ಬೆಂಗಳೂರು: ಸರ್ಕಾರದ ಕಂಪನಿ, ನಿಗಮ ಮತ್ತು ಶಾಸನಬದ್ಧ ಸಂಸ್ಥೆಗಳ ಉದ್ಯೋಗಿಗಳ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ದುರ್ನಡತೆ ಆರೋಪ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಆದೇಶಿಸಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮೂವರು ನಿವೃತ್ತ ಅಧಿಕಾರಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆ-1984ರ ಸೆಕ್ಷನ್ 2(6) ಪ್ರಕಾರ ಕರ್ನಾಟಕ ಸರ್ಕಾರದ ನಾಗರಿಕ ಸೇವೆಗಳ ಸದಸ್ಯರು, ನಾಗರಿಕ ಹುದ್ದೆ ಹೊಂದಿರುವ ಅಥವಾ ರಾಜ್ಯ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದ ಸೇವೆ ಸಲ್ಲಿಸುತ್ತಿರುವವರನ್ನು ‘ಸರ್ಕಾರಿ ನೌಕರರು’ ಎನ್ನಲಾಗುತ್ತದೆ. ಕಾಯ್ದೆಯ ಸೆಕ್ಷನ್ 2(12)(ಜಿ) ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಸಂಸ್ಥೆ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಕಾಯ್ದೆಯಡಿ ಸ್ಥಾಪಿಸಲ್ಪಟ್ಟ ಅಥವಾ ಅದರ ಅಧೀನದ, ರಾಜ್ಯ ಸರ್ಕಾರದಿಂದ ನಡೆಸಲ್ಪಡುವ, ನಿಯಂತ್ರಿಸಲ್ಪಡುವ, ಹಣಕಾಸು ಪಡೆಯುವ ನಿಗಮ, ಕಂಪನಿ ಕಾಯ್ದೆಯ-1956ರ ಅಡಿಯಲ್ಲಿ ನೋಂದಣಿಯಾದ ಸಂಸ್ಥೆ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960ರ ಅಡಿಯಲ್ಲಿ ನೋಂದಣಿಯಾದ ಸಂಘ, ಸಹಕಾರಿ ಸಂಸ್ಥೆ ಮತ್ತು ಒಂದು ವಿಶ್ವವಿದ್ಯಾಲಯದ ಉದ್ಯೋಗಿಗಳು ‘ಸಾರ್ವಜನಿಕ ಸೇವಕ’ ಆಗುತ್ತಾರೆ. ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ) ಅಧಿನಿಯಮಗಳು-1957ರ ನಿಯಮ 14(ಎ) (ಸಿಸಿಎ ನಿಯಮ) ಪ್ರಕಾರ ‘ಸರ್ಕಾರಿ ನೌಕರ’ ವಿರುದ್ಧದ ದುರ್ನಡತೆ ವಿರುದ್ಧ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ವಿಚಾರಣೆಗೆ ಸರ್ಕಾರಕ್ಕೆ ಆದೇಶಿಸಲು ಆವಕಾಶವಿದೆ.
ಸಿಎಎ ನಿಯಮ 14(ಎ) ಯೊಂದಿಗೆ ನಿಯಮ 2(ಡಿ) ಮತ್ತು ನಿಯಮ 3 ಅನ್ನು ಸಂಯೋಜಿಸಿಕೊಂಡು ಓದಿದಾಗ, ಸರ್ಕಾರದ ಕಂಪನಿ, ನಿಗಮ ಮತ್ತು ಶಾನಸಬದ್ಧ ಸಂಸ್ಥೆಗಳ ಉದ್ಯೋಗಿಗಳು ‘ಸಾರ್ವಜನಿಕ ಸೇವಕರು’ ಎಂದು ಪರಿಗಣಿಸಲ್ಪಡುತ್ತಾರೆ. ಸಾರ್ವಜನಿಕ ಸೇವಕರಿಗೆ ಸಿಸಿಎ ನಿಯಮಗಳನ್ನು ಅನ್ವಯಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಸಾರ್ವಜನಿಕ ಸೇವಕರ ವಿರುದ್ಧ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ವಿಚಾರಣೆ ನಡೆಸಲು ಸಿಸಿಎ ಅಧಿನಿಯಮಗಳಲ್ಲಿ ನಿರ್ದಿಷ್ಟ ಕಾನೂನು ಹಾಗೂ ನಿಯಮ ಇಲ್ಲ. ಇಂತಹ ಸಂದರ್ಭದಲ್ಲಿ ‘ಸಾರ್ವಜನಿಕ ಸೇವಕರ’ ವಿರುದ್ಧ ಆರೋಪಗಳನ್ನು ಲೋಕಾಯುಕ್ತ ವಿಚಾರಣೆಗೆ ಸರ್ಕಾರ ಒಪ್ಪಿಸಲಾಗದು. ಜತೆಗೆ, ಸಾರ್ವಜನಿಕ ಸೇವಕರು ವಿಚಾರದಲ್ಲಿ ಸರ್ಕಾರ ಶಿಸ್ತು ಪ್ರಾಧಿಕಾರವೂ ಆಗಿರುವುದಿಲ್ಲ. ಶಿಸ್ತು ಕ್ರಮ ಜರುಗಿಸಲು ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರಿಂದ ಪಡೆದ ವರದಿಯನ್ನು ‘ವೃಂದ ಮತ್ತು ನೇಮಕಾತಿ’ ಅಧಿನಿಯಮಗಳಡಿ ಸಾರ್ವಜನಿಕ ಸೇವಕ ಉದ್ಯೋಗ ನಿರ್ವಹಿಸುತ್ತಿರುವ ನಿರ್ದಿಷ್ಟ ‘ಸಕ್ಷಮ ಪ್ರಾಧಿಕಾರ’ಕ್ಕೆ ರವಾನಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಇನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸಿಸಿಎಸ್ ನಿಯಮ 14(ಎ) ಅಳವಡಿಸಿಕೊಂಡಿದ್ದಾಗ ಮಾತ್ರ ಆ ಸಕ್ಷಮ ಪ್ರಾಧಿಕಾರ ಸಾರ್ವಜನಿಕ ಸೇವಕನ ವಿರುದ್ಧದ ದುರ್ನಡತೆ ಆರೋಪಗಳನ್ನು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ವಿಚಾರಣೆಗೆ ಒಪ್ಪಿಸಬಹುದು. ಇಲ್ಲವೇ, ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿಯೇ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತಕ್ಕೆ ವಿಚಾರಣೆಗೆ ಒಪ್ಪಿಸುವ ನಿಯಮ ಇರಬೇಕಾಗುತ್ತದೆ. ಈ ಎರಡು ಅವಕಾಶ ಇಲ್ಲದೆ ಹೋದರೆ ಸಿಸಿಎಸ್ ನಿಯಮ 14(ಎ) ಅನ್ನು ರಾಜ್ಯ ಸರ್ಕಾರ ಕಸಿದುಕೊಂಡು ಸಾರ್ವಜನಿಕ ಸೇವಕರ ವಿರುದ್ಧ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತಕ್ಕೆ ವಿಚಾರಣೆಗೆ ಆದೇಶಿಸಲಾಗದು ಎಂದಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.