ಕರ್ನಾಟಕ

karnataka

ETV Bharat / state

ಸಂಸದೀಯ ಮೌಲ್ಯಗಳ ಕುಸಿತ ತಡೆ ನಿಟ್ಟಿನಲ್ಲಿ ಫೆ.24ರಂದು ಆತ್ಮಾವಲೋಕನ ಸಭೆ : ಸ್ಪೀಕರ್ ಕಾಗೇರಿ

ಈ ಸಭೆಗೆ ವಿಧಾನಮಂಡಲದ ಉಭಯ ಸದನಗಳ ಹಿಂದಿನ ಸಭಾಧ್ಯಕ್ಷರು, ಸಭಾಪತಿಗಳು, ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಹಿರಿಯ ಸದಸ್ಯರು, ಪತ್ರಕರ್ತರು, ಸಾಹಿತಿಗಳು, ಬರಹಗಾರರು, ಚಿಂತನಕಾರರು ಸೇರಿದಂತೆ 150 ಗಣ್ಯರನ್ನು ಆಹ್ವಾನಿಸಲಾಗಿದೆ..

Vishweshwar Hegde Kageri
ವಿಶ್ವೇಶ್ವರ ಹೆಗಡೆ ಕಾಗೇರಿ

By

Published : Feb 17, 2021, 7:38 PM IST

ಬೆಂಗಳೂರು :ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ವಿಧಾನಮಂಡಲದ ಕಲಾಪಗಳ ಸಂದರ್ಭಗಳಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕೆಂಬ ಸದುದ್ದೇಶದಿಂದ ಕಾಮನ್ ವೆಲ್ ಸಂಸದೀಯ ಸಂಘದ ವತಿಯಿಂದ ಫೆಬ್ರವರಿ 24ರಂದು ಆತ್ಮಾವಲೋಕನ ಸಭೆ ಹಮ್ಮಿಕೊಂಡಿದೆ.

ವಿಧಾನಸೌಧದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಫೆ. 24 ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರೊಂದಿಗೆ ಒಂದು ದಿನದ ಆತ್ಮಾವಲೋಕನ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಸಭೆಗೆ ವಿಧಾನಮಂಡಲದ ಉಭಯ ಸದನಗಳ ಹಿಂದಿನ ಸಭಾಧ್ಯಕ್ಷರು, ಸಭಾಪತಿಗಳು, ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಹಿರಿಯ ಸದಸ್ಯರು, ಪತ್ರಕರ್ತರು, ಸಾಹಿತಿಗಳು, ಬರಹಗಾರರು, ಚಿಂತನಕಾರರು ಸೇರಿದಂತೆ 150 ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಅದೇ ರೀತಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರು, ಶಾಸಕರು, ಸಂಸದರು ಎಲ್ಲರೂ ಹಾಜರಿರಲಿದ್ದಾರೆ. ಹಿರಿಯ ರಾಜಕೀಯ ಮುತ್ಸದ್ದಿಗಳಾದ ಎಸ್ ಎಂ‌ ಕೃಷ್ಣ, ಕಾಗೋಡು ತಿಮ್ಮಪ್ಪ, ಬಿ ಕೆ ಚಂದ್ರಶೇಖರ್, ಪಿಜಿಆರ್ ಸಿಂಧ್ಯಾ ಸೇರಿದಂತೆ ಹಿರಿಯ ರಾಜಕಾರಣಿಗಳೂ ಆಗಮಿಸಲಿದ್ದಾರೆ.

ಜಸ್ಟೀಸ್ ಫಣೀಂದ್ರ ಸೇರಿ ನಿವೃತ್ತ ನ್ಯಾಯಾಧೀಶರಿಗೂ ಆಹ್ವಾನ ನೀಡಲಾಗಿದ್ದು, ಮಾಧ್ಯಮ ಕ್ಷೇತ್ರದ ಎಲ್ಲಾ ಸಂಪಾದಕರನ್ನೂ ಕರೆದಿದ್ದೇವೆ ಎಂದರು. ಇತ್ತೀಚಿನ ದಿನಗಳಲ್ಲಿ ಸದನಗಳಲ್ಲಿ ಸಂಸದೀಯ ಮೌಲ್ಯಗಳು ಕುಸಿಯುತ್ತಿರುವ ಕಾರಣ ಈ ಆತ್ಮಾವಲೋಕನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವ ವಿಷಯಗಳನ್ನು ಹೇಗೆ ಚರ್ಚಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು.

ಇದರಿಂದ ಹೊಸದಾಗಿ ಆಯ್ಕೆಯಾಗಿ ಬಂದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕೆಂಬುದು ಎಲ್ಲರ ಸದುದ್ದೇಶ. ಆದರೆ, ಕೆಲವು ಸಂದರ್ಭಗಳಲ್ಲಿ ಗಲಾಟೆ, ಗದ್ದಲ, ಧರಣಿ ಕಾರಣಗಳಿಗಾಗಿ ಅಧಿವೇಶನವನ್ನು ಮೊಟಕುಗೊಳಿಸಲಾಗುತ್ತದೆ.

ಮುಂದೆ ಇದು ಮರುಕಳಿಸದಂತೆ ಆತ್ಮಾವಲೋಕನ ಸಭೆ ಆಯೋಜಿಸಲಾಗಿದೆ. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.

ABOUT THE AUTHOR

...view details