ಕರ್ನಾಟಕ

karnataka

ETV Bharat / state

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ.. ಇಂದು ಕೈ ನಾಯಕರ ಮಹತ್ವದ ಸಭೆ - ETV Bharat kannada News

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಇಂದು ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯಲಿದೆ.

KPCC President DK Sivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

By

Published : Feb 2, 2023, 11:53 AM IST

Updated : Feb 2, 2023, 1:36 PM IST

ವಿಧಾನಸಭೆ ಚುನಾವಣೆ ಸಂಬಂಧ ಚರ್ಚೆಗೆ ಕಾಂಗ್ರೆಸ್ ನಾಯಕರ ಮಹತ್ವದ ಸಭೆ

ಬೆಂಗಳೂರು : ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಿನ್ನಲೆ ಇಂದು ಸಭೆಯನ್ನು ನಡೆಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್​ಗೆ ತೆರಳುವ ಮುನ್ನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದ ಪಟ್ಟಿ ಫೈನಲ್ ಮಾಡಿ ಕೇಂದ್ರ ಚುನಾವಣೆ ಸಮಿತಿಗೆ ಕಳುಹಿಸುತ್ತೇವೆ. ಅವರು ಅಂತಿಮವಾಗಿ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದು ವಿವರಿಸಿದರು.

ಚುನಾವಣೆ ಹತ್ತಿರವಾಗುತ್ತಿದಿಯಲ್ಲ ಅದಕ್ಕಾಗಿ ಪ್ರಧಾನಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಬರಲಿ ಅವರನ್ನು ಬರಬೇಡಿ ಎಂದು ಹೇಳಲಾಗುತ್ತಾ? ಅವರ ಪಕ್ಷದ ಪರ ಅವರು ಪ್ರಚಾರ ಮಾಡುತ್ತಾರೆ. ಆದರೆ ಬಜೆಟ್ ನಲ್ಲಿ ರಾಜ್ಯಕ್ಕೆ ಏನು ಕೊಟ್ಟಿಲ್ಲ. ಹಣಕಾಸು ಸಚಿವೆ ನಮ್ಮ ರಾಜ್ಯದವರು ಅವರು ಕರ್ನಾಟಕಕ್ಕೆ ಬೂಸ್ಟ್ ನೀಡುತ್ತಾರೆ ಎಂದು ತಿಳಿದಿದ್ವಿ. ಆದರೆ ಏನು ನೀಡಿಲ್ಲ ಎಂದು ಬಜೆಟ್​ ಮಂಡನೆ ವಿರುದ್ಧ ಅಸಮಾಧಾನ ಹೊರಹಾಕಿದರು.

ಇಂದಿನ ಸಭೆಗೆ ಪ್ರತಿ ಜಿಲ್ಲೆಯಿಂದ ಎಐಸಿಸಿ ಸೆಕ್ರೆಟರಿ ಗಳು, ಕಾರ್ಯಾಧ್ಯಕ್ಷರು ಸಭೆ ಮಾಡಿ ವರದಿ ಕೊಟ್ಟಿದ್ದಾರೆ. ದೆಹಲಿಯವರು ನಾವು ಪ್ರತ್ಯೇಕ ಸರ್ವೆ ಮಾಡಿಸಿದ್ದೇವೆ. ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಾವು ನಿರ್ಣಯ ಮಾಡುತ್ತೇವೆ. ಬಹುತೇಕ ಎಲ್ಲ ಶಾಸಕರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಟಿಕೇಟ್ ಹಂಚಿಕೆಯಲ್ಲಿ ಯಾವುದೇ ಸವಾಲು ಗೊಂದಲ ಇಲ್ಲ ಎಂದು ಡಿಕೆಸಿ ತಮ್ಮ ಪಕ್ಷದಲ್ಲಿರುವ ಕೆಲವು ಗೊಂದಲಗಳ ಬಗ್ಗೆ ಸ್ಪಷ್ಟಪಡಿಸಿದರು.

ಅರ್ಜಿ ಹಾಕಿದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಅಧಿಕಾರ ಬರುವಾಗ ಎಲ್ಲರೂ ಕೆಲಸ ಮಾಡಬೇಕು. ಅಧಿಕಾರ ಬಂದ ಮೇಲೆ ಸ್ಥಾನ ಮಾನಗಳನ್ನು ನೀಡುವುದು ಇದ್ದೇ ಇದೆ ಎಂದರು. ಇದೇ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು. ಅವರ ಪಕ್ಷ ಅವರ ಸಿದ್ಧಾಂತ ಅವರದ್ದು. ನಮ್ಮದು ಇತಿಹಾಸ ಇರುವ ಪಾರ್ಟಿ. ನಾವು ಬಡವರ ಪರ ಚಿಂತನೆ ಮಾಡುತ್ತೇವೆ. ಅವರಿಗೂ ಒಳ್ಳೆದಾಗಲಿ, ಶುಭವಾಗಲಿ ಎಂದು ಹೇಳಿದರು.

ಚೆಲುವರಾಯಸ್ವಾಮಿ ವಾಗ್ದಾಳಿ : ರಮೇಶ್ ಜಾರಕಿಹೊಳಿ ವಿರುದ್ದ ಮಾಜಿ ಸಚಿವ ಚೆಲುವ ರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. ರಮೇಶ್ ಜಾರಕಿಹೊಳಿ ಪಾಪ ಸರ್ಕಾರ ಬೀಳಿಸಿ ಮಂತ್ರಿ ಆಗಿದ್ದರು. ಮತ್ತೆ ಚುನಾವಣೆ ಹತ್ತಿರ ಬಂತು ಮಂತ್ರಿ ಆಗುತ್ತಿನಿ ಅಂತ ಸಿಪಿ ಯೋಗೇಶ್ವರ್ ಮತ್ತು ಜಾರಕಿಹೊಳಿ ಏನೇನೋ ಕಸರತ್ತು ಮಾಡಿದರೂ. ಆದ್ರೂ ಮಂತ್ರಿ ಆಗುತ್ತಿಲ್ಲ. ನಮ್ಮ ಅಧ್ಯಕ್ಷರು ಡಿಕೆಶಿವಕುಮಾರ್ ಅವರನ್ನು ಏನೋ ಮಾಡುವುದು ಅಷ್ಟು ಸುಲಭಾನೂ ಅಲ್ಲ. ಸುಮ್ನೆ ಬಾಯಿ ಚಪಲಕ್ಕೆ ಮಾತಾಡಬೇಕಷ್ಟೇ ಜಾರಕಿಹೊಳಿ ಎಂದಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆ ಗೆಲುವಿಗೆ ಕಾರ್ಯತಂತ್ರ ಹೆಣೆಯುವ ಮಹತ್ವದ ಸಭೆಯನ್ನು ಕಾಂಗ್ರೆಸ್ ನಾಯಕರು ಇಂದು ನಡೆಸಲಿದ್ದಾರೆ. ಬೆಳಗ್ಗೆ ದೇವನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್​ನಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು, ಹಿರಿಯ ಶಾಸಕರು ಪಾಲ್ಗೊಳ್ಳಲಿದ್ದಾರೆ.

ಮುಂಬರುವ ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾಯಕರು ಕೈಗೊಳ್ಳ ಬೇಕಾಗಿರುವ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಲೋಕಸಭಾ ಕ್ಷೇತ್ರವಾರು ನೇಮಕಗೊಂಡಿರುವ ವೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಯ ಮೇಲೆ ನಿಗಾ ವಹಿಸಬೇಕಿದೆ. ಇದರ ಸಮರ್ಪಕ ನಿರ್ವಹಣೆಯನ್ನು ಶಾಸಕರು ಇಲ್ಲವೇ ಆ ಭಾಗದ ಮಾಜಿ ಸಚಿವರಿಗೆ ವಹಿಸುವ ನಿರ್ಧಾರ ಸಹ ಇಂದು ಆಗಲಿದೆ.

ಯಾವುದೇ ರೀತಿಯ ಬೆಳವಣಿಗೆಗಳು ವಿಧಾನ ಸಭೆ ಕ್ಷೇತ್ರದಲ್ಲಿ ನಡೆದರೂ ಅದನ್ನು ತಕ್ಷಣಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಮಾಹಿತಿ ತಲುಪಿಸಬೇಕಿದೆ. ಅಭ್ಯರ್ಥಿಗಳ ಆಯ್ಕೆಯಿಂದ ಆರಂಭಗೊಂಡು ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿನವರೆಗೂ ಇವರು ನಿರಂತರವಾಗಿ ತಮಗೆ ವಹಿಸಿರುವ ಕ್ಷೇತ್ರ ವ್ಯಾಪ್ತಿಯಲ್ಲಿದ್ದು ಕಾರ್ಯನಿರ್ವಹಿಸುವಂತೆ ಇಂದಿನ ಸಭೆಯಲ್ಲಿ ಶಾಸಕರು ಹಾಗೂ ಮಾಜಿ ಸಚಿವರಿಗೆ ಸೂಚಿಸಲಾಗುವುದು.

ಸೂಚಿಸಲಾದ ಸಚಿವರು ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಇದ್ದು ಅದರ ವ್ಯಾಪ್ತಿಯಲ್ಲಿ ಬರುವ ವಿಧಾನಸಭೆ ಕ್ಷೇತ್ರಗಳ ಮೇಲೆ ಸಂಪೂರ್ಣ ನಿಗಾ ಹಾಗೂ ನಿಯಂತ್ರಣ ವಹಿಸುವಂತೆ ಸೂಚನೆ ನೀಡಲಾಗುತ್ತದೆ. ಒಟ್ಟಾರೆ ಇಂದಿನ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಗೆಲುವಿಗೆ ಕಾಂಗ್ರೆಸ್ ಇನ್ನೊಂದು ಹಂತದ ಮಹತ್ವದ ಕಾರ್ಯಾಚರಣೆಯ ಚರ್ಚೆ ನಡೆಯಲಿದೆ. ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕಾದ ಗುರಿ ಪಡೆದಿರುವ ಕಾಂಗ್ರೆಸ್ ರಾಜ್ಯ ನಾಯಕರಿಗೆ ಒಗ್ಗಟ್ಟಾಗಿರುವಂತೆಯೂ ಹಿರಿಯ ನಾಯಕರು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಸಜ್ಜಾಗುತ್ತಿದ್ದಾರೆ. ನಾಳೆ ಯಾತ್ರೆ ಆರಂಭವಾಗಲಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಕ್ಷಿಣ ಕರ್ನಾಟಕ ಭಾಗದಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ.

ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ 2013ರಲ್ಲಿ ಕಾಂಗ್ರೆಸ್​ಗೆ ಪಾದಯಾತ್ರೆಯೇ ಯಶಸ್ಸು ತಂದುಕೊಟ್ಟಿತ್ತು. ಈ ನಿಟ್ಟಿನಲ್ಲಿ ಈ ಸಾರಿಯೂ ಮೇಕಾದಾಟು ಯೋಜನೆಗಾಗಿ ಪಾದಯಾತ್ರೆ ನಡೆದಿದೆ. ಅಲ್ಲದೇ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಅತ್ಯಂತ ಯಶಸ್ಸು ಕಂಡಿದೆ. ಇದೀಗ ಮೊದಲ ಹಂತದ ಬಸ್ ಯಾತ್ರೆ ಸಫಲತೆ ಸಾಧಿಸಿದ್ದು, ಎರಡನೇ ಹಂತವನ್ನೂ ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಅದಕ್ಕೆ ಪಕ್ಷದ ಹೈಕಮಾಂಡ್ ನಾಯಕರ ಬೆಂಬಲ ಸಹ ಸಿಕ್ಕಿದೆ.

ಇಂದಿನ ಸಭೆಯಲ್ಲಿ ಎರಡನೇ ಹಂತದ ಬಸ್ ಯಾತ್ರೆ ಯಶಸ್ವಿಯಾಗಿಸುವ, ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಒಮ್ಮತ ಲಭಿಸುವಂತೆ ಮಾಡುವ ಯತ್ನಕ್ಕೆ ಗಂಭೀರ ಗಮನ ಹರಿಸುವಂತೆ ಹೈಕಮಾಂಡ್ ನಾಯಕರು ಸೂಚಿಸುವ ಸಾಧ್ಯತೆ ಇದೆ. ಯಾತ್ರೆ ಜೊತೆಯಲ್ಲೇ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸುವ ಪ್ರಕ್ರಿಯೆಯನ್ನೂ ರಾಜ್ಯ ನಾಯಕರು ಮಾಡಬೇಕಿದೆ.

ಇದನ್ನೂ ಓದಿ :ಸಿಎಂ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್, ಬಿಜೆಪಿ ಹಿಂದೇಟು: ಸಾರಥಿ ಇಲ್ಲದೇ ಚುನಾವಣೆ ಗೆಲ್ಲಲು ಕಸರತ್ತು!

Last Updated : Feb 2, 2023, 1:36 PM IST

ABOUT THE AUTHOR

...view details