ಬೆಂಗಳೂರು: ಆರ್ಥಿಕ ಸಂಕಷ್ಟದ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಾ.08 ರಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಇತಿಹಾಸದ ಕುತೂಹಲಕಾರಿಯಾದ ಅಂಶಗಳ ಮೇಲಿನ ಹಿನ್ನೋಟ ಹೀಗಿದೆ.
ಕರ್ನಾಟಕ ಬಜೆಟ್ ಹಲವು ಅಚ್ಚರಿಗಳನ್ನು ಒಳಗೊಂಡಿದೆ. ಸಿಎಂ ಮಾರ್ಚ್. 08 ರಂದು ಎಂಟನೇ ಬಜೆಟ್ ಮಂಡಿಸಲಿದ್ದು, 21 ಕೋಟಿ ರೂ. ನಿಂದ ಪ್ರಾರಂಭವಾದ ರಾಜ್ಯದ ಬಜೆಟ್ ಯಾತ್ರೆ ಸದ್ಯಕ್ಕೆ 2.37 ಲಕ್ಷ ಕೋಟಿ ರೂ.ಗೆ ತಲುಪಿದೆ. ಈ ಬಾರಿ ಆರ್ಥಿಕ ಸಂಕಷ್ಟದ ಹಿನ್ನೆಲೆಯನ್ನು ಮೊದಲ ಬಾರಿಗೆ ಬಜೆಟ್ ಗಾತ್ರ ಕುಗ್ಗುವ ಆತಂಕ ಎದುರಾಗಿದೆ.
ಕೆಂಗಲ್ ಅವರಿಂದ ಮೊದಲ ಬಜೆಟ್ ಮಂಡನೆ:
ಕರ್ನಾಟಕ ಏಕೀಕರಣದ ಬಳಿಕ 1952 - 53ರಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಜ್ಯದ ಮೊದಲ ಮುಂಗಡ ಪತ್ರವನ್ನು ಮಂಡಿಸಿದ್ದರು. ಆಗಿನ ಆರ್ಥಿಕತೆಯ ಇತಿಮಿತಿಯೊಳಗೆ ಬರೇ 21.03 ಕೋಟಿ ರೂ.ಗಳ ಬಜೆಟ್ನ್ನು ಕೆಂಗಲ್ ಹನುಮಂತಯ್ಯ ತಯಾರಿಸಿದ್ದರು. ಹನುಮಂತಯ್ಯ ಒಟ್ಟು 4 ಬಜೆಟ್ ನೀಡಿದ್ದು, ಕಡೆಯ ಆಯವ್ಯಯದ ಗಾತ್ರ 30 ಕೋಟಿ ರೂ. ಆಗಿತ್ತು.
ಕೆಂಗಲ್ ನಂತರ ವಿತ್ತ ಸಚಿವರಾದ ಟಿ. ಮರಿಯಪ್ಪ 1957-58ರಲ್ಲಿ ಬಜೆಟ್ ಮಂಡಿಸಿದ್ದರು. ಆ ವೇಳೆಗೆ ಬಜೆಟ್ ಗಾತ್ರ 60.28 ಕೋಟಿ ರೂ.ಗೆ ಏರಿಕೆಯಾಗಿತ್ತು. ಆದರೆ ಮರು ವರ್ಷ ಮಂಡಿಸಿದ್ದ ಆಯವ್ಯಯದ ಗಾತ್ರವನ್ನು 50.82 ಕೋಟಿ ರೂ.ಗೆ ಕುಗ್ಗಿಸಿದ್ದರು.
ಬಜೆಟ್ ಗಾತ್ರ ಶತಕ ದಾಟಿಸಿದವರು ಯಾರು ಗೊತ್ತಾ?:
ಕೆಂಗಲ್ ತಾವು ಮಂಡಿಸಿದ್ದ ನಾಲ್ಕು ಬಜೆಟ್ ಗಾತ್ರವನ್ನು ನೂರು ಕೋಟಿ ಒಳಗೆ ಇಟ್ಟಿದ್ದರು. ಬಳಿಕ ಹಣಕಾಸು ಸಚಿವ ಟಿ.ಮರಿಯಪ್ಪ ಮಂಡಿಸಿದ್ದ ಬಜೆಟ್ ಗಾತ್ರ ನೂರ ಗಡಿ ಸಮೀಪ ಹೋಗಿತ್ತು. ರಾಜ್ಯದ ಬಜೆಟ್ ಗಾತ್ರವನ್ನು ಮೊದಲ ಬಾರಿಗೆ ಶತಕ ದಾಟಿಸಿದ ಕೀರ್ತಿ ಎಸ್.ಆರ್.ಕಂಠಿ ಅವರಿಗೆ ಸಲ್ಲುತ್ತದೆ. 1962-63ರಲ್ಲಿ ಏಕೈಕ ಬಜೆಟ್ ಮಂಡಿಸಿದ್ದ ಕಂಠಿಯವರು ಬಜೆಟ್ ಗಾತ್ರವನ್ನು 102.93 ಕೋಟಿ ರೂ. ಗಡಿ ದಾಟಿಸಿದ್ದರು.
ದ್ವಿಶತಕದ ಗಡಿ ದಾಟಿಸಿದ ಹೆಗಡೆ!:
ರಾಜ್ಯದ ಬಜೆಟ್ ಗಾತ್ರವನ್ನು ದ್ವಿಶತಕದ ಆಚೆಗೆ ಕೊಂಡೊಯ್ದ ಹೆಗ್ಗಳಿಕೆ ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ. 1966-67ರಿಂದ 1971-72ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಹೆಗಡೆಯವರು, 6 ಬಾರಿ ಬಜೆಟ್ ಮಂಡಿಸಿದ್ದರು. 1969-70 ಆಯವ್ಯಯದ ಗಾತ್ರವನ್ನು 226.48 ಕೋಟಿ ರೂ. ಗೆ ಏರಿಸುವ ಮೂಲಕ ಮೊದಲ ಬಾರಿಗೆ ಬಜೆಟ್ ಗಾತ್ರವನ್ನು ದ್ವಿಶತಕಕ್ಕೆ ಕೊಂಡೊಯ್ದಿದ್ದರು. ರಾಮಕೃಷ್ಣ ಹೆಗಡೆ ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಯನ್ನು ಹೊಂದಿದ್ದು, ಬರೋಬ್ಬರಿ 13 ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿದ್ದರು. ಸಿಎಂ ಆಗಿ ರಾಮಕೃಷ್ಣ ಹೆಗಡೆ ಅವರು 1985 - 86 ರಲ್ಲಿ ಮಂಡಿಸಿದ ಬಜೆಟ್ ಗಾತ್ರ 2,078 ಕೋಟಿ ರೂ. ಆಗಿತ್ತು. ಅದಾದ ಬಳಿಕ ಮಂಡಿಸಿದ ಬಜೆಟ್ ಗಾತ್ರವನ್ನು 3 ಸಾವಿರ ಕೋಟಿ ರೂ. ದಾಟಿಸುವ ಮೂಲಕ ದಾಖಲೆ ಬರೆದರು.
ಬಜೆಟ್ ಗಾತ್ರ ಸಾವಿರದ ಗಡಿ ದಾಟಿಸಿದ್ದು ಮೊಯ್ಲಿ:
ರಾಜ್ಯದ ಬಜೆಟ್ ಅನ್ನು ಸಾವಿರದ ಗಡಿ ದಾಟಿಸಿದ ಕೀರ್ತಿ ಆಗಿನ ವಿತ್ತ ಸಚಿವ ವೀರಪ್ಪ ಮೊಯ್ಲಿಗೆ ಸಲ್ಲುತ್ತದೆ. 1982-83 ರಲ್ಲಿ ಮೊಯ್ಲಿಯವರು 1,178 ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿದ್ದರು. ಬಳಿಕ ಎಂ. ರಾಜಶೇಖರಮೂರ್ತಿಯವರು 4 ಸಾವಿರ ಕೋಟಿ ರೂ. ಮೊತ್ತದ ಬಜೆಟ್ ಮೊತ್ತ ವಿಸ್ತರಿಸಿದ್ದರು. 1992-93 ರಲ್ಲಿ ಎಸ್. ಬಂಗಾರಪ್ಪ - 5677 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು.
10 ಸಾವಿರಕ್ಕೆ ಗಾತ್ರ ಹಿಗ್ಗಿಸಿದವರು ಸಿದ್ದರಾಮಯ್ಯ:
ರಾಜ್ಯದ ಬಜೆಟ್ ಗಾತ್ರವನ್ನು 10,000 ಸಾವಿರ ಕೋಟಿ ರೂ. ಗಾತ್ರ ಹಿಗ್ಗಿಸಿದ ಹಿರಿಮೆ ಸಿದ್ದರಾಮಯ್ಯಗೆ ಸಲ್ಲುತ್ತದೆ. ಅವರು 1995 - 96 ರಲ್ಲಿ 10,859 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದರು. 2000-01ರಲ್ಲಿ ಎಸ್.ಎಂ. ಕೃಷ್ಣ ಅವರು- 20,061 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. 2004-05 ರಲ್ಲಿ ಅವರು 30,285 ಕೋಟಿ ರೂ.ಗೆ ಬಜೆಟ್ ಗಾತ್ರವನ್ನು ಹಿಗ್ಗಿಸಿದರು. ಸಿದ್ದರಾಮಯ್ಯ ಅವರು 2017ರಲ್ಲಿ ಮಂಡಿಸಿದ ಬಜೆಟ್‌ನ ಗಾತ್ರ 1.86 ಲಕ್ಷ ಕೋಟಿ ರೂ. ಗಾತ್ರದ್ದಾಗಿತ್ತು. 2018-19 ಸಿದ್ದರಾಮಯ್ಯ ಅವರೇ ಮಂಡಿಸಿದ್ದ ಬಜೆಟ್ 2 ಲಕ್ಷ ರೂಪಾಯಿಯನ್ನು ದಾಟಿತ್ತು. ರಾಮಕೃಷ್ಣ ಹೆಗಡೆಗೆ ಸರಿ ಸಮಾನವಾಗಿ ಅತೀ ಹೆಚ್ಚು ಅಂದರೆ 13 ಬಾರಿ ಬಜೆಟ್ ಮಂಡಿಸಿದ ಹಿರಿಮೆ ಸಿದ್ದರಾಮಯ್ಯಗೆ ಸಲ್ಲುತ್ತದೆ.
50,000 ಕೋಟಿ ರೂ. ಗಡಿ ದಾಟಿಸಿದವರು ಬಿಎಸ್ವೈ:
ರಾಜ್ಯದ ಬಜೆಟ್ ಗಾತ್ರವನ್ನು 50 ಸಾವಿರ ಕೋಟಿಯ ಗಡಿ ದಾಟಿಸಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ. ಅವರು 2008 - 09ರಲ್ಲಿ ಮಂಡಿಸಿದ ಬಜೆಟ್ ಗಾತ್ರ 55,313 ಕೋಟಿ ರೂ.ಗೆ ತಲುಪಿತ್ತು.
ಲಕ್ಷ ಕೋಟಿಯ ಗಡಿ ದಾಟಿಸಿದವರು ಡಿವಿಎಸ್:
ರಾಜ್ಯದ ಬಜೆಟ್ ಮೊದಲ ಬಾರಿಗೆ ಲಕ್ಷ ಕೋಟಿಯ ಗಡಿ ದಾಟಿಸಿದ್ದ ಅಂದಿನ ಸಿಎಂ ಡಿ.ವಿ.ಸದಾನಂದ ಗೌಡ. ಸದಾನಂದಗೌಡ ಅವರು ಮುಖ್ಯಂಮಂತ್ರಿಯಾಗಿದ್ದಾಗ ರಾಜ್ಯದ ಬಜೆಟ್ ಮೊದಲ ಬಾರಿಗೆ 1 ಲಕ್ಷ ಕೋಟಿ ರೂಪಾಯಿ ದಾಟಿತ್ತು. 2012-13 ರಲ್ಲಿ ಡಿ.ವಿ. ಸದಾನಂದಗೌಡ 1.02 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಈ ಮೂಲಕ ಬಜೆಟ್‌ನ ಮೊತ್ತ ಲಕ್ಷ ಕೋಟಿ ರೂ. ದಾಟುವಂತಾಗಿತ್ತು. ಅಲ್ಲಿಂದೀಚೆಗೆ ಬಜೆಟ್ ಗಾತ್ರವನ್ನು ಲಕ್ಷದ ಕೋಟಿಯಲ್ಲಿ ಲೆಕ್ಕಾಚಾರ ಮಾಡಲಾಗುತ್ತಿದೆ.
ಯಾರೆಲ್ಲ ಎಷ್ಟು ಬಜೆಟ್ ಮಂಡಿಸಿದ್ದಾರೆ?:
ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿ ರಾಮಕೃಷ್ಣ ಹೆಗಡೆಯವರಿಗೆ ಸಲ್ಲುತ್ತದೆ. ಇವರು ಬರೋಬ್ಬರಿ 13 ಬಾರಿ ಬಜೆಟ್ ಮಂಡಿಸಿದ್ದು, ಅವರ ಬಳಿಕ ಅದೇ ಸಾಧನೆಯನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಹಣಕಾಸು ಸಚಿವರಾಗಿ ರಾಮಕೃಷ್ಣ ಹೆಗಡೆ 6 ಆಯವ್ಯಯ ಕೊಟ್ಟಿದ್ದರು. ಬಳಿಕ ಮುಖ್ಯಮಂತ್ರಿಯಾಗಿ 1983 - 84ರಿಂದ 1988-89ರ ವರೆಗೆ 7 ಬಜೆಟ್ ಮಂಡಿಸುವ ಮೂಲಕ ಒಟ್ಟಾರೆ 13 ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಡಿಸಿಎಂ ಆದಾಗಿನಿಂದ ಈವರೆಗೆ 13 ಬಜೆಟ್ ಮಂಡಿಸಿದ್ದಾರೆ.
ಯಡಿಯೂರಪ್ಪ ಈವರೆಗೆ ಒಟ್ಟು ಏಳು ಬಜೆಟ್ ಮಂಡಿಸಿದ್ದಾರೆ. ಮಾರ್ಚ್ 8ರಂದು ಎಂಟನೇ ಬಜೆಟ್ ಮಂಡಿಸಲಿದ್ದಾರೆ. ಆ ಮೂಲಕ 8 ಬಜೆಟ್ ಮಂಡಿಸಿ ಮೂರನೇ ಅತೀ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಲಿದ್ದಾರೆ.
ರಾಜ್ಯದ ಬಜೆಟ್ ಇತಿಹಾಸ ಹೀಗಿದೆ:
- 1952-53- ಕೆಂಗಲ್ ಹನುಮಂತಯ್ಯ - 21 ಕೋಟಿ ರೂ.
- 1962-63 - ಎಸ್.ಆರ್. ಕಂಠಿ - 102 ಕೋಟಿ ರೂ.
- 1969-70- ರಾಮಕೃಷ್ಣ ಹೆಗಡೆ - 226 ಕೋಟಿ ರೂ.
- 1973-74- ಎಂ.ವೈ. ಘೋರ್ಪಡೆ - 397 ಕೋಟಿ ರೂ.
- 177-78- ಎಂ.ವೈ. ಘೋರ್ಪಡೆ - 570 ಕೋಟಿ ರೂ.
- 1982-83- ಎಂ. ವೀರಪ್ಪ ಮೊಯ್ಲಿ - 1,178 ಕೋಟಿ ರೂ.
- 1985-86- ರಾಮಕೃಷ್ಣ ಹೆಗಡೆ - 2,078 ಕೋಟಿ ರೂ.
- 1988-89- ರಾಮಕೃಷ್ಣ ಹೆಗಡೆ - 3,106 ಕೋಟಿ ರೂ.
- 1990-91- ಎಂ.ರಾಜಶೇಖರಮೂರ್ತಿ-4,010ಕೋಟಿ ರೂ.
- 1992-93- ಎಸ್. ಬಂಗಾರಪ್ಪ - 5,677 ಕೋಟಿ ರೂ.
- 1995-96- ಸಿದ್ದರಾಮಯ್ಯ - 10,859 ಕೋಟಿ ರೂ.
- 2000-01- ಎಸ್.ಎಂ. ಕೃಷ್ಣ - 20,061 ಕೋಟಿ ರೂ.
- 2004-05-ಎಸ್.ಎಂ. ಕೃಷ್ಣ - 30,285 ಕೋಟಿ ರೂ.
- 2008-09- ಯಡಿಯೂರಪ್ಪ - 55,313 ಕೋಟಿ ರೂ.
- 2012-13- ಸದಾನಂದಗೌಡ - 1,02,742 ಕೋಟಿ ರೂ.
- 2015-16- ಸಿದ್ದರಾಮಯ್ಯ- 1,42,534 ಕೋಟಿ ರೂ.
- 2016-17- ಸಿದ್ದರಾಮಯ್ಯ- 1,63,419 ಕೋಟಿ ರೂ.
- 2017-18- ಸಿದ್ದರಾಮಯ್ಯ- 1,86, 561 ಕೋಟಿ ರೂ.
- 2018-19- ಸಿದ್ದರಾಮಯ್ಯ- 2.14 ಲಕ್ಷ ಕೋಟಿ ರೂ.
- 2019-20- ಕುಮಾರಸ್ವಾಮಿ- 2.34 ಲಕ್ಷ ಕೋಟಿ ರೂ.
- 2020-21-ಯಡಿಯೂರಪ್ಪ- 2.37 ಲಕ್ಷ ಕೋಟಿ ರೂ.