ಕರ್ನಾಟಕ

karnataka

ETV Bharat / state

ಪಂಚರತ್ನ ರಥಯಾತ್ರೆ ಯಶಸ್ವಿಯಾದರೂ ಜೆಡಿಎಸ್‌ ಕುಸಿತಕ್ಕೆ ಕಾರಣಗಳೇನು? - ಈಟಿವಿ ಭಾರತ ಕರ್ನಾಟಕ

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಹೀನಾಯವಾಗಿ ಸೋಲಲು ಕಾರಣವಾದ ಅಂಶಗಳ ವಿಶ್ಲೇಷಣೆ ಇಲ್ಲಿದೆ.

analysis-of-the-factors-that-led-to-the-defeat-of-the-jds
ಪಂಚರತ್ನ ರಥಯಾತ್ರೆ ಯಶಸ್ವಿಯಾದರೂ ಜೆಡಿಎಸ್‌ ಕುಸಿತಕ್ಕೆ ಕಾರಣಗಳೇನು?

By

Published : May 15, 2023, 6:58 PM IST

ಬೆಂಗಳೂರು:ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಕೆಲ ತಿಂಗಳ ಮುನ್ನವೇ ಪ್ರಚಾರದ ಅಖಾಡಕ್ಕೆ ಇಳಿದಿದ್ದ ಜೆಡಿಎಸ್, ಚುನಾವಣಾ ಫಲಿತಾಂಶದಲ್ಲಿ ಕುಸಿತಕಂಡಿರುವುದು ಆಶ್ಚರ್ಯ ತಂದಿದೆ. 123 ಸ್ಥಾನ ಗೆಲುವ ಟಾರ್ಗೆಟ್ ಇಟ್ಟುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಾದೇಶಿಕತೆ, ಕನ್ನಡದ ಅಸ್ಮಿತೆ, ರೈತ ಪರ ನಿಲುವು, ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ಸೇರಿದಂತೆ ಹೊಸ ಹೊಸ ಪ್ರಯೋಗಳನ್ನು ಮಾಡುವ ಮೂಲಕ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರು, ಆದರೆ ಜೆಡಿಎಸ್​ ಕೇವಲ 19 ಸ್ಥಾನ ಪಡೆಯಲಷ್ಟೇ ಶಕ್ತವಾಯಿತು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೀನಾಯ ಸೋಲು ಕಂಡಿದ್ದು, ಇಷ್ಟೊಂದು ಸ್ಥಾನದ ಕುಸಿತಕ್ಕೆ ಪರಾಮರ್ಶೆ ಮಾಡುವಂತಾಗಿದೆ.
ಮತ್ತೊಂದು ವಿಷಯ ಗಮನಿಸುವುದಾದರೆ, ಹಾಸನ ಜಿಲ್ಲೆಗಿಂತ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿತ್ತು. ಹಾಸನ ಮತ್ತು ಮಂಡ್ಯ ನಮಗೆ ಎರಡು ಕಣ್ಣುಗಳು ಇದ್ದಂತೆ ಎಂದು ಆಗಾಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದರು. ಅಭಿವೃದ್ಧಿಯಲ್ಲಿ ಹಾಸನಕ್ಕಿಂತ ಮಂಡ್ಯ ಜಿಲ್ಲೆ ಹಿಂದುಳಿದಿತ್ತು. ಹಾಗಾಗಿ, ಮಂಡ್ಯ ಜಿಲ್ಲೆ ಮತದಾರರು ಈ ಬಾರಿ ಕಾಂಗ್ರೆಸ್ ಕಡೆ ಮುಖ ಮಾಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ದಳಪತಿಗಳ ಹಿಂದೆ ಇದ್ದ ಒಕ್ಕಲಿಗರ ಪಾಳೇಪಟ್ಟು ಈ ಬಾರಿ ಕಾಂಗ್ರೆಸ್ ನತ್ತ ವಾಲಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ ಗೋಚರಿಸುತ್ತದೆ.

ಮಂಡ್ಯದಲ್ಲಿ ಕಳೆದ ಬಾರಿ 7ಕ್ಕೆ 7 ಕ್ಷೇತ್ರಗಳನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ, ಈ ಬಾರಿ ಕೆ.ಆರ್.ಪೇಟೆ ಒಂದನ್ನು ಹೊರತುಪಡಿಸಿದರೆ, ಯಾವ ಕ್ಷೇತ್ರದಲ್ಲೂ ಜೆಡಿಎಸ್ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇನ್ನು ಮೈಸೂರು ಜಿಲ್ಲೆಯಲ್ಲಿ ಹುಣಸೂರು, ಚಾಮುಂಡೇಶ್ವರಿ ಎರಡು ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಹಾಗೂ ಇವರ ಪುತ್ರ ಹರೀಶ್ ಗೌಡ ಗೆದ್ದಿದ್ದರೆ, ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತ್ರ ಗೆಲುವು ಸಾಧ್ಯವಾಗಿದೆ.

ಹಾಸನ ಮತ್ತು ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ತುಸು ಮರ್ಯಾದೆ ಉಳಿಸಿಕೊಂಡಿದೆ. ಇನ್ನು ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೆಡಿಎಸ್ ಛಿದ್ರವಾಗಿದೆ. ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಯುವಕನಂತೆ ಓಡಾಡಿದರೂ ನಿರೀಕ್ಷಿತ ಫಲಿತಾಂಶ ಕಾಣಲು ಸಾಧ್ಯವಾಗದಿರುವುದು ಜೆಡಿಎಸ್​ಗೆ ಮುಖಭಂಗವನ್ನು ಉಂಟುಮಾಡಿದೆ.

ವಲಸೆ ಹೋದ ಶಾಸಕರಿಂದಲೂ ಜೆಡಿಎಸ್​ಗೆ ಪೆಟ್ಟು: ದಳಪತಿಗಳ ಮೇಲೆ ಮುನಿಸಿಕೊಂಡು ಪಕ್ಷ ತೊರೆದ ಹಲವು ನಾಯಕರಿಂದಲೂ ಜೆಡಿಎಸ್​ಗೆ ಪೆಟ್ಟು ಬಿದ್ದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡ ಪಕ್ಷ ತೊರೆದು ಕಾಂಗ್ರೆಸ್ ಸೇರಿ ಈ ಚುನಾವಣೆಯಲ್ಲಿ ಗೆದ್ದು ಬೀಗಿದರು. ಅದೇ ರೀತಿ ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಶ್ರೀನಿವಾಸ್ (ವಾಸು), ಕೋಲಾರದಲ್ಲಿ ಶ್ರೀನಿವಾಸ್ ಗೌಡ ಪಕ್ಷ ತೊರೆದಿದ್ದರಿಂದ ಜೆಡಿಎಸ್​ಗೆ ಹಿನ್ನೆಡೆ ಅನುಭವಿಸಬೇಕಾಯಿತು.

ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರತಿ ಹಂತದಲ್ಲೂ ಜೆಡಿಎಸ್ ಸ್ಪಷ್ಟ ಹಾಗೂ ದಿಟ್ಟ ಹೆಜ್ಜೆ ಇಟ್ಟಿತ್ತು. ಜನತಾ ಜಲಧಾರೆ, ಪಂಚರತ್ನ ಯಾತ್ರೆಯನ್ನು ನಡೆಸಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಳಯದಲ್ಲಿ ನಡುಕ ಹುಟ್ಟಿಸಿತ್ತು. ರಥಯಾತ್ರೆಯಲ್ಲಿ ಸೇರುತ್ತಿದ್ದ ಜನಸ್ತೋಮ ಪ್ರತಿಪಕ್ಷಗಳ ಜಂಗಾಬಲವನ್ನೇ ಉಡುಗಿಸಿತ್ತು. ಗಿನ್ನಿಸ್ ದಾಖಲೆ ಮಾಡಿದ ಹಾರಗಳು, ಸಾಗರೋಪಾದಿಯಲ್ಲಿ ಜನ ಬಹಿರಂಗ ಸಭೆಗೆ ಸೇರುತ್ತಿದ್ದರೂ ಮತವಾಗಿ ಪರವರ್ತನೆಯಾಗದಿರುವುದು ಸಾಬೀತಾಗಿದೆ. ಬೆಂಗಳೂರಿನಲ್ಲಿ ಪಕ್ಷದ ಗೆಲುವಿಗೆ ರೂಪಿಸಿದ ತಂತ್ರಗಳು ಜನರನ್ನು ತಲುಪಲೇ ಇಲ್ಲ. ವಿಭಿನ್ನ ರೀತಿಯ ಪ್ರಚಾರ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ರೂಪಿಸಲಾಯಿತು. ಇನ್ನೂ ವಿಚಿತ್ರವೆಂದರೆ ಬೆಂಗಳೂರಿಗೇ ಜೆಡಿಎಸ್ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿ ಬಿಡುಗಡೆ ಮಾಡಿದರು ಮತದಾರರನ್ನು ಸೆಳೆಯಲು ಸಾಧ್ಯವಾಗಲಿಲ್ಲ.

ಜೆಡಿಎಸ್ ವಿರುದ್ಧ ಅಪಪ್ರಚಾರ: ಚುನಾವಣಾ ಆರಂಭದಿಂದಲೂ ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ಅನ್ನು 2018ರ ಚುನಾವಣೆಯಲ್ಲಿ ಮಾಡಿದಂತೆಯೇ ಬಿಜೆಪಿ ಬಿ ಟೀಂ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದ್ದರಿಂದ ಸಾರಾಸಗಟವಾಗಿ ಮುಸ್ಲಿಂ ಮತಗಳು ಕೈಕೊಟ್ಟಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಿಜಾಬ್, ಹಲಾಲ್, ಧರ್ಮ ಧಂಗಲ್, ಆಜಾನ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಟ್ಟಿದನಿ ಎತ್ತಿ, ಜಾತ್ಯತೀತ ತತ್ವ ಸಿದ್ಧಾಂತಕ್ಕೆ ಬದ್ಧತೆ ಪ್ರದರ್ಶಿಸಿದ್ದರು. ಹಿಂದಿ ಹೇರಿಕೆ, ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡ ಕಡೆಗಣನೆ ಬಗ್ಗೆ ದೊಡ್ಡ ದನಿ ಎತ್ತಿ ಕನ್ನಡ ಪರ ನಿಲುವನ್ನು ಸಾಬೀತುಪಡಿಸಿದ್ದರು. ಆದರೆ, ಇದ್ಯಾವುದು ಚುನಾವಣೆಯಲ್ಲಿ ಫಲ ಕೊಡಲಿಲ್ಲ.

ಮುಸ್ಲಿಂರು ಕೈಕೊಟ್ಟದ್ದು ಕಣ್ಣಿಗೆ ರಾಚುತ್ತದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಹೇಳುವ ಮೂಲಕ ಮುಸ್ಲಿಂ ವೋಟುಗಳು ಜೆಡಿಎಸ್‌ಗೆ ಹೋಗದಂತೆ ಮಾಡಿದ ತಂತ್ರಗಾರಿಕೆ ಯಶಸ್ವಿಯಾಯಿತು. ಇದು ಜೆಡಿಎಸ್​ಗೆ ಬಾರಿ ಪೆಟ್ಟು ಕೊಟ್ಟಿರುವುದು ಸ್ಪಷ್ಟವಾಗಿದೆ. ಕುಮಾರಸ್ವಾಮಿ ಪದೇ ಪದೆ ದಲಿತ ಪರ ದನಿ ಎತ್ತಿದರೂ ದಲಿತರು ಜೆಡಿಎಸ್ ಕೈಹಿಡಿದಂತೆ ಕಾಣುತ್ತಿಲ್ಲ.

ಇನ್ನು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು ಭಾಗ ಹಾಗೂ ಬೆಂಗಳೂರಿನಲ್ಲಿ ಬಿಜೆಪಿ ನಡೆಸಿದ ಬಹಿರಂಗ ಸಭೆ ಮತ್ತು ರಾಷ್ಟ್ರ ನಾಯಕರ ರೋಡ್ ಶೋಗಳು ಜೆಡಿಎಸ್ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ. ಮೈಸೂರು, ಮಂಡ್ಯ ಭಾಗದಲ್ಲಿ ಚುನಾವಣೆ ಪ್ರಚಾರ ಮಾತ್ರವಲ್ಲ, ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲೂ ದೊಡ್ಡ ದೊಡ್ಡ ಬಹಿರಂಗ ಸಭೆ, ಸಮಾವೇಶ ಆಯೋಜಿಸಿ ಜೆಡಿಎಸ್‌ಗೆ ಬಿಜೆಪಿ ಬರೆ ಎಳೆದಿದೆ.

ಇನ್ನು ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಅಬ್ಬರದ ಪ್ರಚಾರ ನಡೆಸಿತ್ತು. ಆದರೆ, ಯಾವುದೇ ಸ್ಟಾರ್ ಪ್ರಚಾರಕರಾಗಲಿ, ಸಿನಿಮಾ ನಟರಾಗಲಿ ಪ್ರಚಾರಕ್ಕೆ ಕರೆತಂದಿರಲಿಲ್ಲ. ಬದಲಾಗಿ, ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರೇ ಸ್ಟಾರ್ ಪ್ರಚಾರಕರಾಗಿದ್ದರು. ಈ ಬಾರಿ ಪಕ್ಷದಿಂದ ಅಭ್ಯರ್ಥಿಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಲು ಸಾಧ್ಯವಾಗಿಲ್ಲ ಎಂದು ಖುದ್ದು ಕುಮಾರಸ್ವಾಮಿ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳು ಸಹ ಜೆಡಿಎಸ್ ಪಕ್ಷದ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಕಡೆ ವಾಲದ ಮುಸ್ಲಿಂ ಮತ: ಕೆಲವು ಕಡೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲಾಗಿತ್ತು. ಅದರ ಜೊತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬಹುತೇಕ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದರು. ಆದರೆ, ಮುಸ್ಲಿಂ ಸಮುದಾಯದ ಮತಗಳು ಜೆಡಿಎಸ್​ಗೆ ಅಷ್ಟಾಗಿ ಬಂದಿಲ್ಲ. ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸೇರಿದಂತೆ ಹಲವಾರು ಮುಸ್ಲಿಂ ಮುಖಂಡರು ಎಷ್ಟೇ ಪ್ರಯತ್ನ ಪಟ್ಟರೂ ಸಮುದಾಯದ ಮತ ಸೆಳೆಯಲು ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಖರ್ಗೆ ಅವರಿಗೆ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು‌ ಮಾತುಕೊಟ್ಟಿದ್ದೆ‌, ಯಾರ ಕ್ಲೇಮ್ ಬಗ್ಗೆಯೂ ಮಾತಾಡಲ್ಲ: ಡಿಕೆಶಿ

ABOUT THE AUTHOR

...view details