗ್ ಅವರ ನಿಕಟ ಒಡನಾಡಿ ಕಲಾವಿದ ರಮೇಶ್ ಭಟ್ ಮಾತನಾಡಿ, ಅನಂತ್ ಸದಾ ಹೊಸತನಕ್ಕೆ ತುಡಿಯುತ್ತಿರುವ ಕಲಾವಿದ. ಮಾಲ್ಗುಡಿ ಡೇಸ್ ರೂಪುಗೊಳ್ಳಲು ಕೂಡ ಅವರೇ ಕಾರಣ. ಅವರ ನಿರ್ಮಾಣದ ಚಿತ್ರಗಳಲ್ಲಿ ಭಾಗವಹಿಸಿ ನಿಕಟವಾಗಿ ಅವರ ಕಾರ್ಯ ವೈಖರಿಯನ್ನು ಗಮನಿಸಿದ್ದೇನೆ. ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರವನ್ನು ನಿರ್ಮಿಸುವ ಸಂದರ್ಭದಲ್ಲಿ ಅವರು ನೀಡಿದ ಪ್ರೋತ್ಸಾಹವನ್ನು ನೆನಪಿಸಿಕೊಳ್ಳುವಂತದ್ದು. ಮೇಲ್ನೋಟಕ್ಕೆ ಒರಟಾಗಿ ಕಂಡರೂ ಅದರ ಉದ್ದೇಶ ಒಳ್ಳೆಯದೇ ಆಗಿರುತ್ತಿತ್ತು. ಅನಂತ್ ನಾಗ್ ಯಾವುದೇ ಪಾತ್ರ ನೀಡಿದರೂ ಅದಕ್ಕೆ ಘನತೆ ತಂದು ಕೊಡುವ ಕಲಾವಿದರು ಎಂದು ವರ್ಣಿಸಿದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಸುಚಿತ್ರ ಫಿಲಂ ಸೊಸೈಟಿಯ ಅಧ್ಯಕ್ಷ ಎಚ್.ಎನ್.ನರಹರಿ ರಾವ್ ಮಾತನಾಡಿ, ಅನಂತ್ ನಾಗ್ ಹಂಸ ಗೀತೆ, ಸ್ವಾತಿ ತಿರುನಾಳ್ ಅಂತಹ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಲು ಅವರಿಗಿದ್ದ ಸಂಗೀತ ಹಿನ್ನೆಲೆಯೇ ಕಾರಣ. ಯಾವುದೇ ಪಾತ್ರವನ್ನು ನೀಡಿದರೂ ಅದನ್ನು ಆಳವಾಗಿ ಅಧ್ಯಯನ ಮಾಡಿ ಅಭಿನಯಿಸುವ ಅನಂತ್ ನಾಗ್ ಒಬ್ಬ ಸರ್ವ ಶ್ರೇಷ್ಠ ಕಲಾವಿದ ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾ ಭವನದ ಮಾಧ್ಯಮ ಭಾರತಿ ನಿರ್ದೇಶಕ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ, ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ರಾವ್ ಸೇರಿದಂತೆ ಭಾರತೀಯ ವಿದ್ಯಾ ಭವನ ಮತ್ತು ಸುಚಿತ್ರ ಸಿನಿ ಅಕಾಡಮಿ ಪದಾಧಿಕಾರಿಗಳು, ಅನಂತ್ ನಾಗ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನೆಯ ಕಾರ್ಯಕ್ರಮದ ನಂತರ ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಸಿನಿ ಅಕಾಡಮಿ ಎರಡೂ ಕಡೆ ಅನಂತ್ ಚಿತ್ರಗಳ ಉತ್ಸವ ಆರಂಭವಾಯಿತು. ‘ಅನಂತ್ ನಾಗ್’ ಕುರಿತ ವಿಚಾರ ಸಂಕಿರಣ ಕೂಡ ನಡೆಯಿತು.

ಇದನ್ನೂ ಓದಿ :ಅದಿತಿ ಪ್ರಭುದೇವ ಮನಸು ಕದಿಯಲು ಸರ್ಕಸ್ ಮಾಡುತ್ತಿರೋ ಈರೇಗೌಡ

ABOUT THE AUTHOR

...view details