ಬೆಂಗಳೂರು : 70 ವರ್ಷದ ವೃದ್ದನೊಬ್ಬ ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ನಂತರ ಮದುವೆಗೆ ನಿರಾಕರಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ 63 ವರ್ಷದ ವೃದ್ದೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ನೊಂದ ವೃದ್ದೆ ನೀಡಿರುವ ದೂರಿನನ್ವಯ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರೆಯ ಪತಿ ಹಾಗೂ ಆರೋಪಿತನ ಪತ್ನಿ ಸಾವನ್ನಪ್ಪಿದ್ದು, ಐದು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಆರೋಪಿ ತನ್ನ ಮಗನ ಮದುವೆಗೆ ವಧು ಹುಡುಕುತ್ತಿದ್ದಾಗ ವೃದ್ಧೆಯ ಪರಿಚಯವಾಗಿತ್ತು. ಮದುವೆಯನ್ನ ಇಬ್ಬರೂ ಸಹ ಜೊತೆ ನಿಂತು ಮಾಡಿದ್ದರು. ನಂತರ ಇಬ್ಬರ ನಡುವೆ ಸಲುಗೆ ಕೂಡಾ ಬೆಳೆದಿತ್ತು ಎಂದು ತಿಳಿದುಬಂದಿದೆ.
ಇವರಿಬ್ಬರೂ ಸಹ ಮೈಸೂರು, ದಾವಣೆಗೆರೆ, ಬೆಳಗಾವಿ ಅಂತಾ ಪ್ರವಾಸಕ್ಕೂ ಹೋಗಿದ್ದರು. ಅದೇ ಸಂದರ್ಭದಲ್ಲಿ ತನ್ನನ್ನ ಮದುವೆಯಾಗುವಂತೆ ದೂರುದಾರೆ 70 ವರ್ಷದ ವೃದ್ಧನಿಗೆ ಕೇಳಿದ್ದರು. ಆರಂಭದಲ್ಲಿ ಸಮ್ಮತಿಸಿದ್ದ ಆರೋಪಿ, ನಂತರ ಆಕೆಯನ್ನ ನಿರ್ಲಕ್ಷ್ಯಿಸಲಾರಂಭಿಸಿದ್ದಾರೆ. ಅಲ್ಲದೇ ತಾನು ಕರೆದಾಗ ಮಾತ್ರ ಬರಬೇಕು, ಇಲ್ಲವಾದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ವೃದ್ದ ಮಹಿಳೆ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.