ಕರ್ನಾಟಕ

karnataka

ETV Bharat / state

ಮುಸ್ಲಿಂ ಮತ ಬ್ಯಾಂಕ್ ಜೆಡಿಎಸ್​ಗೆ ಹೋಗದಂತೆ ಕಾಂಗ್ರೆಸ್ ರೂಪಿಸಿದೆಯೇ ಕಾರ್ಯತಂತ್ರ? - ಈಟಿವಿ ಭಾರತ ಕರ್ನಾಟಕ

ಮುಸ್ಲಿಂ ಮತ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್​ನ ಕಾರ್ಯತಂತ್ರದ ವಿಶ್ಲೇಷಣೆ ಇಲ್ಲಿದೆ.

analysis-of-strategy-formulated-for-muslim-vote-bank-by-the-congress
ಮುಸ್ಲಿಂ ಮತ ಬ್ಯಾಂಕ್ ಜೆಡಿಎಸ್​ಗೆ ಹೋಗದಂತೆ ಕಾಂಗ್ರೆಸ್ ರೂಪಿಸಿದೆಯೇ ಕಾರ್ಯತಂತ್ರ?

By

Published : May 7, 2023, 4:12 PM IST

ಬೆಂಗಳೂರು: ಮುಸ್ಲಿಂ ಮತ ಬ್ಯಾಂಕ್ ಜೆಡಿಎಸ್​ಗೆ ಹೋಗದಂತೆ ತಡೆದು ತನ್ನ ಮತ ಬ್ಯಾಂಕ್ ಹೆಚ್ಚಿಸಿಕೊಳ್ಳುವ ಮೂಲಕ ಹೆಚ್ಚು ಸ್ಥಾನಗಳ ಮೇಲೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ. ಕೆಲವು ಕಡೆಗಳಲ್ಲಿ ಜೆಡಿಎಸ್‌ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಂತಹ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬರುವ ಮತಗಳು ಜೆಡಿಎಸ್‌ ಕಡೆ ವಾಲಬಹುದು. ಇದರಿಂದ ಮತ ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರ ಹಾಕಿದೆ. ಹಾಗಾಗಿಯೇ ಬಜರಂಗದಳ ನಿಷೇಧ ವಿಚಾರವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಜೆಡಿಎಸ್‌ನಲ್ಲೂ ಸಣ್ಣ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯ ಗುರುತಿಸಿಕೊಂಡಿದೆ. ಈ ಮತಗಳನ್ನು ಜೆಡಿಎಸ್‌ ನಿಂದ ದೂರ ಮಾಡಿದರೆ ಜೆಡಿಎಸ್‌ ಪ್ರಭಾವ ಕುಗ್ಗಲಿದೆ. ಇದರ ಜೊತೆಗೆ ಕೆಲವು ಕಡೆ ಒಕ್ಕಲಿಗರು ದೊಡ್ಡ ಪ್ರಮಾಣದಲ್ಲಿ ಮತ ಬ್ಯಾಂಕ್ ಆಗಿ ಉಳಿಯಲಿದ್ದು, ಇದರಿಂದ ಜೆಡಿಎಸ್​ಗೆ ದೊಡ್ಡ ಹಿನ್ನಡೆ ಆಗಲಿದೆ ಎಂಬುದು ಕಾಂಗ್ರೆಸ್ ತಂತ್ರಗಾರಿಕೆಯಾಗಿದೆ. ರಾಜ್ಯದಲ್ಲಿರುವ 5 ಕೋಟಿಗೂ ಹೆಚ್ಚು ಮತದಾರರ ಪೈಕಿ ಅಂದಾಜು 75 ಲಕ್ಷ ಮುಸ್ಲಿಂ ಮತದಾರರಿದ್ದು, ಪರಿಶಿಷ್ಟ ಜಾತಿ ಮತದಾರರು ನಂತರ ಅತೀ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

ಜೆಡಿಎಸ್‌ 2018 ರ ವಿಧಾನಸಭೆ ಚುನಾವಣೆಯಲ್ಲಿ ಶೇ.9 ರಷ್ಟು ಮುಸ್ಲಿಂ ಮತಗಳನ್ನು ಸೆಳೆದಿತ್ತು. ಇದರ ಜೊತೆಗೆ ಕೆಲವು ಕ್ಷೇತ್ರಗಳಲ್ಲಿ ಎಸ್​ಡಿಪಿಐ ಸಹ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಸೆಳೆದಿತ್ತು. ಆದರೆ ಈ ಬಾರಿ ಮುಸ್ಲಿಂ ಮತಗಳನ್ನು ಪೂರ್ಣ ಪ್ರಮಾಣದಲ್ಲಿ ಉಳಿಸಿಕೊಳ್ಳುವ ಲೆಕ್ಕಾಚಾರವನ್ನು ಕಾಂಗ್ರೆಸ್ ಹಾಕಿದೆ. ಮುಸ್ಲಿಂ ಮತದಾನ ಪ್ರಮಾಣವನ್ನು ಶೇ. 70 ರಿಂದ ಶೇ. 85 ರಷ್ಟರವರೆಗೆ ಹೆಚ್ಚಿಸಿಕೊಳ್ಳುವ ಕಾರ್ಯತಂತ್ರ ಮಾಡಿದೆ. 85 ವಿಧಾನಸಭಾ ಕ್ಷೇತ್ರಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯವಿದ್ದು, 38 ಕಡೆ ಅವರೇ ನಿರ್ಣಾಯಕರಾಗಿದ್ದಾರೆ. ಅವರೆಲ್ಲರೂ ಒಂದಾಗಿ ಮತ ಚಲಾವಣೆ ಮಾಡಿದರೆ ಕಾಂಗ್ರೆಸ್​ಗೆ ಹೆಚ್ಚು ಲಾಭವಾಗಲಿದೆ ಎಂಬ ಲೆಕ್ಕಾಚಾರ ಹಾಕಿದೆ.

ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಇತರ ರಾಜಕೀಯ ಪಕ್ಷಗಳು ಮುಸ್ಲಿಂ ಮತಗಳಿಗಾಗಿ ಪೈಪೋಟಿ ನಡೆಸುತ್ತಿರುವುದಂತದೂ ಸತ್ಯ. ಈ ಪೈಪೋಟಿ ಮುಸ್ಲಿಂ ಮತಗಳ ವಿಭಜನೆಗೆ ಕಾರಣವಾಗುತ್ತದೆಯೇ ಮತ್ತು ಫಲಿತಾಂಶಗಳ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗುತ್ತಿಲ್ಲ. ರಾಜ್ಯದಲ್ಲಿ ಮುಸ್ಲಿಂ ಮತಗಳಿಗಾಗಿ ಕಾಂಗ್ರೆಸ್‌, ಜೆಡಿಎಸ್‌, ಎಸ್‌ಡಿಪಿಐ, ಎಐಎಂಐಎಂ, ಅಮ್ ಆದ್ಮಿ ಪಕ್ಷಗಳು ಮುಸ್ಲಿಂ ಮತಗಳಿಗಾಗಿ ಪೈಪೋಟಿ ನಡೆಸುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ.

ಇನ್ನು ಬಜರಂಗದಳ ನಿಷೇಧ ಮಾಡುವ ವಿಚಾರ ಪಣಾಳಿಕೆಯಲ್ಲಿ ಸೇರಿಸುವ ಬಗ್ಗೆ ಕಾಂಗ್ರೆಸ್ ನ ರಾಜ್ಯ ನಾಯಕರಲ್ಲಿ ಚರ್ಚೆಯೇ ನಡೆದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಷ್ಟು ದಿನ ಇಷ್ಟು ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದ ವಿಷಯವಾಗಿ ಚುನಾವಣೆಯನ್ನು ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಈಗ ಧರ್ಮ ವಿಚಾರ ತಂದರೆ ಅನೇಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಹಿನ್ನಡೆಯಾಗಲಿದೆ ಎಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.

ರಾಜ್ಯದ ಮತದಾರರ ಪೈಕಿ ಮುಸ್ಲಿಂ ಸಮುದಾಯದ ಪಾಲು ಶೇ 13 ರಷ್ಟಿದೆ. ಈ ಸಮುದಾಯವು ಸುಮಾರು 40 ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ಇನ್ನು ಕನಿಷ್ಠ 70 ಕ್ಷೇತ್ರಗಳಲ್ಲಿ ಪ್ರಾಮುಖ್ಯತೆ ಪಡೆದಿವೆ. ರಾಜ್ಯ ರಾಜಕಾರಣದಲ್ಲಿ ಹಿಂದೆ ಇವರ ಬೆಂಬಲ ಬಹುತೇಕ ಕಾಂಗ್ರೆಸ್‌ ಪಕ್ಷಕ್ಕೇ ಇತ್ತು. ಜೆಡಿಎಸ್‌ ಪ್ರವರ್ಧಮಾನಕ್ಕೆ ಬಂದ ಬಳಿಕ ಮುಸ್ಲಿಂ ಸಮುದಾಯದ ಮತ ವಿಭಜನೆ ಆಗಿರುವುದು ಸ್ಪಷ್ಟವಾಗಿದೆ.

ಮುಸ್ಲಿಂ ಸಮುದಾಯದ ಓಲೈಕೆಯಲ್ಲಿ ರಾಜಕೀಯ ಪಕ್ಷಗಳು : ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಪ್ರತಿ ವರ್ಷ 10 ಸಾವಿರ ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಘೋಷಿಸಿದ್ದಾರೆ. ಸಾಮಾನ್ಯವಾಗಿ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಾರ್ಷಿಕ ಸುಮಾರು 3 ಸಾವಿರ ಕೋಟಿ ರೂ. ಮೀಸಲಿಡಲಾಗುತ್ತಿದೆ. ಇನ್ನು ಜೆಡಿಎಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ತಮ್ಮ ಪಕ್ಷ ಮುಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ ಕೂಡ ಮುಸ್ಲಿಂ ಸಮುದಾಯವನ್ನು ತಲುಪಲು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುವಂತೆ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ನೀಡಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಎನ್‌ಸಿಪಿ ಮತ್ತು ಎಡಪಕ್ಷಗಳ ಪ್ರವೇಶದಿಂದ ಚುನಾವಣಾ ಸ್ಪರ್ಧೆಯು ಬಿಗಿಯಾಗಲಿದೆ. ಎಸ್‌ಡಿಪಿಐ, ಎಐಎಂಐಎಂ, ಎಎಪಿ ಮತ್ತು ಎನ್‌ಸಿಪಿ, ಬಿಎಸ್​ಪಿ ಪಕ್ಷಗಳ ಪ್ರವೇಶದಿಂದ ರಾಜ್ಯ ವಿಧಾನಸಭೆ ಚುನಾವಣಾ ಸ್ಪರ್ಧೆ ಮತ್ತಷ್ಟು ಬಿಯಾಗಲಿದ್ದು, ರಾಜ್ಯದ ಚುನಾವಣೆಯಲ್ಲೂ ಮತ ವಿಭಜನೆ ಆಗುವುದೇ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:'ಯಾರು ಹೊಣೆ ಮೋದಿಯವರೇ?': ಪ್ರಧಾನಿಗೆ ಕೆಲವು ಪ್ರಶ್ನೆ ಕೇಳಿದ ಸಿದ್ದರಾಮಯ್ಯ

ABOUT THE AUTHOR

...view details