ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಆನಂದ್ ಸಿಂಗ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮುಂದಿನ ರಾಜಕೀಯ ನಿರ್ಧಾರದ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
ಬಿಎಸ್ವೈ ಭೇಟಿಯಾಗಿ ನಿರ್ಗಮಿಸಿದ ಸಚಿವ ಆನಂದ್ ಸಿಂಗ್ : ಮಾಜಿ ಸಿಎಂ ನೀಡಿದ ಭರವಸೆ ಏನು? - Anand singh resign
ಬಿಎಸ್ವೈ ನಿವಾಸಕ್ಕೆ ಸಚಿವ ಆನಂದ್ ಸಿಂಗ್ ಹಾಗೂ ಶಾಸಕ ರಾಜುಗೌಡ ಆಗಮಿಸಿ ಮಾತುಕತೆ ಬಳಿಕ ವಾಪಸ್ ಆಗಿದ್ದಾರೆ. ಇಲ್ಲಿ ಖಾತೆ ಬದಲಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಬುಲಾವ್ ಹಿನ್ನಲೆ ಬೆಂಗಳೂರಿಗೆ ಆಗಮಿಸಿದ ಸಚಿವ ಆನಂದ್ ಸಿಂಗ್, ನೇರವಾಗಿ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಕಾವೇರಿಗೆ ಆಗಮಿಸಿದರು. ರಾಜೂಗೌಡ ಜೊತೆ ಆಗಮಿಸಿದ ಆನಂದ್ ಸಿಂಗ್ ಅರ್ಧ ಗಂಟೆ ಕಾಲ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ರಚನೆಗೆ ಕಾರಣರಾದವರ ಬಗ್ಗೆ ಯಾವುದೇ ನಿರ್ಲಕ್ಷ್ಯ ಇಲ್ಲ. ಆದರೆ, ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮವಾಗಿದೆ. ಹಾಗಾಗಿ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಯಡಿಯೂರಪ್ಪ ಸಲಹೆ ನೀಡಿದರು. ಸಿಎಂ ಬೊಮ್ಮಾಯಿ ಜೊತೆ ಮಾತುಕತೆ ನಂತರ ಮತ್ತೊಮ್ಮೆ ಚರ್ಚಿಸೋಣ, ಅಗತ್ಯ ಬಿದ್ದರೆ ಹೈಕಮಾಂಡ್ ಜೊತೆಯಲ್ಲೂ ಮಾತುಕತೆ ನಡೆಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.
ಯಡಿಯೂರಪ್ಪ ಭೇಟಿ ನಂತರ ಸಿಎಂ ಭೇಟಿಗೆ ಆನಂದ್ ಸಿಂಗ್ ಮುಂದಾದರು. ಆದರೆ, ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸರಣಿ ಸಭೆಗಳಲ್ಲಿ ಭಾಗಿಯಾಗಿದ್ದ ಹಿನ್ನಲೆ ಸಿಎಂ ಭೇಟಿ ಮಾಡದೇ ನೇರವಾಗಿ ವಸಂತನಗರದ ತಮ್ಮ ನಿವಾಸಕ್ಕೆ ತೆರಳಿದರು.ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಿಎಂ ಸಭೆ ಮುಗಿದ ನಂತರ ಆನಂದ್ ಸಿಂಗ್ ಮುಖ್ಯಮಂತ್ರಿಗಳ ಭೇಟಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.