ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಏಳು-ಬೀಳಿನ ಕತೆ ಏನು? ಮೈತ್ರಿ ಸರ್ಕಾರದ ಆಸಕ್ತಿಕರ ಸಂಗತಿ! - etv bharat kannada

ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಮೂರು ಬಾರಿ ರಚನೆಯಾಗಿದ್ದ ಮೈತ್ರಿ ಸರ್ಕಾರದ ಬಗೆಗಿನ ಕುತೂಹಲಕಾರಿ ವಿಶ್ಲೇಷಣೆ.

analysis-on-downfalls-of-the-coalition-government-in-the-state
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಏಳು ಬೀಳಿನ ಕತೆ ಏನು? ಇಲ್ಲಿದೆ ಮೈತ್ರಿ ಸರ್ಕಾರದ ಆಸಕ್ತಿಕರ ಸಂಗತಿ

By

Published : May 13, 2023, 6:13 AM IST

ಬೆಂಗಳೂರು: ರಾಜಕೀಯವಾಗಿ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ, ಕರ್ನಾಟಕದ ರಾಜಕೀಯವೇ ಬೇರೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ ಪೈಪೋಟಿ ನಡೆಸುತ್ತಿದ್ದರೂ ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಪ್ರಾಬಲ್ಯ ಹೊಂದಿಲ್ಲ ಎಂಬುದು ಗಮನಾರ್ಹ ಸಂಗತಿ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೈತ್ರಿ ಸರ್ಕಾರ ಪೂರ್ಣಗೊಂಡಿಲ್ಲ. ಯಾವುದೇ ಒಂದು ಪಕ್ಷ ಬಹುಮತದೊಂದಿಗೆ ಐದು ವರ್ಷಗಳ ಕಾಲ ಆಡಳಿತ ನಡೆಸಿರುವುದು ತುಂಬಾ ಕಡಿಮೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ನೋಡುವುದಾದರೆ ವಿಧಾನಸಭೆ ಚುನಾವಣೆಯಲ್ಲಿ ಹಲವು ಬಾರಿ ಅತಂತ್ರ ತೀರ್ಪು ಬಂದಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಮೊದಲ ಬಾರಿಗೆ 2004 ರಲ್ಲಿ ರಚನೆಯಾಯಿತು. ಅದಕ್ಕೂ ಮುನ್ನ ಕೆಲ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆಯಾದ ಉದಾಹರಣೆಯೂ ಇದೆ. 1983 ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಜನತಾ ಪಕ್ಷ 95 ಸ್ಥಾನ, ಕಾಂಗ್ರೆಸ್ 82 ಸ್ಥಾನ ಮತ್ತು ಬಿಜೆಪಿ 18 ಸ್ಥಾನ ಗಳಿಸಿತ್ತು. ಅಂದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಜನತಾ ಪಕ್ಷ ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತು.

ಈ ಮೂಲಕ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ 1983ರ ಜನವರಿ 10 ರಿಂದ 1985 ರ ಮಾರ್ಚ್ 7ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಆಡಳಿತ ನಡೆಸಿದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಹಿನ್ನೆಲೆಯಲ್ಲಿ ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಜನಾದೇಶ ಪಡೆಯಲು ಜನತೆಯ ಮುಂದೆ ಹೋದರು. ಹಾಗಾಗಿ ಕೇವಲ ಎರಡು ವರ್ಷಕ್ಕೆ ಬಾಹ್ಯ ಬೆಂಬಲದೊಂದಿಗೆ ರಚನೆಯಾದ ಸರ್ಕಾರ ಪತನವಾಯಿತು.

2004 ರಲ್ಲಿ ಅತಂತ್ರ ಸ್ಥಿತಿ: 2004ರ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ರಾಜ್ಯದ ಜನತೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ. ಹೀಗಾಗಿ ಸ್ವತಂತ್ರವಾಗಿ ಸರ್ಕಾರ ರಚನೆ ಸಾಧ್ಯವಾಗದೇ ಮೂರೂ ಪಕ್ಷಗಳು ಅತಂತ್ರ ಸ್ಥಿತಿಯಲ್ಲಿದ್ದವು. ಬಿಜೆಪಿ 79 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್‌ 65 ಹಾಗೂ ಜೆಡಿಎಸ್‌ 58 ಸ್ಥಾನಗಳನ್ನು ಗಳಿಸಿದರೆ, ಸಂಯುಕ್ತ ಜನತಾ ದಳ 5 ಸ್ಥಾನ ಗಳಿಸಿತ್ತು. ಪಕ್ಷೇತರರು 17 ಮಂದಿ ಗೆಲುವು ಸಾಧಿಸಿದ್ದರು.

ಆಗ ಕಾಂಗ್ರೆಸ್‌, ಜೆಡಿಎಸ್‌ ಜೊತೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಿತು. ಈ ಮೈತ್ರಿ ಸರ್ಕಾರ ಕೇವಲ 20 ತಿಂಗಳು ಮಾತ್ರ ಆಡಳಿತ ನಡೆಸಿತು. ಕಾಂಗ್ರೆಸ್‌ ಮೈತ್ರಿಯಿಂದ ಹೊರಬಂದ ಜೆಡಿಎಸ್‌, ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಸಖ್ಯ ಬೆಳೆಸಿತು. 20-20 ಸೂತ್ರದನ್ವಯ ರಚನೆಯಾದ ಸರ್ಕಾರದ ಮೊದಲ ಅವಧಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಬಿ.ಎಸ್‌.ಯಡಿಯೂರಪ್ಪ ಉಪಮುಖ್ಯಮಂತ್ರಿಯಾದರು. ಆದರೆ ಅಕ್ಟೋಬರ್‌ 2, 2007ಕ್ಕೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಬೇಕಾಗಿದ್ದ ಕುಮಾರಸ್ವಾಮಿ ಹಿಂದೇಟು ಹಾಕಿದ ಪರಿಣಾಮ ಬಿಜೆಪಿ ಬೆಂಬಲ ವಾಪಸ್‌ ಪಡೆಯಿತು.

ಸರ್ಕಾರ ಪತನವಾದ ಕೆಲವು ದಿನಗಳ ಬಳಿಕ ಮತ್ತೆ ದೋಸ್ತಿ ಕುದುರಿದ ಪರಿಣಾಮ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸುವ ವೇಳೆಗೆ ಮತ್ತೆ ಜೆಡಿಎಸ್ ತಗಾದೆ ತೆಗೆದ ಹಿನ್ನೆಲೆಯಲ್ಲಿ 6 ದಿನದಲ್ಲೇ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಗೆ ಆದ ಮೋಸವನ್ನು ಜನರ ಬಳಿ ಕೊಂಡೊಯ್ದರು. ಜೆಡಿಎಸ್‌ ನಿಂದ ಆದ ವಚನ ಭ್ರಷ್ಟತೆಯನ್ನು ಮುಂದಿಟ್ಟುಕೊಂಡು ಚುನಾವಣಾ ಅಖಾಡಕ್ಕೆ ಇಳಿದ ಯಡಿಯೂರಪ್ಪ ಪಕ್ಷವನ್ನು ರಾಜ್ಯಾದ್ಯಂತ ಪುನರ್‌ ಸಂಘಟಿಸುವಲ್ಲಿ ಯಶಸ್ವಿಯಾದರು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ‘ವಚನಭ್ರಷ್ಟ’ ಹಣೆಪಟ್ಟಿ ಅಂಟಿಕೊಂಡಿತು.

2008ರ ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿ ದೊಡ್ಡಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್‌ 80 ಸ್ಥಾನಗಳನ್ನು ಜಯಗಳಿಸಿದರೆ, ಜೆಡಿಎಸ್‌ ಕೇವಲ 28 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಉಳಿದಂತೆ ಪಕ್ಷೇತರ ಆರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆರು ಪಕ್ಷೇತರ ಶಾಸಕರ ನೆರವಿನಿಂದ ಸರ್ಕಾರ ರಚಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ದಕ್ಷಿಣ ಭಾರತದಲ್ಲೇ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಿ ಇತಿಹಾಸ ಬರೆಯಿತು.

ಸಂಖ್ಯಾಬಲದಿಂದ ಸರ್ಕಾರ ಸುಭದ್ರವಾಗಿದ್ದರೂ ಆಂತರಿಕ ಭಿನ್ನಮತ ಯಡಿಯೂರಪ್ಪ ಅವರನ್ನು ಕಾಡಿತು. ಪ್ರತಿಪಕ್ಷಗಳ ಹದ್ದಿನಕಣ್ಣು, ಸಾಲುಸಾಲು ಅವ್ಯವಹಾರದ ದಾಖಲೆಗಳು ಬಿಡುಗಡೆಯಾಗಿದ್ದು ಯಡಿಯೂರಪ್ಪ ಅವರನ್ನು ಮತ್ತಷ್ಟು ಹೈರಾಣಾಗಿಸಿತು. ಇದನ್ನೇ ಬಂಡವಾಳ ಮಾಡಿಕೊಂಡ ಕಾಂಗ್ರೆಸ್‌, ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಬಳ್ಳಾರಿಗೆ ಪಾದಯಾತ್ರೆ ನಡೆಸಿತು. ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾದ ಕಾರಣ ಜುಲೈ 31, 2011ರಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು.

ಇದಾಗಿ ದಶಕದ ನಂತರ ರಾಜ್ಯದಲ್ಲಿ ಮತ್ತೊಮ್ಮೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ (2018) ಮತ್ತೊಂದು ಮೈತ್ರಿ ಸರ್ಕಾರ ರಚನೆಗೆ ಕಾರಣವಾಯಿತು. 2004 ರಲ್ಲಿ ಆದ ರೀತಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ನಿರ್ಣಯ ಮಾಡಲಾಯಿತು. ಜೆಡಿಎಸ್​ಗೆ ಮುಖ್ಯಮಂತ್ರಿ ಸ್ಥಾನ ನೀಡುವ ನಿರ್ಧಾರದ ಮೇಲೆ ಮೈತ್ರಿ ಸರ್ಕಾರ ರಚಿಸಿ ಕುಮಾರಸ್ವಾಮಿ 2018 ರ ಮೇ 23 ರಿಂದ 2019 ರ ಜುಲೈ 26ರವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿಯಿತು. ಹಾಗಾಗಿ, ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಮರುಕಳಿಸಿದ ಇತಿಹಾಸ: 2004 ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನವರು ಮುಖ್ಯಮಂತ್ರಿಯಾಗಿದ್ದು ಜೆಡಿಎಸ್ ಶಾಸಕರು ಬೆಂಬಲ ವಾಪಸ್ ಪಡೆದ ಕಾರಣದಿಂದಾಗಿ ಕಾಂಗ್ರೆಸ್​ನ ಧರಂಸಿಂಗ್ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕಾಯಿತು. 2018 ರಚನೆಯಾದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಜೆಡಿಎಸ್ ನ ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದು ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದರಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆಯೇ ಹೆಚ್ಚಾಗಿದ್ದ ಕಾರಣ ಸರ್ಕಾರ ಪತನಕ್ಕೆ ಅವರ ರಾಜೀನಾಮೆಯೇ ಪ್ರಮುಖ ಕಾರಣವಾಯಿತು. ಇದು ಒಂದು ರೀತಿಯಲ್ಲಿ ಕಾಂಗ್ರೆಸ್ ಸಿಎಂ ರಾಜೀನಾಮೆಗೆ ಜೆಡಿಎಸ್ ಶಾಸಕರು ಕಾರಣವಾದಂತೆ ಜೆಡಿಎಸ್ ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಶಾಸಕರು ಕಾರಣ ಎಂದು ವಿಶ್ಲೇಷಣೆ ಮಾಡಬಹುದು.

ಒಟ್ಟಾರೆಯಾಗಿ, 2004-2007 ರವರೆಗೆ ಎರಡು ಬಾರಿ 2018-2019ರವರೆ ಒಮ್ಮೆ ಒಟ್ಟು ಮೂರು ಬಾರಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದರೂ ಹೆಚ್ಚು ಕಾಲ ಆಡಳಿತ ನಡೆಸಲು ಸಾಧ್ಯವಾಗಿಲ್ಲ. ಮೂರು ಬಾರಿಯೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಪ್ರಸಂಗವೇ ನಡೆದಿದೆ. ಹಾಗಾಗಿ ಈ ಬಾರಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗುತ್ತಾ ಅಥವಾ ಮತ್ತೆ ಮೈತ್ರಿ ಪ್ರಯೋಗ ನಡೆಯುತ್ತಾ ಎನ್ನುವ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

ಆಡಳಿತಾರೂಢ ಬಿಜೆಪಿ ಸರ್ಕಾರ ಪೂರ್ಣ ಬಹುಮತದ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದಾರೆ. ಇದರ ನಡುವೆ ಪ್ರಾದೇಶಿಕ ಪಕ್ಷ ಜೆಡಿಎಸ್ 123 ಸ್ಥಾನದ ಗುರಿ ಹಾಕಿಕೊಂಡಿದೆ. ಮೂರು ಪಕ್ಷಗಳೂ ಸ್ವತಂತ್ರ ಅಧಿಕಾರದ ಹೇಳಿಕೆ ನೀಡುತ್ತಿದ್ದರೆ ಹೊಸದಾಗಿ ಪಕ್ಷ ಕಟ್ಟಿರುವ ಗಾಲಿ ಜನಾರ್ದನ ರೆಡ್ಡಿ ನಮ್ಮನ್ನು ಬಿಟ್ಟು ಈ ಬಾರಿ ಸರ್ಕಾರ ರಚನೆ ಸಾಧ್ಯವಿಲ್ಲ. ಸರ್ಕಾರ ರಚನೆಯಲ್ಲಿ ನಾವು ನಿರ್ಣಾಯಕ ಪಾತ್ರ ವಹಿಸಲಿದ್ದೇವೆ ಎನ್ನುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಈ ಬಾರಿ ಯಾರಿಗೆ ಬಹುಮತ ಬರಲಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಯಾವ ಪಕ್ಷಗಳ ಮೈತ್ರಿ ಅಸ್ತಿತ್ವಕ್ಕೆ ಬರಲಿದೆ. ಬಂದರೂ ಎಷ್ಟು ದಿನ ಇರಲಿದೆ ನಾಳಿನ ಚಿತ್ರಣದಿಂದ ಗೊತ್ತಾಗಲಿದೆ.

ಇದನ್ನೂ ಓದಿ:ಮಹಾತೀರ್ಪಿಗೆ ಕರುನಾಡು ಸಜ್ಜು: ಕಮಲ ಅರಳುತ್ತಾ, 'ಕೈ' ಕಮಾಲ್ ಮಾಡುತ್ತಾ?.. ಜೆಡಿಎಸ್​​ ಆಗಲಿದೆಯಾ ಕಿಂಗ್ ಮೇಕರ್?

ABOUT THE AUTHOR

...view details