ಬೆಂಗಳೂರು: ಮೂಲಸೌಕರ್ಯ ಅಭಿವೃದ್ಧಿಪಡಿಸುವ ಬಂಡವಾಳ ವೆಚ್ಚಕ್ಕೆ ಮೀಸಲಿರಿಸುವ ಮೊತ್ತದ ಆಧಾರದಲ್ಲಿ ಬಜೆಟ್ ಅಭಿವೃದ್ದಿ ಪೂರಕವೋ ಅಲ್ಲವೋ ಎಂಬುದನ್ನು ವ್ಯಾಖ್ಯಾನಿಸಲಾಗುತ್ತದೆ. ಆದರೆ, ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕ ಸರ್ಕಾರ ವ್ಯಯಿಸಿರುವ ಬಂಡವಾಳ ವೆಚ್ಚ ನಿರಾಶಾದಾಯಕವಾಗಿದೆ ಎನ್ನುವುದು ಅಂಕಿಅಂಶಗಳಿಂದ ಗೊತ್ತಾಗುತ್ತಿದೆ. ಬಂಡವಾಳ ವೆಚ್ಚ ಎಂದರೆ ರಾಜ್ಯದ ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿ, ಆಸ್ತಿ ಸೃಜನೆಗಾಗಿ ಮಾಡುವ ಮಹತ್ವದ ವೆಚ್ಚವಾಗಿದೆ.
ಬಂಡವಾಳ ವೆಚ್ಚಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟರೆ, ಅದು ಅಭಿವೃದ್ಧಿಪರ ಬಜೆಟ್ ಎಂದು ಅಂದಾಜಿಸಲಾಗುತ್ತದೆ. ಸರ್ಕಾರ ಬಂಡವಾಳ ವೆಚ್ಚದ ಮೇಲೆ ಯಾವ ರೀತಿ ವ್ಯಯಿಸುತ್ತಿದೆ ಎಂಬುದರ ಆಧಾರದಲ್ಲಿಯೇ ರಾಜ್ಯದ ಅಭಿವೃದ್ಧಿಯ ಗತಿ ನಿರ್ಧಾರವಾಗುತ್ತದೆ. ಪಂಚ ಗ್ಯಾರಂಟಿಗಳ ಪ್ರಭಾವ ಈ ಬಾರಿ ಬಂಡವಾಳ ವೆಚ್ಚದ ಮೇಲಾಗುತ್ತಿರುವುದನ್ನು ಕಾಣಬಹುದು. ಇದರಿಂದ ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.
ಶೇ 11.2ರಷ್ಟು ಬಂಡವಾಳ ವೆಚ್ಚಕ್ಕೆ ಕತ್ತರಿ: ಆರ್ಥಿಕ ವರ್ಷದ ಮೂರು ತಿಂಗಳು ಕಳೆದರೂ ಸರ್ಕಾರ ವ್ಯಯಿಸಿರುವ ಬಂಡವಾಳ ವೆಚ್ಚ ಕುಂಠಿತವಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ತಮ್ಮ ಬಜೆಟ್‌ನಲ್ಲಿ ಮೀಸಲಿಟ್ಟ ಬಂಡವಾಳ ವೆಚ್ಚದ ಮೊತ್ತ 54,374 ಕೋಟಿ ರೂ. ಆಗಿದೆ. ಕಳೆದ ಬೊಮ್ಮಾಯಿ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ 61,234 ಕೋಟಿ ರೂ. ಮೀಸಲಿಟ್ಟಿತ್ತು. ಅಂದರೆ ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ 11.2%ರಷ್ಟು ಬಂಡವಾಳ ವೆಚ್ಚಕ್ಕೆ ಕತ್ತರಿ ಬಿದ್ದಿದೆ.
ಪಂಚ ಗ್ಯಾರಂಟಿ ಎಫೆಕ್ಟ್?:ಪಂಚ ಗ್ಯಾರಂಟಿಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಹುತೇಕ ಸಂಪನ್ಮೂಲವನ್ನು ಸರ್ಕಾರ ಈ ಗ್ಯಾರಂಟಿಗಳ ಜಾರಿಗಾಗಿ ಬಳಸುತ್ತಿದೆ. ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಣದತ್ತ ಹೆಚ್ಚಿನ ಕಸರತ್ತು ನಡೆಸುತ್ತಿದೆ. ಅದರ ಎಫೆಕ್ಟ್ ಬಂಡವಾಳ ವೆಚ್ಚದ ಮೇಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಇದಕ್ಕೆ ಆರ್ಥಿಕ ಇಲಾಖೆಯ ತ್ರೈಮಾಸಿಕ ಅಂಕಿಅಂಶ ಇಂಬು ನೀಡುತ್ತಿದೆ.
ಬಂಡವಾಳ ವೆಚ್ಚ ಆರ್ಥಿಕತೆಯ ಭವಿಷ್ಯದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯ ದರ ಹೆಚ್ಚಿಸುತ್ತದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಶಾಸಕರುಗಳಿಗೆ ಗ್ಯಾರಂಟಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಈ ವರ್ಷ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ. ಇತ್ತ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಅಳೆದೂ ತೂಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಸೀಮಿತ ಎಂಬ ಸಂದೇಶವನ್ನು ಸಿಎಂ, ಡಿಸಿಎಂ ಅವರು ತಮ್ಮ ಶಾಸಕರುಗಳ ಗಮನಕ್ಕೆ ಈಗಾಗಲೇ ತಂದಿದ್ದಾರೆ.