ಬೆಂಗಳೂರು :ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲು ಆತ್ಮೀಯ ಸ್ನೇಹಿತ ಅನಂತಕುಮಾರ್ ಅವರ ಪರಿಶ್ರಮ ಕಾರಣ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ದಿ. ಅನಂತಕುಮಾರ್ ಅವರ 61ನೇ ಜನ್ಮ ದಿನಾಚರಣೆಯ ಅಂಗವಾಗಿ ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಅನಂತ ನಮನ ಕಾರ್ಯಕ್ರಮದಲ್ಲಿ ಅನಂತಪಥ ಮಾಸಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದಿವಗಂತ ಅನಂತಕುಮಾರ್ ಅವರ 61ನೇ ಜನ್ಮದಿನಾಚರಣೆ ನನ್ನ ಆತ್ಮೀಯ ಸ್ನೇಹಿತ ಅನಂತ್‌ಕುಮಾರ್ ಅವರನ್ನು ಕಳೆದುಕೊಂಡು ಆಗಲೇ ಎರಡು ವರ್ಷ ಕಳೆದಿವೆ. ಆದರೆ, ಅವರನ್ನು ನಾನು ನೆನಪಿಸಿಕೊಳ್ಳದ ದಿನವೇ ಇಲ್ಲ ಎನ್ನಬಹುದು. ನಮ್ಮ ಸ್ನೇಹವು 30 ವರ್ಷಗಳಿಗಿಂತ ಹಿಂದಿನದು. ಆಗ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಕಾರ್ಯಕರ್ತರಾಗಿದ್ದ ಅನಂತಕುಮಾರ್ ಅವರಲ್ಲಿ ನಾಯಕತ್ವದ ಆದರ್ಶ ಲಕ್ಷಣಗಳನ್ನು ಎಲ್ಲರೂ ಗುರುತಿಸಿದ್ದರು. ಮುಂದೆ ಅವರು ಗಳಿಸಿದ ಯಶಸ್ಸು ಯಾವ ಮಟ್ಟದ್ದೆಂಬುದನ್ನು ಎಲ್ಲರೂ ಬಲ್ಲರು. ರಾಜ್ಯದಲ್ಲಿ ಬಿಜೆಪಿಯನ್ನ ಈ ಮಟ್ಟದಲ್ಲಿ ಬೆಳೆಸುವಲ್ಲಿ ಅವರ ಕೊಡುಗೆ ಅಪಾರ. ಅನಂತಕುಮಾರ್ ಅವರ ಪರಿಶ್ರಮದಿಂದ 4ನೇ ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ಸಿಕ್ಕಿದೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಈ ಸ್ಥಾನದಲ್ಲಿ ಕೂತಿದ್ದರೆ ಅದಕ್ಕೆ ಅನಂತಕುಮಾರ್ ಅವರ ಕೊಡುಗೆ ಅಪಾರ ಎಂದು ನೆನೆದರು.
ದೆಹಲಿಯಲ್ಲಿ 6 ಬಾರಿ ಸಂಸದನಾಗಿ ಕರ್ನಾಟಕವನ್ನು ಪ್ರತಿನಿಧಿಸಿ, ಕೇಂದ್ರ ಮಂತ್ರಿಯಾಗಿ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಎತ್ತರದ ನಾಯಕ ಎಂದು ಎಲ್ಲ ಜನರೂ ಅನಂತಕುಮಾರ್ ಅವರನ್ನು ಗುರುತಿಸುತ್ತಾರೆ, ಮಾತನಾಡುತ್ತಾರೆ. ಆದರೆ, ನನ್ನ ಮಟ್ಟಿಗೆ, ಅವರು ಅತ್ಯಂತ ಮಾನವೀಯತೆಯ ಸರಳ ಮನುಷ್ಯರಾಗಿದ್ದರು ಮತ್ತು ಅವರು ಯಾವಾಗಲೂ ಸಮಾಜದ ಕೊಟ್ಟ ಕೊನೆಯ ವ್ಯಕ್ತಿಯ ಹಿತಾಸಕ್ತಿಗಳನ್ನು ಕಾಪಾಡುವ ಆದರ್ಶ ಹೊಂದಿದ್ದರು. ಕರ್ನಾಟಕ ಮತ್ತು ಕನ್ನಡದ ಜನರು ಸದಾ ಅವರ ಹೃದಯದಲ್ಲಿದ್ದರು ಎಂದರು.
1980ರ ದಶಕದ ದಿನಗಳಲ್ಲಿ, ನಾನೂ ಅನಂತಕುಮಾರ್ ಅವರೂ ಮೊದಲಿನಿಂದಲೂ ರಾಜ್ಯದಲ್ಲಿ ಪಕ್ಷವನ್ನು ಮೊದಲ ಹೆಜ್ಜೆಯಿಂದ ಪ್ರಾರಂಭಿಸಿ ಕಟ್ಟುವ ಕೆಲಸ ಮಾಡಿದೆವು. ನಾವು ಪ್ರಯಾಣಿಸದೆ ಇದ್ದ ಒಂದು ಊರು, ತಾಲೂಕು ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಸಿಕ್ಕಿದ ಕೆಂಪು ಬಸ್, ಸೈಕಲ್-ಯಾವುದೇ ಸಾರಿಗೆ ಬಳಸಿ ತಿರುಗಾಡಿದೆವು. ಯಾರೋ ಸ್ನೇಹಿತರ ಮನೆಯಲ್ಲೋ ಕಾರ್ಯಕರ್ತರ ಮನೆಯಲ್ಲೋ ನಮ್ಮ ಊಟವಾಗುತ್ತಿತ್ತು.
ಆ ದಿನಗಳನ್ನು ನೆನೆದರೆ ನನ್ನ ಕಣ್ಣುಗಳನ್ನು ಇನ್ನೂ ಮಿಂಚುವಂತೆ ಮಾಡುತ್ತದೆ ಮತ್ತು ಈಗ ಅನಂತಕುಮಾರರ ಅಗಲಿಕೆ ನೆನೆದು ಕಣ್ಣುಗಳು ತೇವವಾಗುತ್ತವೆ. ಶ್ರೀಮತಿ ತೇಜಸ್ವಿನಿ ಅನಂತ್‍ಕುಮಾರ್ ಮತ್ತು ಅನಂತ್‍ಕುಮಾರ್ ಅವರ ನೂರಾರು ಹಿತೈಷಿಗಳು ಅವರ ಪರಂಪರೆ ಮುಂದುವರಿಸುತ್ತಿದ್ದಾರೆ ಮತ್ತು ಸಮಾಜಸೇವೆಯ ವಿಶಿಷ್ಟಕಾರ್ಯದಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡಿದ್ದಾರೆ. ಅವರ ಸೇವಾ ಮನೋಭಾವವನ್ನು ಕಂಡು ನನಗೆ ತುಂಬ ಸಂತೋಷವಾಗಿದೆ ಎಂದು ಹೇಳಿದರು.
ಪುಷ್ಪಾಂಜಲಿ ಅರ್ಪಿಸಿದ ಸಿ ಎಂ ಬಿಎಸ್ವೈ ಅನಂತ್ಕುಮಾರ್ ಅವರ ನಾಯಕತ್ವ ಮತ್ತು ಜೀವನದಿಂದ ನಾವು ಕಲಿಯಬಹುದಾದ ಪಾಠಗಳಿವೆ. ಈ ಉದ್ದೇಶಕ್ಕಾಗಿ ಸ್ಥಾಪಿಸಲಾದ ಅನಂತಕುಮಾರ್ ಪ್ರತಿಷ್ಠಾನವು, ಬೆಂಗಳೂರಿನಲ್ಲಿ ನಾಯಕತ್ವ ತರಬೇತಿ ಸಂಸ್ಥೆ ಮತ್ತು ಸಾರ್ವಜನಿಕ ನೀತಿ ನಿರೂಪಣಾ ಸಂಶೋಧನಾ ಕೇಂದ್ರ ಸ್ಥಾಪಿಸುತ್ತಿದೆ. ಇಂತಹ ಉದಾತ್ತ ಉಪಕ್ರಮವನ್ನು ಬೆಂಬಲಿಸಲು ನಮ್ಮ ರಾಜ್ಯಸರ್ಕಾರವೂ ಬದ್ಧ ಮತ್ತು ಈ ಉಪಕ್ರಮದಲ್ಲಿ ಪ್ರತಿಷ್ಠಾನಕ್ಕೆ ಆರ್ಥಿಕ ನೆರವು ನೀಡಲು ಸಂತೋಷ ಪಡುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಮೊದಲ ಕಂತಿನ ಐದು ಕೋಟಿ ರೂಪಾಯಿಗಳ ಹಣ ಬಿಡುಗಡೆ ಮಾಡಿದ್ದೇವೆ. ಈ ಉಪಕ್ರಮಕ್ಕೆ ನಮ್ಮ ಎಲ್ಲ ರೀತಿಯ ಬೆಂಬಲವೂ ಇರುತ್ತದೆ ಎಂಬ ಆಶ್ವಾಸನೆಯನ್ನು ಈ ಸಂದರ್ಭದಲ್ಲಿ ನೀಡಲು ನಾನು ಬಯಸುತ್ತೇನೆ ಎಂದರು.
ಅನಂತಕುಮಾರ್ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳಲ್ಲಿ ಅನಂತಕುಮಾರ್ ಅವರ ಜೀವನ ಆದರ್ಶಗಳನ್ನು ಕುರಿತ ಗ್ರಂಥಗಳ ಪ್ರಕಟಣೆ, ದೇಶ ಮೊದಲು ಎಂಬ ತತ್ವವನ್ನು ಮುಂದಿಟ್ಟುಕೊಂಡು ವೆಬಿನಾರ್, ಉಪನ್ಯಾಸಮಾಲೆ ಮೊದಲಾದವುಗಳ ಏರ್ಪಾಡು ಎಲ್ಲವೂ ಸೇರಿವೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಇಂದು ಬಿಡುಗಡೆಯಾಗುತ್ತಿರುವ ಅನಂತಪಥ ಮಾಸಪತ್ರಿಕೆಯೂ ಈ ನಿಟ್ಟಿನಲ್ಲಿ ಸಮಾಜಕ್ಕೆ ಒಳ್ಳೆಯ ಮೌಲ್ಯಗಳನ್ನು ಪರಿಚಯಿಸುವ, ಮಾರ್ಗದರ್ಶಕ ಸಂದೇಶ ನೀಡುವ ಉಪಯುಕ್ತ ಕೆಲಸ ಮಾಡಲಿ ಎಂದು ನಾನು ಹಾರೈಸುತ್ತೇನೆ ಎಂದರು.
ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಅನಂತಕುಮಾರ್ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಬಡಮಕ್ಕಳಿಗೆ ಊಟ ನೀಡುವಂತಹ ಆದರ್ಶ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು. ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಅನಂತಕುಮಾರ್ ಅವರು ನನ್ನ ರಾಜಕೀಯ ಗುರುಗಳು ಎಂದರೆ ತಪ್ಪಾಗಲಾರದು. ನನ್ನ ಕ್ಷಮತೆಯನ್ನು ಗಮನಿಸಿದ ಅವರು ವಕೀಲನಾಗಿದ್ದ ನನ್ನನ್ನು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಿದರು.
ನಾಯಕರನ್ನು ಗುರುತಿಸಿ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು. ಅನಂತಕುಮಾರ್ ನನ್ನ ಕುಟುಂಬದ ಸ್ನೇಹಿತ ಅಷ್ಟೇ ಅಲ್ಲದೆ ನನ್ನ ರಾಜಕೀಯ ಗುರು ಎನ್ನುವುದನ್ನ ಬಹಳ ಸಂದರ್ಭದಲ್ಲಿ ಹೇಳಿದ್ದೇನೆ. ಸ್ನೇಹ ಜೀವಿಯಾಗಿದ್ದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಕೊಂಡಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿ ಕಳೆದುಕೊಂಡಿರುವುದು ನಮಗೆಲ್ಲ ಆದ ವೈಯಕ್ತಿಕ ನಷ್ಟ ಅಲ್ಲದೆ ರಾಜ್ಯಕ್ಕೂ ತುಂಬಲಾರದ ನಷ್ಟ. ಅವರನ್ನು ನೆನಪಿಸಿಕೊಳ್ಳದ ದಿನಗಳೇ ಇಲ್ಲ ಎಂದು ಹೇಳಿದರು.
ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯದ ನಡುವೆ ಕೊಂಡಿ ಆಗಿದ್ದವರು ಅನಂತಕುಮಾರ್. ಕನ್ನಡದ ನೆಲ ಜಲದ ವಿಷಯ ಬಂದಾಗ ಬಿಟ್ಟು ಕೊಟ್ಟವರಲ್ಲ. ದೂರದೃಷ್ಟಿ ಉಳ್ಳಂತಹ ನಾಯಕ. ಅನಂತ್‍ಕುಮಾರ್ ಅವರ ಮೌಲ್ಯಗಳು, ನಾಯಕತ್ವದ ಶೈಲಿ ಮೊದಲಾದವನ್ನು ಪ್ರೇರಣೆಯಾಗಿ ಮುಂದಿಟ್ಟುಕೊಂಡು, ಉದಯೋನ್ಮುಖ ನಾಯಕತ್ವವನ್ನು ಬೆಳೆಸುವುದಕ್ಕಾಗಿ ಪ್ರತಿಷ್ಠಾನವು ಮಾರ್ಗದರ್ಶನ ಮಾಡುವುದು ಶ್ಲಾಘನೀಯ ಉದ್ದೇಶ. ಈ ಕಾರ್ಯದಲ್ಲಿ ಅನಂತ್‍ಕುಮಾರ್ ಪ್ರತಿಷ್ಠಾನಕ್ಕೆ ನಾನು ಯಶಸ್ಸನ್ನು ಬಯಸುತ್ತೇನೆ. ಪ್ರತಿಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲು ನಾವು ಸಿದ್ದವಿದ್ದು, ಸಾಯುವ ತನಕ ಪ್ರತಿಷ್ಠಾನದ ಜೊತೆ ಇರುವುದಾಗಿ ಸಚಿವರು ಭರವಸೆ ನೀಡಿದರು.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವರಾದ ಸಿ ಟಿ ರವಿ ಸೇರಿದಂತೆ, ಶಾಸಕ ರವಿ ಸುಬ್ರಮಣ್ಯ, ಆನ್‌ಲೈನ್ ಮೂಲಕ ಸಂಸದ ರಾಜೀವ್ ಚಂದ್ರಶೇಖರ್, ತಾರಾ ಅನುರಾಧ, ವಿಜಯಲಕ್ಷ್ಮಿ ಬಾಳೇಕುಂದ್ರಿ, ಅನಂತ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪಿ ವಿ ಕೃಷ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇಂದು ಬೆಳಗ್ಗೆ ದಿ. ಅನಂತಕುಮಾರ್ ಅವರ 61ನೇ ಜನ್ಮದಿನದ ಪ್ರಯುಕ್ತ ಅದಮ್ಯ ಚೇತನದ ಆವರಣದಲ್ಲಿ ಅನಂತಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ನಿಮ್ಹಾನ್ಸ್ ಆಸ್ಪತ್ರೆಯ ಆವರಣದಲ್ಲಿ 61 ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ನಿಮ್ಹಾನ್ಸ್ ನಿರ್ದೇಶಕರಾದ ಡಾ. ಗಂಗಾಧರ್, ಕುಲಸಚಿವರಾದ ಡಾ ಶಂಕರನಾರಾಯಣ, ಮಾಜಿ ಕುಲಸಚಿವರಾದ ಡಾ. ಶೇಖರ್, ಬಿಜೆಪಿ ಬೆಂ. ದಕ್ಷಿಣ ಜಿಲ್ಲಾಧ್ಯಕ್ಷ ಎನ್ ಆರ್ ರಮೇಶ್, ಬೆಂಗಳೂರು ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಪ್ರೊ. ಕೆ ಆರ್ ವೇಣುಗೋಪಾಲ್, ನಿಮ್ಹಾನ್ಸ್ ಗ್ರೀನ್ ಕಮಿಟಿಯ ಮುಖ್ಯಸ್ಥರಾದ ಡಾ ನಳಿನಿ, ಅನಂತಕುಮಾರ್ ಅವರ ಪುತ್ರಿಯರಾದ ಶ್ರೀಮತಿ ಐಶ್ವರ್ಯ ಹಾಗೂ ಕುಮಾರಿ ವಿಜೇತ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.