ಬೆಂಗಳೂರು: ತನ್ನ ಫೋನ್ ಟ್ಯಾಪಿಂಗ್ ಆಗ್ತಿದೆ ಎಂದು ಬಿಜೆಪಿಯ ಭಿನ್ನಮತೀಯ ಶಾಸಕ ಅರವಿಂದ್ ಬೆಲ್ಲದ ಅವರು ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದೆ. ಈ ಆರೋಪವನ್ನು ತಿಪ್ಪೆ ಸಾರಿಸುವ ಸ್ಪಷ್ಟೀಕರಣದ ಮೂಲಕ ಮುಚ್ಚಿ ಹಾಕುವ ಪ್ರಯತ್ನ ಮಾಡದೇ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಸತ್ಯ ಸಂಗತಿಯನ್ನು ಬಯಲಿಗೆಳೆಯಬೇಕು ಎಂದು ಸಿಎಂ ಯಡಿಯೂರಪ್ಪಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಫೋನ್ ಟ್ಯಾಪಿಂಗ್ ಆಗುತ್ತಿರುವುದನ್ನು ಬಹಿರಂಗಪಡಿಸುವ ಧೈರ್ಯ ತೋರಿದ ಶಾಸಕ ಅರವಿಂದ ಬೆಲ್ಲದ ಅವರನ್ನು ಅಭಿನಂದಿಸುತ್ತೇನೆ. ಇದು ಕೇವಲ ಬೆಲ್ಲದ ಅವರೊಬ್ಬರ ಫೋನ್ಗೆ ಸಂಬಂಧಿಸಿದ್ದಾಗಿರಲಿಕ್ಕಿಲ್ಲ. ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯರೆಂದು ಗುರುತಿಸಿಕೊಂಡಿರುವ ಇತರ ಶಾಸಕರು, ಪ್ರತಿಪಕ್ಷದ ನಾಯಕರ ಫೋನ್ಗಳ ಕದ್ದಾಲಿಕೆಯೂ ನಡೆದಿರುವ ಎಲ್ಲ ಸಾಧ್ಯತೆಗಳೂ ಇವೆ.
ರಾಜ್ಯ ಬಿಜೆಪಿಯ ಭಿನ್ನಮತೀಯ ನಾಯಕರಿಂದ ಮುಖ್ಯಮಂತ್ರಿಗಳನ್ನು ಪದಚ್ಯುತಿಗೊಳಿಸುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂತಹದ್ದೊಂದು ಆರೋಪ ವ್ಯಕ್ತವಾಗಿದೆ. ಅರವಿಂದ ಬೆಲ್ಲದ ಅವರು ಭಿನ್ನಮತೀಯರ ಜೊತೆ ಗುರುತಿಸಿಕೊಂಡಿರುವ ಪ್ರಮುಖ ಶಾಸಕರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಪದ ಗುರಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಆಗಿರುತ್ತಾರೆ ಎಂದು ಹೇಳಿದ್ದಾರೆ.
ಬೆಲ್ಲದ ಅವರ ಆರೋಪದ ತನಿಖೆಯನ್ನು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಯಾವ ಸಂಸ್ಥೆ ನಡೆಸಿದರೂ ಅದರಿಂದ ಸತ್ಯ ಸಂಗತಿ ಖಂಡಿತ ಹೊರಬರಲಾರದು.