ಕರ್ನಾಟಕ

karnataka

ETV Bharat / state

ಡಿಕೆಶಿಗೆ ಒಲಿಯುತ್ತಾ ಮಹತ್ವದ ಹುದ್ದೆ? ಹೈಕಮಾಂಡ್​ ಮಾಸ್ಟರ್​ ಪ್ಲ್ಯಾನ್​ ಏನು? - An important post for DKS

ಮೂಲ ಕಾಂಗ್ರೆಸಿಗರಲ್ಲಿ ಸದ್ಯ ಉಳಿದುಕೊಂಡಿರುವ ಪ್ರಬಲ ವ್ಯಕ್ತಿ ಇವರೇ ಆಗಿದ್ದಾರೆ. ಜನ ಬಲ ಹಣಬಲ ಹಾಗೂ ಪ್ರಬಲ ಸಮುದಾಯದ ಹಿನ್ನೆಲೆ ಹೊಂದಿರುವ ಕಾರಣ ಹೈಕಮಾಂಡ್ ಡಿಕೆಶಿಗೆ ಮಣೆ ಹಾಕಲು ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಮಾಜಿ ಸಚಿವ ಡಿಕೆ ಶಿವಕುಮಾರ್​

By

Published : Nov 5, 2019, 10:12 PM IST

ಬೆಂಗಳೂರು: ದೆಹಲಿ ಹೈಕೋರ್ಟ್ ಜಾಮೀನಿನ ಹಿನ್ನೆಲೆ ತಿಹಾರ್ ಜೈಲಿನಿಂದ ಹೊರ ಬಂದಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಪಕ್ಷದ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಲು ಮುಂದಾಗಿದೆಯಾ ಎಂಬ ಮಾತುಗಳು ವ್ಯಕ್ತವಾಗುತ್ತಿದೆ.

ರಾಜ್ಯ ರಾಜಕಾರಣದ ಪಾಲಿಗೆ ಡಿಕೆ ಶಿವಕುಮಾರ್ ಅತ್ಯಂತ ಮಹತ್ವದ ಹಾಗೂ ಪ್ರಮುಖ ವ್ಯಕ್ತಿಯಾಗಿ ಮೊದಲಿನಿಂದಲೂ ಗುರುತಿಸಿಕೊಂಡು ಬಂದಿದ್ದು, ಮೂಲ ಕಾಂಗ್ರೆಸಿಗರಲ್ಲಿ ಸದ್ಯ ಉಳಿದುಕೊಂಡಿರುವ ಪ್ರಬಲ ವ್ಯಕ್ತಿ ಇವರೇ ಆಗಿದ್ದಾರೆ. ಜನ ಬಲ ಹಣಬಲ ಹಾಗೂ ಪ್ರಬಲ ಸಮುದಾಯದ ಹಿನ್ನೆಲೆ ಹೊಂದಿರುವ ಕಾರಣ ಹೈಕಮಾಂಡ್ ಡಿಕೆಶಿಗೆ ಮಣೆ ಹಾಕಲು ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ರಾಜ್ಯದಲ್ಲಿ ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ಹವಾ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಇದೇನಾದರೂ ಕೊಂಚ ಹೋಗಬೇಕೆಂದರೆ ಅದು ಶಿವಕುಮಾರ್ ಇಂದ ಮಾತ್ರ ಸಾಧ್ಯ ಎಂಬ ನಿಲುವಿಗೆ ಹೈಕಮಾಂಡ್ ಬಂದಿದೆ. ಈಗಾಗಲೇ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್, ಮಾಜಿ ಸಚಿವ ಎಚ್​.ಕೆ ಪಾಟೀಲ್ ಹಾಗೂ ಎಂ.ಬಿ ಪಾಟೀಲ್​ನ್ನು ಮುಂಚೂಣಿಗೆ ತರುವ ಯತ್ನದಲ್ಲಿ ಪಕ್ಷದ ಹೈಕಮಾಂಡ್ ಸಂಪೂರ್ಣ ವಿಫಲವಾಗಿದ್ದು, ಕಳೆದ ಆರೇಳು ವರ್ಷಗಳಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಏಕ ಚಕ್ರಾಧಿಪತಿ ಯಾಗಿ ಮೆರೆದಿದ್ದಾರೆ. ಇದೀಗ ಅವರಿಗೆ ಪರ್ಯಾಯ ನಾಯಕತ್ವ ಬೆಳೆಸುವ ಚಿಂತನೆಯಲ್ಲಿ ಕೈ ಪಾಳಯ ಇದ್ದು, ಆದ್ದರಿಂದ ಸದ್ಯ ಕಳಂಕ ಹೊತ್ತಿದ್ದರೂ ಡಿಕೆ ಶಿವಕುಮಾರ್​ಗೆ ಮಣೆ ಹಾಕಲು ಪಕ್ಷ ಮುಂದಾಗಿದೆ.

ಅಂದಹಾಗೆ ಸುಪ್ರೀಂ ಕೋರ್ಟ್ ನಲ್ಲಿ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸುವ ಅರ್ಜಿ ವಿಚಾರಣೆಗೆ ಬರಲಿದೆ. ಅಲ್ಲಿ ಕೂಡ ಶಿವಕುಮಾರ್ ಪರವಾಗಿಯೇ ತೀರ್ಪು ಬಂದ ಸಂದರ್ಭದಲ್ಲಿ, ಆಗ ಅವರಿಗೆ ರಾಜ್ಯದಲ್ಲಿ ಪ್ರಮುಖ ಜವಾಬ್ದಾರಿ ವಹಿಸಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ.

ಕೆಪಿಸಿಸಿ ಮೇಲೆ ಕಣ್ಣು:ಒಂದೊಮ್ಮೆ ತಮ್ಮ ಮೇಲಿರುವ ಎಲ್ಲಾ ಪ್ರಕರಣಗಳಿಂದ ಕೆಲವೇ ತಿಂಗಳಲ್ಲಿ ಶಿವಕುಮಾರ್ ಕ್ಲೀನ್ ಚಿಟ್ ಪಡೆದು ಆಚೆ ಬಂದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಪ್ರಬಲ ಉಮೇದುವಾರರಾಗಲಿದ್ದಾರೆ. ಇದು ಅಷ್ಟು ಸುಲಭ ಸಾಧ್ಯ ಅಲ್ಲದಿದ್ದರೂ ಶಿವಕುಮಾರ್​ಗೆ ಹೈಕಮಾಂಡ್ ನೀಡಬಹುದಾದ ಹುದ್ದೆ ಇದೊಂದು ಮಾತ್ರ ಆಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣ ಎಂದು ಲಿಖಿತ ಮಾಹಿತಿ ನೀಡಿರುವ ದಿನೇಶ್ ಗುಂಡೂರಾವ್ ಪರೋಕ್ಷವಾಗಿ ರಾಜೀನಾಮೆ ನೀಡಲು ಸಿದ್ಧ ಎಂದು ತಿಳಿಸಿದ್ದರು. ಆದರೆ ಸಿದ್ದರಾಮಯ್ಯರ ಶ್ರೀರಕ್ಷೆ ಇರುವ ಹಿನ್ನೆಲೆ ಈಗಲೂ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಒಂದೊಮ್ಮೆ ಶಿವಕುಮಾರ್ ಕಳಂಕರಹಿತ ರಾಗಿ ಹೊರಬರುವ ಅವಕಾಶ ಸಿಕ್ಕರೆ, ನೇರವಾಗಿ ಅವರ ಆಯ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಗಿರಲಿದೆ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಘೋಷಣೆಯಾದರೆ ಅಥವಾ ಮುಂದಿನ 2023ರ ವಿಧಾನಸಭೆ ಚುನಾವಣೆ ಹೊತ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರೆ, ಬಿ.ಫಾರಂ ನೀಡುವ ಅವಕಾಶ ಸಿಗಲಿದೆ. ಅಲ್ಲದೆ ಪಕ್ಷಕ್ಕೆ ಜನಬೆಂಬಲ ಸಿಕ್ಕರೆ, ಸರ್ಕಾರ ರಚಿಸುವ ಸಾಮರ್ಥ್ಯ ಲಭಿಸಿದರೆ, ಪಕ್ಷದ ಹಿಂದಿನ ಇತಿಹಾಸದಂತೆ ಕೆಪಿಸಿಸಿ ಅಧ್ಯಕ್ಷರಾದ ಅವರಿಗೆ ಸಿಎಂ ಆಗುವ ಅವಕಾಶ ಲಭಿಸಲಿದೆ. ಅಂಥದ್ದೊಂದು ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಿರಲು ಡಿಕೆಶಿ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿದ್ದಾರೆ. ಈ ಪ್ರಯತ್ನಕ್ಕೆ ಫಲ ಸಿಕ್ಕರೆ ಹಾಗೂ ನ್ಯಾಯಾಲಯದಲ್ಲಿ ಎಲ್ಲಾ ಪ್ರಕರಣಗಳು ಇತ್ಯರ್ಥ ವಾದರೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷಗಾದಿಗೆ ಏರುವುದರಲ್ಲಿ ಸಂಶಯವಿಲ್ಲ.

ABOUT THE AUTHOR

...view details