ಕರ್ನಾಟಕ

karnataka

ETV Bharat / state

ಅನಂತಕುಮಾರ್​ ಆಲೋಚನೆಗಳು, ಜನರ ಕಲ್ಯಾಣದ ಕಾರ್ಯಗಳು ಸ್ಪೂರ್ತಿದಾಯಕ: ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ - ಪಂಡಿತ್ ದೀನದಯಾಳ್ ಉಪಾಧ್ಯಾಯ

ನನಗೆ 25ಕ್ಕೂ ಹೆಚ್ಚು ವರ್ಷದಿಂದ ಅನಂತಕುಮಾರ್​ ಅವರ ಪರಿಚಯವಿತ್ತು. ಬಹಳ ಹತ್ತಿರದಿಂದ ಅವರನ್ನು ಬಲ್ಲವನಾಗಿದ್ದೆ. ಕೊನೆಯ ಕ್ಷಣದವರೆಗೂ ದಣಿವರಿಯಿಲ್ಲದೆ ಕೆಲಸ ಮಾಡಿದ ಕಾಯಕ ಯೋಗಿ ಅವರು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶ್ಲಾಷಿಸಿದರು.

Governor Gehlot laid laid flowers.
ಅನಂತ ನಮನ 64 ಕಾರ್ಯಕ್ರಮ ಪ್ರಯುಕ್ತ ಅನಂತಕುಮಾರ್​ರ ಭಾವಚಿತ್ರಕ್ಕೆ ರಾಜ್ಯಪಾಲರು ಗೆಹ್ಲೋಟ್ ಪುಷ್ಪಾರ್ಚಣೆ ಮಾಡಿದರು.

By ETV Bharat Karnataka Team

Published : Sep 22, 2023, 11:01 PM IST

ಬೆಂಗಳೂರು: ಜಗಜ್ಯೋತಿ ಬಸವಣ್ಣವರ ಕಾಯಕವೇ ಕೈಲಾಸ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯವನ್ನು ನಂಬಿದ್ದ ಅಜಾತ ಶತ್ರು ದಿ. ಅನಂತಕುಮಾರ್ ಅವರ ಚಿಂತನೆ, ಆಲೋಚನೆಗಳು, ದೂರದೃಷ್ಟಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಿದ ಕೆಲಸಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ನಗರದ ಬಸವನಗುಡಿಯಲ್ಲಿ ಅನಂತಕುಮಾರ್ ಅವರ 64ನೇ ವರ್ಷದ ಜನ್ಮದಿನಂದ ಅಂಗವಾಗಿ ಆಯೋಜಿಸಿದ್ದ ಅನಂತ ನಮನ 64 ಕಾರ್ಯಕ್ರಮದಲ್ಲಿ ಅನಂತ ಚೇತನ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ನನಗೆ 25 ಕ್ಕೂ ಹೆಚ್ಚು ವರ್ಷ ಅನಂತಕುಮಾರ್ ಅವರ ಪರಿಚಯವಿತ್ತು. ನನ್ನ ತವರು ರಾಜ್ಯ ಮಧ್ಯಪ್ರದೇಶದಲ್ಲಿ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಅವರೊಂದಿಗೆ ತುಂಬಾ ನಿಕಟವಾಗಿ ಕೆಲಸ ಮಾಡಿದ್ದೇನೆ. ಬಹಳ ಹತ್ತಿರದಿಂದ ಅವರನ್ನು ಬಲ್ಲವನಾಗಿದ್ದೇನೆ. ಕೊನೆಯ ಕ್ಷಣದವರೆಗೂ ದಣಿವರಿಯಿಲ್ಲದೆ ಕೆಲಸ ಮಾಡಿದ ಕಾಯಕ ಯೋಗಿ ಎಂದು ಗುಣಗಾನ ಮಾಡಿದರು.

ಅನಂತಕುಮಾರ್‌ ಸಾರ್ವಜನಿಕ ಜೀವನದಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಚಿರಸ್ಥಾಯಿಯಾಗಿದ್ದರು. ನಿಜವಾದ ದೇಶಭಕ್ತ, ಸಮಾಜ ಸೇವಕ, ಆದರ್ಶವಾದಿ ಮತ್ತು ಶಕ್ತಿಯುತ ಸಾರ್ವಜನಿಕ ಪ್ರತಿನಿಧಿಯೆಂದರೆ ಅದು ಅನಂತಕುಮಾರ್. ಪಕ್ಷದ ಸಂಘಟನೆಯ ಜವಾಬ್ದಾರಿಯಾಗಲಿ ಅಥವಾ ಸಮಾಜ ಸೇವಾ ಕಾರ್ಯವಾಗಲಿ ಅವರದೇ ಆದ ವಿಶಿಷ್ಟ ಜೀವನಶೈಲಿಯಿಂದ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಶ್ಲಾಘಿಸಿದರು.

1997ರಲ್ಲಿ ಅನಂತ್ ಕುಮಾರ್ ಅವರು ತಮ್ಮ ತಾಯಿ ಗಿರಿಜಾ ಶಾಸ್ತ್ರಿ ಅವರ ನೆನಪಿಗೆ ಅದಮ್ಯ ಚೇತನವನ್ನು ಪ್ರಾರಂಭಿಸಿದರು. ಅದರ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಕೆಲಸವನ್ನು ದಶಕಗಳಿಂದ ಮಾಡಲಾಗುತ್ತಿದೆ. ಅದಮ್ಯ ಚೇತನದಿಂದ ಅನ್ನ-ಅಕ್ಷರ-ಆರೋಗ್ಯ, ಮಧ್ಯಾಹ್ನದ ಊಟ ಕಾರ್ಯಕ್ರಮ, ಶೂನ್ಯತ್ಯಾಜ್ಯ ಅಡುಗೆ ಮನೆ, ಹಸಿರು ಭಾನುವಾರ, ಸಸಿಗಳ ನೆಡುವಿಕೆ ಹೀಗೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮದಡಿ ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ಥಾನದ ಜೋಧಪುರದಲ್ಲಿ ಪ್ರತಿದಿನ 1.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಬಿಸಿ, ರುಚಿ ಮತ್ತು ಪೌಷ್ಟಿಕ ಆಹಾರವನ್ನು ನೀಡುತ್ತಿರುವ ಅದಮ್ಯ ಚೇತನದ ಕೆಲಸ ಶ್ಲಾಘನೀಯ. ಈ ಪರಿಣತಿಯ ಜತೆಗೆ ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳನ್ನು ಹಸಿರಾಗಿಸುವಲ್ಲಿ ಅದಮ್ಯ ಚೇತನವೂ ಸಹಾಯ ಮಾಡುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಾರು ಮಕ್ಕಳಿಗೆ ಆಹಾರ ಪೂರೈಕೆ ಮಾಡುವ ಅದ್ಭುತವಾದ ಅದಮ್ಯ ಚೇತನ ಅಡುಗೆ ಮನೆ ನೋಡುವ ಅವಕಾಶ ಸಿಕ್ಕಿತು. ಅಡುಗೆ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ರಾಷ್ಟ್ರದ ಸೇವೆ ಮಾಡಲು ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಕಳೆದ ವರ್ಷ ಅನಂತ ಪ್ರೇರಣಾ ಕೇಂದ್ರ ಸ್ಥಾಪಿಸಲಾಗಿದೆ. ಅನಂತಕುಮಾರ್ ಅವರ ಚಿಂತನೆ ಮತ್ತು ಕಾರ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಅನಂತಕುಮಾರ್ ಪ್ರತಿಷ್ಠಾನ ಮಾಡುತ್ತಿರುವದಕ್ಕೆ ಎಂದು ಸಂತಸ ವ್ಯಕ್ತಪಡಿಸಿದರು.

ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ದೆಹಲಿಯ ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಶನ್‌ ನ ಇನ್ನೋವೇಟಿವ್‌ ಸೆಲ್‌ ಆಗಿರುವ ಇಂಡಿಯನ್‌ ನಾಲೇಜ್‌ ಸಿಸ್ಟಮ್‌ ಅನುದಾನದಡಿ ಅನಂತಕುಮಾರ್‌ ಪ್ರತಿಷ್ಠಾನದಿಂದ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರವನ್ನು ಜಯನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಪ್ರಶಿಕ್ಷಣ ಕೇಂದ್ರದ ಮೂಲಕ ಭಾರತೀಯ ಇತಿಹಾಸ, ಗಣಿತ, ವಾಸ್ತುಶಿಲ್ಪ, ಪುರಾಣದ ಬಗ್ಗೆ ನಮ್ಮ ಹಿರಿಯರ ದೃಷ್ಟಿಕೋನವನ್ನು ಇಂದಿನ ಪೀಳಿಗೆಯ ಪಠ್ಯಕ್ರಮದಲ್ಲಿ ಅಳವಡಿಸುವ ಉದ್ದೇಶ ಹೊಂದಿದ್ದೇವೆ. ಅನಂತಕುಮಾರ್‌ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ, ಪ್ರಾಧ್ಯಾಪಕ ಪಿ.ವಿ. ಕೃಷ್ಣ ಭಟ್, ನ್ಯಾಯಮೂರ್ತಿ ಎನ್. ಕುಮಾರ್ ಸೇರಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿಟಿ ರವಿ, ಮಾಜಿ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು ಹಾಜರಿದ್ದರು.

ಇದನ್ನೂಓದಿ:ರಾಜ್ಯದ ವಿದ್ಯುತ್‌ ಉತ್ಪಾದನೆ ಸ್ಥಾಪಿತ ಸಾಮರ್ಥ್ಯಕ್ಕಿಂತ ಕುಸಿದಿರುವುದು ಏಕೆ: ಅಧಿಕಾರಿಗಳಿಗೆ ಸಿಎಂ ಪ್ರಶ್ನೆ

ABOUT THE AUTHOR

...view details