ಬೆಂಗಳೂರು:ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ 2024 ಜನವರಿ 22 ರಂದು ನಡೆಯಲಿದ್ದು, ಆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನಿಸಿದೆ. ಈ ಆಹ್ವಾನವನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದು ಸಂತೋಷದಿಂದ ಭಾಗಿಯಾಗುವುದಾಗಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ್ದ ರಾಮಮಂದಿರ ಟ್ರಸ್ಟ್ನ ಪ್ರಮುಖರು, ಆಹ್ವಾನ ಪತ್ರಿಕೆ ನೀಡಿ ಕುಟುಂಬ ಸಮೇತವಾಗಿ ತಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಕೋರಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ನ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಆಗಿರುವ ರಾಮ ಲಾಲ್ ಮತ್ತಿತರರು ಟ್ರಸ್ಟ್ ಪರವಾಗಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಅವರ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದರು.
ಆಹ್ವಾನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿಗಳು, ಕುಟುಂಬ ಸಮೇತ ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ರಾಮ್ಲಾಲ್ ಅವರಿಗೆ ತಿಳಿಸಿದರು. ಅಲ್ಲದೇ, ರಾಮಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಆಹ್ವಾನ ಕುರಿತು ಹೆಚ್ಡಿಕೆ ಪೋಸ್ಟ್: 'ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಆಗಿರುವ ಶ್ರೀ ರಾಮ ಲಾಲ್ ಅವರು ಹಾಗೂ ಇತರರು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪರವಾಗಿ ಆಹ್ವಾನ ನೀಡಿದರು. ನನ್ನನ್ನು ಆಹ್ವಾನಿಸಿದ ಅವರೆಲ್ಲರಿಗೂ ಧನ್ಯವಾದಗಳು. ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ ಹಾಗೂ ಶ್ರೀರಾಮ ಸೇವಾ ಕೈಂಕರ್ಯದಲ್ಲಿ ಕುಟುಂಬ ಸಮೇತವಾಗಿ ಸಂತೋಷದಿಂದ ಭಾಗಿಯಾಗುತ್ತೇನೆ' ಎಂದು ಹೆಚ್.ಡಿ.ಕುಮಾರಸ್ವಾಮಿ ಎಕ್ಸ್ ಅಧಿಕೃತ ಖಾತೆಯಲ್ಲಿ ಫೋಟೊದೊಂದಿಗೆ ಬರೆದು ಹಾಕಿಕೊಂಡಿದ್ದಾರೆ.
ಈಗಾಗಲೇ ಟ್ರಸ್ಟ್ನ ಪ್ರಮುಖರು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ. ಈ ಕುರಿತು ಅಧಿಕೃತ ಎಕ್ಸ್ ಖಾತೆಯಲ್ಲಿ ದೇವೇಗೌಡ ಅವರು ಪೋಸ್ಟ್ ಹಾಕಿಕೊಂಡಿದ್ದರು. 'ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದ್ದು ನನಗೆ ಖುಷಿ ತಂದಿದೆ. ರಾಮ ಮಂದಿರ ಸಂಕೀರ್ಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ನೃಪೇಂದ್ರ ಮಿಶ್ರಾ, ಹಿರಿಯ RSS ನಾಯಕ ಶ್ರೀ ರಾಮ್ ಲಾಲ್ ಮತ್ತು ಹಿರಿಯ ವಿಶ್ವ ಹಿಂದು ಪರಿಷತ್ ನಾಯಕ ಶ್ರೀ ಅಲೋಕ್ ಕುಮಾರ್ ಅವರು ನನ್ನ ನವದೆಹಲಿ ನಿವಾಸದಲ್ಲಿ ಭೇಟಿಯಾದರು ಎಂದು ಸಂತಸ ವ್ಯಕ್ತ ಪಡಿಸಿದ್ದರು.
ಇದನ್ನೂ ಓದಿ:ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಮಾರ್ಚ್‌ವರೆಗೆ ಅಯೋಧ್ಯೆ ಹೌಸ್ ಫುಲ್, ಹೋಟೆಲ್ ದರ 1 ಲಕ್ಷ !