ಬೆಂಗಳೂರು: ಬಿಜೆಪಿ ತೊರೆಯುವುದಿದ್ದರೆ ಡಿಕೆಶಿ ನಿವಾಸಕ್ಕೆ ಬ್ಯಾಕ್ ಡೋರ್ನಲ್ಲಿ ಹೋಗುತ್ತಿದ್ದೆ ಹೊರತು ನೇರವಾಗಿ ಹೋಗುತ್ತಿರಲಿಲ್ಲ. ಯಾವ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಮ್ಮ ನಾಯಕರಿಗೂ ಮಾಹಿತಿ ನೀಡಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿ.ಕೆ.ಶಿವಕುಮಾರ್ ಮನೆಗೆ ಹೋಗಬಾರದಿತ್ತು. ಈಗ ಅರಿವಿಗೆ ಬಂದಿದೆ, ನಾನು ಸ್ನೇಹದ ದೃಷ್ಟಿಯಿಂದ ಹೋಗಿದ್ದು. ಆದರೆ, ಅದರ ಬಗ್ಗೆ ಆಗುವ ಬೆಳವಣಿಗೆಗಳ ಬಗ್ಗೆ ಆಲೋಚನೆ ಮಾಡಿರಲಿಲ್ಲ.
ನಾನು ಹೋಗಿದ್ದ ಸನ್ನಿವೇಶ ಸರಿ ಇರಲಿಲ್ಲ. ಭೇಟಿ ಬಗ್ಗೆ ಸಿಎಂ ಹಾಗೂ ಯಡಿಯೂರಪ್ಪ ಇಬ್ಬರಿಗೂ ವಿವರಣೆ ಕೊಟ್ಟು ಸ್ಪಷ್ಟನೆ ಕೊಟ್ಟಿದ್ದೇನೆ ಎಂದು ವಿವರಿಸಿದರು. ಬಿಜೆಪಿ, ಯಡಿಯೂರಪ್ಪ ನಮಗೆ ವಿಜಯನಗರ ಜಿಲ್ಲೆ ಕೊಟ್ಟವರು, ಬಿಜೆಪಿ ಪಕ್ಷವನ್ನು ಬಿಡುವ ಬಗ್ಗೆ ಯೋಚನೆಯನ್ನೂ ಮಾಡಲ್ಲ.